ಬೆಂಗಳೂರು: ವಿಧಾನಪರಿಷತ್ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆ ಕುರಿತು ಜೆಡಿಎಸ್ ವರಿಷ್ಠ ದೇವೇಗೌಡರ ನಿವಾಸದಲ್ಲಿ ಮಹತ್ವದ ಸಭೆ ನಡೆದಿದ್ದು, ಹೆಚ್ಚುವರಿ ಸ್ಥಾನ ಲಭ್ಯತೆ ಕುರಿತ ಅವಲೋಕನ ನಡೆಸಲಾಯಿತು. ಗೆಲ್ಲುವ ಮಾನದಂಡದ ಆಹಾರದಲ್ಲಿ ಮತ್ತೊಂದು ಸ್ಥಾನಕ್ಕೆ ಬೇಡಿಕೆ ಇಡುವ ಚಿಂತನೆ ನಡೆಸಲಾಯಿತು. ಆದರೆ ಅಂತಿಮ ನಿರ್ಧಾರ ಇನ್ನೂ ಕೈಗೊಂಡಿಲ್ಲ ಎನ್ನಲಾಗಿದೆ.
ಪದ್ಮನಾಭನಗರದಲ್ಲಿರುವ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ನಿವಾಸದಲ್ಲಿ ಜೆಡಿಎಸ್ ನಾಯಕರ ಸಭೆ ನಡೆದಿದೆ. ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಟಿಕೆಟ್ ಆಕಾಂಕ್ಷಿ ಶ್ರೀಕಂಠೇಗೌಡ ಹಾಗೂ ಅನ್ನದಾನಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಪರಿಷತ್ ಸೀಟು ಹಂಚಿಕೆ, ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಲಾಯಿತು. ಆರು ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಇದರಲ್ಲಿ ಮೂರು ಸ್ಥಾನ ಬಿಜೆಪಿ, ಎರಡು ಸ್ಥಾನ ಜೆಡಿಎಸ್ ಹಾಗೂ ಒಂದು ಸ್ಥಾನವು ಕಾಂಗ್ರೆಸ್ ಗೆದ್ದಿದ್ದ ಕ್ಷೇತ್ರಗಳಾಗಿವೆ. ಬಿಜೆಪಿ ಗೆದ್ದಿದ್ದ ಮೂರು ಸ್ಥಾನಗಳ ಜೊತೆಗೆ ಕಾಂಗ್ರೆಸ್ ಗೆದ್ದಿದ್ದ ಒಂದು ಸ್ಥಾನದಲ್ಲಿ ಬಿಜೆಪಿ ಸ್ಪರ್ಧೆ ಮಾಡಲಿ, ನಾವು ಗೆದ್ದಿದ್ದ ಎರಡೂ ಕ್ಷೇತ್ರ ನಮಗೆ ಬಿಟ್ಟುಕೊಡಲಿ ಎನ್ನುವ ಅಭಿಪ್ರಾಯವನ್ನು ಹಲವು ಮುಖಂಡರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಭೋಜೇಗೌಡ ಪ್ರತಿನಿಧಿಸಿದ್ದ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಅವರಿಗೇ ಜೆಡಿಎಸ್ ಟಿಕೆಟ್ ನೀಡಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರವೂ ಜೆಡಿಎಸ್ ಗೆದ್ದ ಕ್ಷೇತ್ರವಾಗಿದ್ದರಿಂದ ಆ ಸ್ಥಾನವನ್ನೂ ಬಿಟ್ಟುಕೊಡಲು ಬಿಜೆಪಿ ನಾಯಕರ ಮನವೊಲಿಕೆ ಮಾಡಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಜೆಡಿಎಸ್ನ ಶ್ರೀಕಂಠೇಗೌಡ ಟಿಕೆಟ್ ಆಕಾಂಕ್ಷೆಯಾಗಿದ್ದು, ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಭರವಸೆ ನೀಡದ ದೇವೇಗೌಡರು, ಚುನಾವಣಾ ಸಿದ್ಧತಾ ಕಾರ್ಯದ ಕುರಿತು ಮಾಹಿತಿ ಪಡೆದುಕೊಂಡರು ಎನ್ನಲಾಗಿದೆ. ಚುನಾವಣೆಯಲ್ಲಿ ಮೈತ್ರಿ ಮುಂದುವರೆದಿರುವ ಕಾರಣ ಬಿಜೆಪಿಗೆ ಸಹಕಾರ ನೀಡುವ ಕುರಿತು ಸಭೆಯಲ್ಲಿ ಮುಖಂಡರಿಗೆ ನಿರ್ದೇಶನ ನೀಡಿ ಸಭೆ ಮುಗಿಸಲಾಗಿದೆ.
ಸಭೆ ನಂತರ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರನ್ನು ಜೆಡಿಎಸ್ ಅಭ್ಯರ್ಥಿ ಭೋಜೇಗೌಡ ಭೇಟಿ ಮಾಡಿದರು. ಭೋಜೇಗೌಡ ಅವರು ದೊಡ್ಡಗೌಡರ ಆಶೀರ್ವಾದ ಪಡೆದುಕೊಂಡರು. ನಂತರ ದೇವೇಗೌಡ, ಮತ್ತು ಹೆಚ್.ಡಿ ಕುಮಾರಸ್ವಾಮಿ ಅವರ ಹಸ್ತದಿಂದ ಬಿ ಫಾರಂ ಪಡೆದರು. ನಾಳೆ ನಾಮಪತ್ರ ಸಲ್ಲಿಸುವುದಾಗಿ ಈಗಾಗಲೇ ಪ್ರಕಟಿಸಿದ್ದ ಭೋಜೇಗೌಡ, ಇಂದು ಬಿ ಫಾರಂ ಜೊತೆ ನಿರ್ಗಮಿಸಿದರು.
ಬಿಜೆಪಿ ಅಭ್ಯರ್ಥಿ ಬದಲಾವಣೆ: ವಿಧಾನಪರಿಷತ್ ಚುನಾವಣೆ ವಿಚಾರ, ಮೈತ್ರಿ ಅಭ್ಯರ್ಥಿ ಬದಲಾವಣೆ ಸಾಧ್ಯತೆ ಬಗ್ಗೆ ಚರ್ಚೆಯಾಗುತ್ತಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಾಗುವ ಸುದ್ದಿ ಹರಿದಾಡುತ್ತಿದೆ? ಇ.ಸಿ. ನಿಂಗರಾಜು ಹೆಸರು ಘೋಷಣೆ ಮಾಡಿದ್ದ ಬಿಜೆಪಿ, ಇದೀಗ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಸಾಧ್ಯತೆ ಇದೆ. ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ. ಗೆಲ್ಲುವ ಮಾನದಂಡದ ಆಧಾರದ ಮೇಲೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಚಿಂತನೆ ನಡೆದಿದೆ ಎನ್ನಲಾಗಿದೆ.
ಇ.ಸಿ. ನಿಂಗರಾಜು ಹೇಳಿದ್ದೇನು: ಆದರೆ, ಈ ಸುದ್ದಿಯನ್ನು ಬಿಜೆಪಿ ಅಭ್ಯರ್ಥಿ ಅಲ್ಲಗಳೆದಿದ್ದಾರೆ. ''ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ, ಈಗಾಗಲೇ ಬಿಜೆಪಿಯಿಂದ ಟಿಕೆಟ್ ಘೋಷಣೆ ಆಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಪಕ್ಷದ ವರಿಷ್ಠರ ಜೊತೆ ಕೂಡ ಮಾತಾಡಿದ್ದೇನೆ'' ಎಂದು ಸದ್ಯದ ಗೊಂದಲದ ಬಗ್ಗೆ ಬಿಜೆಪಿ ಅಭ್ಯರ್ಥಿ ಇ. ಸಿ. ನಿಂಗರಾಜು ದೂರವಾಣಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ''ಜೆಡಿಎಸ್ ಜೊತೆ ಚರ್ಚೆ ನಡೆಸಿದ ಬಳಿಕವೇ ಟಿಕೆಟ್ ಘೋಷಣೆ ಆಗಿದೆ. ಹೀಗಾಗಿ, ಇದರಲ್ಲಿ ಬದಲಾವಣೆ ಇಲ್ಲ. ಈಗಾಗಲೇ ಪ್ರಚಾರದ ಕೆಲಸ ಆರಂಭಿಸಿದ್ದೇನೆ'' ಎಂದಿದ್ದಾರೆ.
ಮತ್ತೊಂದೆಡೆ ಜೆಡಿಎಸ್ನಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಟಿ. ಶ್ರೀಕಂಠೇಗೌಡ ಅವರು, ಕೊನೆ ಕ್ಷಣದಲ್ಲಿ ಟಿಕೆಟ್ ಬದಲಾವಣೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ದೇವೇಗೌಡರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ಪರಿಷತ್ ಚುನಾವಣೆಗೆ ಬಿಜೆಪಿಯ 5 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಒಂದು ಸ್ಥಾನ ಜೆಡಿಎಸ್‌ಗೆ - BJP List for Council Election