ವಿಜಯಪುರ: ಬೆಳಗಾವಿ ಲೋಕಸಭಾ ಬಿಜೆಪಿ ಟಿಕೆಟ್ ಜಗದೀಶ್ ಶೆಟ್ಟರ್ಗೆ ಕೊಡುವ ವಿಚಾರದಲ್ಲಿ ಜಿಲ್ಲೆಯ ನಾಯಕರಲ್ಲಿ ವಿರೋಧವಿದ್ದಾಗಲೂ, ಶೆಟ್ಟರ್ ಪರ ಬೆಳಗಾವಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಶಂಕರಗೌಡ ಪಾಟೀಲ ಅವರು ಬ್ಯಾಟಿಂಗ್ ಮಾಡಿದ್ದಾರೆ.
ವಿಜಯಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಬಿಎಸ್ವೈ ಆಪ್ತ ಬಿಜೆಪಿ ಟಿಕೆಟ್ ಆಕಾಂಕ್ಷಿ ಶಂಕರಗೌಡ ಪಾಟೀಲ ಮಾತನಾಡಿ, ಜಗದೀಶ್ ಶೆಟ್ಟರ್ಗೆ ಟಿಕೆಟ್ ನೀಡುವುದನ್ನು ಪಕ್ಷ ತೀರ್ಮಾನ ಮಾಡಿದ್ರೆ ಅದನ್ನು ನಾಯಕರು ಸ್ವಾಗತಿಸಬೇಕು. ಪಕ್ಷವೇ ತೀರ್ಮಾನ ಮಾಡಿದಾಗ ವಿರೋಧ ಮಾಡೋದಕ್ಕೆ ಆಗಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಭೆಗೆ ಜಿಲ್ಲೆಯ ಸ್ಥಳೀಯ ನಾಯಕರು ನನಗೆ ಆಹ್ವಾನಿಸಿಲ್ಲ. ಪಕ್ಷದ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ. ಬೆಳಗಾವಿ ಲೋಕಸಭಾ ಚುನಾವಣೆಗೆ ನಾನು ಆಕಾಂಕ್ಷಿಯಾಗಿದ್ದೇನು. ನಾನು ಬಿಜೆಪಿ ಟಿಕೆಟ್ಗಾಗಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರಿಗೆ ಮನವಿ ಮಾಡಿದ್ದೆನು. ಈಗ ಜಗದೀಶ್ ಶೆಟ್ಟರ್ ಬೆಳಗಾವಿಗೆ ಬಂದು ಸ್ಪರ್ಧಿಸ್ತಾರೆ ಎಂಬ ವದಂತಿ ಇದೆ. ಪಕ್ಷದ ತೀರ್ಮಾನಕ್ಕೆ ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ಪಕ್ಷದ ಹಿರಿಯರು ಎಲ್ಲವೂ ವಿಚಾರ ಮಾಡಿಯೇ ತೀರ್ಮಾನ ತಗೊಂಡಿರಬೇಕು ಎಂದು ತಿಳಿಸಿದರು.
ಈಗ ಇನ್ನೂ ಕಾಲ ಮಿಂಚಿಲ್ಲ. ಬೆಳಗಾವಿಗೆ ನನ್ನ ಅಭ್ಯರ್ಥಿಯನ್ನಾಗಿ ಪರಿಗಣಿಸಬೇಕು. ಜಗದೀಶ್ ಶೆಟ್ಟರ್ ಬೆಳಗಾವಿಗೆ ಬಂದು ಸ್ಪರ್ಧಿಸಿದ್ರೆ ಪಕ್ಷದ ಆದೇಶ ಪಾಲಿಸ್ತೀವಿ. ಜಗದೀಶ್ ಶೆಟ್ಟರ್ ಗೆಲ್ಲಿಸುವ ಎಲ್ಲ ಪ್ರಯತ್ನ ಮಾಡ್ತೀವಿ, ಗೆದ್ದೇ ಗೆಲ್ಲಿಸ್ತೀವಿ ಎಂದು ಶಂಕರಗೌಡ ಪಾಟೀಲ ಹೇಳಿದರು.
ಬೆಳಗಾವಿ ನಗರದಲ್ಲಿ 1994ರಿಂದ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಲು ಶ್ರಮಿಸಿದ್ದೇನೆ. ಪಕ್ಷಕ್ಕೆ ಹಲವು ಹಿರಿಯರನ್ನು ಕರೆತಂದಿದ್ದೇನೆ. 2004ರಲ್ಲಿ ನಾನಾಗಿ ಟಿಕೆಟ್ ಬಿಟ್ಟು ಕೊಟ್ಟಿದ್ದೆವು ಎಂದು ತಿಳಿಸಿದರು.
ಇದನ್ನೂಓದಿ :ಬಿಎಸ್ವೈ ಮತ್ತು ಈಶ್ವರಪ್ಪ ಸ್ನೇಹ ಅಗಾಧವಾದದ್ದು, ಎಲ್ಲವೂ ಸೌಹಾರ್ದಯುತವಾಗಿ ಬಗೆಹರಿಯುತ್ತದೆ: ಬೊಮ್ಮಾಯಿ