ಬೆಂಗಳೂರು: ನಿವೆಟ್ಟಿ ಸಂಸ್ಥೆ ದೇಶೀಯವಾಗಿ ವಿನ್ಯಾಸಗೊಳಿಸಿದ ದೇಶ ಅತೀ ವೇಗದ 2.4 ಟಿಬಿಪಿಎಸ್ ರೂಟರ್ ಅನ್ನು ಕೇಂದ್ರ ರೈಲು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅನಾವರಣಗೊಳಿಸಿದರು.
ಶನಿವಾರ ಜೆಪಿ ನಗರದ 2ನೇ ಹಂತದಲ್ಲಿರುವ ನಿವೆಟ್ಟಿ ಸಿಸ್ಟಮ್ಸ್ ಪ್ರೈ.ಲಿ. ಕಂಪನಿಯಲ್ಲಿ ಆಯೋಜಿಸಿದ್ದ ಭಾರತದ ಅತ್ಯಂತ ವೇಗವಾದ ಮತ್ತು ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಐಪಿ/ಎಂಪಿಎಲ್‌ಎಸ್ ರೂಟರ್‌ಗೆ ಉಪಯೋಗಿಸುವ ಉತ್ಪನ್ನಗಳನ್ನು ಕೇಂದ್ರ ಸಚಿವರು ಬಿಡುಗಡೆಗೊಳಿಸಿದರು. ಆ ಬಳಿಕ ಮಾತನಾಡಿದ ಕೇಂದ್ರ ಸಚಿವರು, ದೇಶೀಯವಾಗಿ 2.4 ಟಿಬಿಪಿಎಸ್ ರೂಟರ್‌ನ್ನು ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸಿವುದು ನಿಜವಾಗಿಯೂ ಭಾರತದ ಪಾಲಿಗೆ ಮಹತ್ತರ ಸಾಧನೆಯಾಗಿದೆ ಎಂದು ತಿಳಿಸಿದರು.
ನಿವೆಟ್ಟಿ ಸಂಸ್ಥೆ ಸೆಕೆಂಡಿಗೆ 2.4 ಟೆರಾ ಬೈಟ್ ಸಾಮರ್ಥ್ಯವುಳ್ಳ ಸ್ಥಳೀಯವಾಗಿ ತಯಾರಿಸಿದ ಸುರಕ್ಷಿತ, ಕೋರ್ ರೂಟರ್‌ನ್ನು ಅಭಿವೃದ್ಧಿಪಡಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಡಿಜಿಟಲ್ ಇಂಡಿಯಾಗೆ ಕೋರ್ ರೂಟರ್ ಬಹಳ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಿವೆಟ್ಟಿ ಸಂಸ್ಥೆ ಭಾರತದ ಮೊದಲ ಸಂಪೂರ್ಣ ಸ್ವದೇಶಿ ಮತ್ತು ಸುರಕ್ಷಿತ ನೆಟ್‌ವರ್ಕ್ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸಿದ್ದು, ಇದು ತನ್ನ ಎಲ್ಲಾ ರೂಟಿಂಗ್, ಸ್ವಿಚ್ಚಿಂಗ್ ಮತ್ತು ಕಸ್ಟಮ್ಸ್ ನೆಟ್‌ವರ್ಕಿಂಗ್ ಉತ್ಪನ್ನಗಳಿಗೆ ಶಕ್ತಿ ನೀಡುತ್ತದೆ. ಅಷ್ಟೇ ಅಲ್ಲ ಎನ್‌ಐಒಎಸ್‌ನ್ನು ಡಿಆರ್‌ಡಿಒ, ಎಸ್‌ಎಜಿ ಹಾಗೂ ಎಸ್‌ಟಿಕ್ಯೂಸಿ ಸೇರಿದಂತೆ ಭದ್ರತಾ ಮೌಲ್ಯಮಾಪನ ಮಾಡಲಾಗಿದೆ. ಡಿಆರ್‌ಡಿಒ- ಎನ್‌ಜಿಓ ಭದ್ರತಾ ಪರೀಕ್ಷಯನ್ನು ಯಶಸ್ವಿಯಾಗಿ ಪೂರೈಸಿದೆ ಏಕೈಕ ಖಾಸಗಿ ಸಂಸ್ಥೆ ನಿಟ್ಟೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.
ನಮ್ಮದು ಉತ್ತಮ ಸೇವಾ ವಲಯ ಹೊಂದಿರುವ ರಾಷ್ಟ್ರವಾಗಿದೆ. ನಾವು ಸೇವಾ ವಲಯದಲ್ಲಿ ಇನ್ನಷ್ಟು ಏಳಿಗೆ ಕಾಣುವುದನ್ನು ಮುಂದುವರೆಸಲಿದ್ದೇವೆ. ಸಮಾನಾಂತರವಾಗಿ ಉತ್ಪನ್ನ ರಫ್ತು ಮಾಡುವ ಮತ್ತು ಉತ್ಪಾದನಾ ವಲಯದಲ್ಲಿ ಮತ್ತಷ್ಟು ಪ್ರಗತಿ ಕಾಣಲು ಪ್ರಯತ್ನಗಳು ಇನ್ನಷ್ಟು ನಡೆಯಲಿದೆ ಎಂದು ಸಚಿವರು ಹೇಳಿದರು. ಕಾರ್ಯಕ್ರಮದಲ್ಲಿ ನಿವೆಟ್ಟಿ ಕಂಪನಿಯ ಕಾರ್ಯದರ್ಶಿ ನೀರಜ್ ಮಿತ್ತಲ್ ಸೇರಿದಂತೆ ಇತರರಿದ್ದರು.
ಇದನ್ನೂ ಓದಿ: ಆರು ತಿಂಗಳಲ್ಲಿ ವಂದೇ ಭಾರತ್ ರೈಲಿನಲ್ಲಿ ಸ್ಲೀಪರ್ ಕೋಚ್: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್