ಬೆಂಗಳೂರು : ಬಾಲಕಿಯರು ಮಾತ್ರವಲ್ಲದೇ ಬಾಲಕರ ಮೇಲೆಯೂ ಲೈಂಗಿಕ ದೌರ್ಜನ್ಯಗಳಾಗುತ್ತಿವೆ. ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಇಂತಹ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದು ವಿಕೃತ ಮನಸ್ಥಿತಿ ವ್ಯಕ್ತಿತ್ವಗಳಿಗೆ ಹಿಡಿದ ಕೈಗನ್ನಡಿಯಾಗಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಸರಿ ಸುಮಾರು 114 ಬಾಲಕರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಕಳೆದ ಅಕ್ಟೋಬರ್ ಅಂತ್ಯಕ್ಕೆ ರಾಜ್ಯದಲ್ಲಿ 33 ಪೋಕ್ಸೋ ಕೇಸ್ಗಳು ದಾಖಲಾಗಿವೆ. ದಾಖಲಾದ 114 ಪ್ರಕರಣಗಳಲ್ಲಿ 7 ಕೇಸ್ಗಳಲ್ಲಿ ಮಾತ್ರ ಶಿಕ್ಷೆಯಾಗಿದ್ದು, ಉಳಿದ ಪ್ರಕರಣಗಳು ವಿಚಾರಣಾ ಹಂತದಲ್ಲಿವೆ ಎಂದು ಪೊಲೀಸ್ ಇಲಾಖೆ ನೀಡಿದ ಅಂಕಿ - ಅಂಶಗಳಿಂದ ಬಹಿರಂಗವಾಗಿದೆ.
2021ರಲ್ಲಿ 24, 2022ರಲ್ಲಿ 25 ಪ್ರಕರಣಗಳು, 2023ರಲ್ಲಿ 33 ಹಾಗೂ ಈ ವರ್ಷ 32 ಪ್ರಕರಣಗಳು ದಾಖಲಾಗಿವೆ. ಬಾಲಕರ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳ ಪೈಕಿ ಬೆಂಗಳೂರು ನಗರದಲ್ಲಿ ನಾಲ್ಕು ವರ್ಷಗಳಲ್ಲಿ 17 ಪ್ರಕರಣ ವರದಿಯಾಗಿವೆ.
ಬಾಲಕರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಪೈಕಿ ಬಹುತೇಕ ಪುರುಷರೇ ಆರೋಪಿಗಳಾಗಿದ್ದಾರೆ. ಬೆರಳೆಣಿಕೆ ಪ್ರಕರಣಗಳಲ್ಲಿ ಮಹಿಳೆಯರು ಆರೋಪಿಗಳಾಗಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಂಚಾರಹಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಿಕ್ಷಕಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಶೈಕ್ಷಣಿಕ ಪ್ರವಾಸದ ವೇಳೆ 10ನೇ ತರಗತಿ ವಿದ್ಯಾರ್ಥಿಯೊಂದಿಗೆ ಅಸಭ್ಯವಾಗಿ ಫೋಟೋ ತೆಗೆಸಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಪ್ರಕರಣವು ವಿಚಾರಣಾ ಹಂತದಲ್ಲಿದೆ. ಇದೇ ರೀತಿ 107 ಪ್ರಕರಣಗಳು ವಿಚಾರಣ ಹಂತದಲ್ಲಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ಧಾರೆ.
ಯಾರ ಕಡೆಯಿಂದ ಲೈಂಗಿಕ ದೌರ್ಜನ್ಯ ? : ಆಟವಾಡಲು ಮನೆಯಿಂದ ಹೊರ ಹೋದಾಗ ದೌರ್ಜನ್ಯಕ್ಕೆ ಒಳಗಾಗುತ್ತಿದ್ಧಾರೆ. ನೆರೆಹೊರೆಯವರು, ಮನೆಯವರು, ಪರಿಚಯಸ್ಥರು ಹಾಗೂ ಹತ್ತಿರದ ಸಂಬಂಧಿಗಳೇ ಇಂತಹ ಕೃತ್ಯ ಎಸಗುತ್ತಿದ್ದಾರೆ. ಬಾಲಕರೊಂದಿಗೆ ಅಸಭ್ಯ ವರ್ತನೆ, ಅಶ್ಲೀಲವಾಗಿ ಫೋಟೋ ತೆಗೆಸಿಕೊಳ್ಳುವುದು, ಖಾಸಗಿ ಅಂಗ ಮುಟ್ಟುವುದು, ಲೈಂಗಿಕವಾಗಿ ದೌರ್ಜನ್ಯ ಎಸಗುತ್ತಿರುವುದು ಎಂದು ಕಂಡು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಾಲಕರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿವರ
ವರ್ಷ | ಪ್ರಕರಣ |
2021 | 24 |
2022 | 25 |
2023 | 33 |
2024 | 32 (ಅಕ್ಟೋಬರ್ ಅಂತ್ಯಕ್ಕೆ) |