ಹುಬ್ಬಳ್ಳಿ: ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ಹೇಳಿದರು.
ನಗರದಲ್ಲಿಂದು ಮಾಹಿತಿ ನೀಡಿದ ಅವರು, "ವ್ಯಕ್ತಿಯೋರ್ವ ಖಾಸಗಿ ಬಸ್ನಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇಲೆ ಧಾರವಾಡ ಎಸ್ಡಿಎಂ ಆಸ್ಪತ್ರೆ ಬಳಿ ದಾಳಿ ಮಾಡಲಾಗಿದೆ. ಅಭಿಷೇಕ್ ಎಂಬಾತನ್ನು ವಶಕ್ಕೆ ಪಡೆದಿದ್ದೇವೆ. 1 ಕೆ.ಜಿ 101 ಗ್ರಾಂ ಚಿನ್ನ ಹಾಗೂ 1 ಕೆ.ಜಿ 463 ಗ್ರಾಂ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಮುಂಬೈನಿಂದ ಹುಬ್ಬಳ್ಳಿಯ ಕೆಲವು ಬಂಗಾರದ ಅಂಗಡಿಯವರಿಗೆ ಬಿಲ್ ಮತ್ತು ಜಿಎಸ್‌ಟಿ ಇಲ್ಲದೇ ಬಂಗಾರದ ಆಭರಣಗಳನ್ನು ತಯಾರಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಕೊರಿಯರ್ನಲ್ಲಿ ಕೆಲಸಕ್ಕಿದ್ದ ಆರೋಪಿ ಎಷ್ಟು ದಿನದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಎನ್ನುವ ಬಗ್ಗೆ ತನಿಖೆ ನಡೆಸಿದ್ದೇವೆ. ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೇರೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದರು.
13 ಕೆ.ಜಿ ಗಾಂಜಾ ವಶಕ್ಕೆ: ಅಕ್ರಮವಾಗಿ ಬೆಳೆದಿದ್ದ ಪ್ರತ್ಯೇಕ ಎರಡು ಪ್ರಕರಣದಲ್ಲಿ 13 ಕೆ.ಜಿ ಗಾಂಜಾ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಡಿವಾಡ ಗ್ರಾಮದಲ್ಲಿ ಆರೋಪಿ ಹೇಮರೆಡ್ಡಿ ಎಂಬಾತ ತನ್ನ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ. ಮಾಹಿತಿ ತಿಳಿದು ದಾಳಿ ಮಾಡಿದ ಪೊಲೀಸರು 12 ಗಾಂಜಾ ಗಿಡಗಳು ಸೇರಿ 7 ಕೆ.ಜಿ 40 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ. ಶಿರಗುಪ್ಪಿ ಗ್ರಾಮದಲ್ಲಿಯೂ ದಾಳಿ ಮಾಡಿ ಆರೋಪಿ ಶಿವಯ್ಯ ಎಂಬಾತ ತನ್ನ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 28 ಹಸಿ ಗಾಂಜಾ ಗಿಡ (6 ಕೆಜಿ 785 ಗ್ರಾಂ) ಜಪ್ತಿ ಮಾಡಿದ್ದಾರೆ. ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ, ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ತೊಗರಿ ಮಧ್ಯೆ ಗಾಂಜಾ ಬೆಳೆ: ಬೀದರ್ ಪೊಲೀಸರ ದಾಳಿ, ₹2 ಕೋಟಿಗೂ ಹೆಚ್ಚು ಮೌಲ್ಯದ ಮಾಲು ಜಪ್ತಿ