ಶಿವಮೊಗ್ಗ: ಒಪಿಎಸ್, ಆರೋಗ್ಯ ಸೇವೆ ಹಾಗೂ ಸೆಂಟ್ರಲ್ ಪೇ ಜಾರಿಯೇ ನಮ್ಮ ಮೊದಲ ಆದ್ಯತೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಪಡಾಕ್ಷರಿ ತಿಳಿಸಿದ್ದಾರೆ.
ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಈ ಭಾರಿ ನಡೆದ ಚುನಾವಣೆಯಲ್ಲಿ ನಮ್ಮ ಸರ್ಕಾರಿ ನೌಕರರು ಸತ್ಯ, ನ್ಯಾಯ, ಸೇವೆ, ಕಾಯಕ, ಸಂಘಟನೆಗೆ ಆರ್ಶಿವಾದ ಮಾಡಿದ್ದರೆ ಎಂದು ಹೇಳಲು ಬಯಸುತ್ತೇನೆ. ನಮ್ಮ ಚುನಾವಣೆ ಪ್ರಜಾಪ್ರಭುತ್ವದ ಆಶಯಗಳಂತೆಯೇ ನಡೆದಿದೆ. ನಾನು ಕಳೆದ 5 ವರ್ಷಗಳಿಂದ ಸಂಘಟನೆ ಮಾಡಿದ್ದೇನೆ. ನಾನು ಪ್ರವಾಸ ಮಾಡಿದ ಎಲ್ಲಾ ಕಡೆ ಒಳ್ಳೆಯ ವಾತಾವರಣ ಇತ್ತು. ಆದರೆ, ಚುನಾವಣೆಯು ನಾವು ಅಂದು ಕೊಂಡಂತೆ ಆಗಲಿಲ್ಲ. ಆದರೂ ಮತದಾರ ಪ್ರಭುಗಳು ನಮ್ಮನ್ನು ಚುನಾವಣೆಯಲ್ಲಿ ಜಯಶೀಲರನ್ನಾಗಿ ಮಾಡಿದ್ದಾರೆ. ಚುನಾವಣಾ ಮತ ಎಣಿಕೆಯ ಜೊತೆಗೆ ನೌಕರರ ಮನವನ್ನು ಗೆದ್ದಿದ್ದೇವೆ. ಚುನಾವಣೆ ಅಂದರೆ ತಂತ್ರಗಾರಿಕೆ ಇರುತ್ತದೆ. ನನ್ನನ್ನು 67 ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಹಿಂದೆ 52 ಮತಗಳಿಂದ ಗೆದ್ದಿದ್ದೆ. ಚುನಾವಣೆ ಈ ಭಾರಿ ಕಷ್ಟ ಇದೆ ಅಂತ ನೌಕರರು ಅಂದು ಕೊಂಡಿದ್ದರು. ಆದರೆ, ರಾಜ್ಯ ಸರ್ಕಾರಿ ನೌಕರರು ನನ್ನ ಮೇಲೆ ವಿಶ್ವಾಸ ಇಟ್ಟು ಗೆಲ್ಲಿಸಿದ್ದಾರೆ" ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯ 28 ಮತಗಳಲ್ಲಿ 27 ಮತಗಳು ನನಗೆ ಬಂದಿದ್ದವು. ನನ್ನ ಗೆಲುವಿನಿಂದ ಜವಾಬ್ದಾರಿ ಹೆಚ್ಚಾಗಿದೆ. ಇದರಿಂದ ನನ್ನ ರಚನ್ಮಾತ್ಮಕ ಕೆಲಸ ಸಹ ಹೆಚ್ಚಾಗಿದೆ. ನಮ್ಮ ಪ್ರಣಾಳಿಕೆಯಂತೆ ಆರೋಗ್ಯ ಸೇವೆ, ಹಳೆ ಪಿಂಚಣಿ ವ್ಯವಸ್ಥೆ ಬರಬೇಕು. ಕೇಂದ್ರದ ಸಂಬಳ ನೀತಿ ಜಾರಿ ಆಗಬೇಕು. ಆರೋಗ್ಯ ಸೇವೆ ಕುರಿತು ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿಯಾಗಿ ಆರೋಗ್ಯ ಸೇವೆ ಜಾರಿ ಕುರಿತು ಒತ್ತಡ ಹಾಕಲಿದ್ದೇವೆ. ಹಳೆ ಪಿಂಚಣಿ ವ್ಯವಸ್ಥೆ ಜಾರಿ ಆಗಬೇಕು ಎಂದು ಆಗ್ರಹಿಸಿದ್ದೇವೆ ಎಂದು ಷಡಾಕ್ಷರಿ ಹೇಳಿದ್ದಾರೆ.
ಮುಂದುವರೆದು, "2025 ಒಪಿಎಸ್ ಸ್ಕೀಂ ಜಾರಿ ಮಾಡುವ ವರ್ಷವಾಗಿದೆ ಎಂದು ನಾವು ಘೋಷಣೆ ಮಾಡಿದ್ದೇವೆ . ಈಗಾಗಲೇ ಒಪಿಎಸ್ ರಾಜ್ಯಗಳಲ್ಲಿ ಜಾರಿ ಆಗಿದೆ, ನಮ್ಮದು ಆರನೇ ರಾಜ್ಯವಾಗಲಿದೆ. ಈ ವಿಚಾರವಾಗಿ ಸಂಘಟನೆಯಲ್ಲಿ ಯಾವುದೇ ರಾಜಿ ಇಲ್ಲ. ರಾಜ್ಯ ಸರ್ಕಾರ ಸಹ ಒಪಿಎಸ್ ಬಗ್ಗೆ ಪ್ರಣಾಳಿಕೆಯಲ್ಲಿ ತಿಳಿಸಿತ್ತು" ಎಂದರು.
ಬೆಂಗಳೂರಿನಲ್ಲಿ 200 ರೂಂಗಳ ದೊಡ್ಡ ಸಮುದಾಯ ಭವನ ಕಟ್ಟಲು ಪ್ರಯತ್ನ ಮಾಡಲಾಗುತ್ತಿದೆ. ಇಲ್ಲಿ ಒಂದು ರೂಂ ಕೇವಲ 100ಕ್ಕೆ ನೀಡಬೇಕೆಂದು ತೀರ್ಮಾನ ಮಾಡಿ ಅದಕ್ಕೆ 150 ಕೋಟಿ ರೂ. ನಿಗದಿ ಮಾಡಲಾಗಿದೆ. ನಮ್ಮ ಸಂಘಕ್ಕಾಗಿ 300 ಕೋಟಿ ರೂ. ತರುವ ಪ್ರಯತ್ನ ನಡೆಸಲಾಗುತ್ತಿದೆ. ನಮ್ಮ ಪ್ರಣಾಳಿಕೆಗೆ ಚುನಾವಣೆಯಲ್ಲಿ ಒಪಿಎಸ್ ಸ್ಕೀಂ, ಆರೋಗ್ಯ ಹಾಗೂ ಕೇಂದ್ರದಂತೆ ಸಂಬಳದ ವಿಚಾರದ ಕುರಿತು ತಿಳಿಸಿದಾಗ ಮತದಾರರು ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲಾ ಕಡೆ ಮತ ನೀಡಿದ್ದಾರೆ" ಅವರಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಷಡಾಕ್ಷರಿ ಅವರು ತಿಳಿಸಿದರು. ಈ ವೇಳೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿದ್ದರು.
ಇದನ್ನೂ ಓದಿ: ಜ.15ರಂದು ಸಿಎಂ ಜೊತೆ ಸಭೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ: ಮುಷ್ಕರ ಕೈಬಿಟ್ಟ ಸಾರಿಗೆ ನೌಕರರ ಒಕ್ಕೂಟ