ಉಡುಪಿ : ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಗೋವಾ ಮದ್ಯವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ವಶಕ್ಕೆ ಪಡೆದಿದ್ದಾರೆ.
ಕಾರ್ಕಳ ತಾಲೂಕಿನ ಬೋಳ ಗ್ರಾಮದ ಅವಿನಾಶ್ ಮಲ್ಲಿ ಹಾಗೂ ಪ್ರಶಾಂತ್ ಸುವರ್ಣ ಎಂಬವರಿಗೆ ಸಂಬಂಧಿಸಿದ ಎರಡು ಮನೆಗಳ ಮೇಲೆ ದಾಳಿ ನಡೆಸಿದ ಉಡುಪಿ ಅಬಕಾರಿ ಇಲಾಖೆಯ ಅಧಿಕಾರಿಗಳು, ಒಟ್ಟು 272 ಪೆಟ್ಟಿಗೆಗಳಲ್ಲಿ 2360.850 ಲೀ. ವಿವಿಧ ಬ್ರಾಂಡ್ಗಳ ಗೋವಾ ಮದ್ಯ ಅಕ್ರಮವಾಗಿ ದಾಸ್ತಾನು ಇರಿಸಿರುವುದನ್ನು ಪತ್ತೆ ಹಚ್ಚಿ, ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಜಾರಿ ಮತ್ತು ತನಿಖೆ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಡಾ. ಸಿ. ಹೆಚ್ ಬಾಲಕೃಷ್ಣ ನಿರ್ದೇಶನದ ಮೇರೆಗೆ ಉಡುಪಿ ಜಿಲ್ಲೆ ಅಬಕಾರಿ ಇಲಾಖೆಯ ಉಪ ಆಯುಕ್ತೆ ಬಿಂದುಶ್ರೀ ಮಾರ್ಗದರ್ಶನದಂತೆ ನಡೆದ ಕಾರ್ಯಾಚರಣೆಯ ನೇತೃತ್ವವನ್ನು ಉಡುಪಿ ಜಿಲ್ಲಾ ಅಬಕಾರಿ ಅದೀಕ್ಷಕ ಶಿವಪ್ರಸಾದ್ ವಹಿಸಿದ್ದರು.
ಆರೋಪಿಗಳು ಗೋವಾದಿಂದ ಕಡಿಮೆ ಬೆಲೆಗೆ ಮದ್ಯ ತರಿಸಿಕೊಂಡು ಮನೆಯಲ್ಲಿಯೇ ಸಂಗ್ರಹಿಸಿಟ್ಟುಕೊಂಡು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು ಎನ್ನುವ ಶಂಕೆ ವ್ಯಕ್ತವಾಗಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಮನೆಯನ್ನು ಶೋಧಿಸಿದಾಗ ಅಕ್ರಮ ಮದ್ಯದ ಬಾಟಲ್ಗಳು ಇರುವುದು ತಿಳಿದು ಬಂದಿದೆ. ನಂತರ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಬಕಾರಿ ಇಲಾಖೆಯವರು ಮಾಹಿತಿಯನ್ನು ನೀಡಿದ್ದಾರೆ.
'ಆರೋಪಿಗಳಾದ ಪ್ರಶಾಂತ್ ಸುವರ್ಣ ಬಿನ್ ಕೇಶವ ಸುವರ್ಣ ಮತ್ತು ಅವಿನಾಶ್ ಮಲ್ಲಿ ಎಂಬುವವರು ಓಡಿ ಹೋಗಿ ತಲೆಮರೆಸಿಕೊಂಡಿದ್ದು, ಪತ್ತೆ ಹಚ್ಚಲು ಕ್ರಮಕೈಗೊಳ್ಳಲಾಗುತ್ತಿದೆ. ವಶಪಡಿಸಿಕೊಂಡ ಗೋವಾ ಮದ್ಯದ ಅಂದಾಜು ಮೌಲ್ಯವು ರೂ. 15.00 ಲಕ್ಷಗಳಾಗಿರುತ್ತದೆ' ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತೆ ಬಿಂದುಶ್ರೀ ಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಉಪ ಚುನಾವಣೆ: ಚನ್ನಪಟ್ಟಣದಲ್ಲಿ ಅತಿ ಹೆಚ್ಚು ಅಕ್ರಮ - 30.25 ಕೋಟಿ ಮದ್ಯ, ನಗದು, ಉಡುಗೊರೆ ವಶ