ಬೆಂಗಳೂರು: 2024ನೇ ವರ್ಷದಲ್ಲಿ ಕೌಟುಂಬಿಕ ಕಲಹಗಳ ಕುರಿತಂತೆ ಹೈಕೋರ್ಟ್‌ನಿಂದ ಹಲವು ಮಹತ್ವದ ಆದೇಶಗಳು ಹೊರಬಿದ್ದಿದ್ದು, ಅವುಗಳ ಆಯ್ದ ಪ್ರಕರಣಗಳ ವಿವರಣೆ ಇಲ್ಲಿದೆ.
- ಅಪ್ರಾಪ್ತ ಮಕ್ಕಳ ಪೋಷಣೆಯಲ್ಲಿ ತಂದೆಯ ಪಾತ್ರ ನಿರ್ಲಕ್ಷಿಸಲಾಗದು, ದಂಪತಿ ನಡುವಿನ ವಿವಾದದಲ್ಲಿ ಸಣ್ಣ ಮಕ್ಕಳು ತೊಂದರೆ ಅನುಭವಿಸುವಂತಾಗಬಾರದು. ಎಳೆ ಮಕ್ಕಳಿಗೆ ಇಬ್ಬರು ಪೋಷಕರ ಪ್ರೀತಿ, ಕಾಳಜಿ, ರಕ್ಷಣೆ ಮತ್ತು ಸಹಯೋಗ ಅಗತ್ಯ. ಪೋಷಕರ ಗಲಾಟೆಯಲ್ಲಿ ಮಕ್ಕಳು ಬಲಿಪಶುವಾಗಬಾರದು ಎಂದು ಪೀಠ ಆದೇಶಿಸಿತ್ತು.
- ವಿದೇಶದಲ್ಲಿ ನೆಲೆಸಿರುವ ದಂಪತಿ ಭಾರತದ ಮಗು ದತ್ತು ಪಡೆಯಲು ಹೇಗ್ ಒಪ್ಪಂದದ ಅನುಸರಣೆ ಅಗತ್ಯ. ಜರ್ಮನಿಯಲ್ಲಿ ನೆಲೆಸಿರುವ ಬೆಂಗಳೂರು ಮೂಲದ ದಂಪತಿ ಹೇಗ್ ಸಮಾವೇಶದ ಒಪ್ಪಂದ ನಿಯಮದ ಪ್ರಕಾರ ಭಾರತದ ಮಗು ದತ್ತು ಪಡೆಯಬಹುದು ಎಂದು ಹೈಕೋರ್ಟ್ ಸೂಚನೆ.
- ವಿಚ್ಛೇದನ ಪ್ರಕರಣಗಳಲ್ಲಿ ಪತಿಯ ಆದಾಯದ ಶೇ.10ರಷ್ಟನ್ನು ಪತ್ನಿಗೆ ಜೀವನಾಂಶ ನೀಡಿದರೆ, ಅದು ಅತ್ಯಂತ ಹೆಚ್ಚಿನ ಪ್ರಮಾಣದ್ದು ಎಂದು ಹೇಳಲಾಗದು ಎಂದು ಹೈಕೋರ್ಟ್ ಆದೇಶ.
- ವಿಚ್ಚೇದನ ಪ್ರಕರಣಗಳಲ್ಲಿ ಕೌಟುಂಬಿಕ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿ ತೀರ್ಪು ಬರುವವರೆಗೂ ಜೀವನಾಂಶ ನೀಡಲು ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ.
- ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣಾವಧಿ ಕೆಲಸವಲ್ಲ. ಪತ್ನಿಗೆ ಜೀವನಾಂಶ ನೀಡಲಾಗದು ಎನ್ನುವಂತಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ.
- ಪತಿಯ ಉಪಯೋಗಕ್ಕಾಗಿ ಆಗುವ ವೆಚ್ಚ ಪರಿಗಣಿಸಿ ಪತ್ನಿಗೆ ಜೀವನಾಂಶ ಕಡಿತಗೊಳಿಸಲಾಗದು ಎಂದು ಸ್ಪಷ್ಟಪಡಿಸಿದ್ದ ಹೈಕೋರ್ಟ್.
- ಪತಿಯ ಪೋಷಕರಿಂದ (ತಂದೆ, ತಾಯಿಗಳಿಂದ) ಜೀವನಾಂಶ ಕೋರಲು ಪತ್ನಿಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್.
- ಪತ್ನಿ ಮಾನಸಿಕ ಅಸ್ವಸ್ಥೆ ಎಂದು ಬಿಂಬಿಸಲು ಮುಂದಾಗಿದ್ದ ಪತಿಯಿಂದ ಹೆಂಡತಿಗೆ 50 ಸಾವಿರ ಪರಿಹಾರ ನೀಡಲು ಸೂಚಿಸಿದ್ದ ಹೈಕೋರ್ಟ್.
- ಪತಿ ತನ್ನ ಹೆಂಡತಿ ಮತ್ತು ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದಾನೆ. ಆದರೆ, ಪತಿಯ ಆರೋಗ್ಯ ಸ್ಥಿತಿ ಸರಿ ಇಲ್ಲದಿರುವುದರಿಂದ ಮುಂದೆ ಉದ್ಯೋಗ ಮಾಡಲು ಮತ್ತು ಹೆಂಡತಿ, ಮಗುವಿಗೆ ಜೀವನಾಂಶ ಪಾವತಿಸುವಂತೆ ಒತ್ತಾಯಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯ.
- ಮಗುವನ್ನು ತನ್ನ ಸುಪರ್ದಿಗೆ ಪಡೆಯಲು ಆರ್ಥಿಕ ಸದೃಢತೆಯೊಂದೇ ಆಧಾರವಾಗುವುದಿಲ್ಲ. 14 ವರ್ಷದ ಅಪ್ರಾಪ್ತ ಪುತ್ರಿಯನ್ನು ಶಾಶ್ವತವಾಗಿ ತನ್ನ ಸುಪರ್ದಿಗೆ ನೀಡಲು ವಿಚ್ಛೇದಿತ ಪತ್ನಿ ಕೋರಿದ್ದ ಮೇಲ್ಮನವಿ ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್.
- ವಿಕಲಚೇತನ ಮಗ, ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡದ ಪತಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದ್ದ ಹೈಕೋರ್ಟ್.
- ಪ್ರೀತಿಸಿ ವಿವಾಹವಾದ ಅಂತರ್ಧರ್ಮೀಯ ಜೋಡಿ ಒಂದಾಗಿರಲು ಅವಕಾಶ ಮಾಡಿಕೊಟ್ಟಿದ್ದ ಹೈಕೋರ್ಟ್.
- ಛಾಯಾಚಿತ್ರವನ್ನು ನೋಡಿ ದಂಪತಿ ಅನ್ಯೋನ್ಯತೆಯನ್ನು ನಿರ್ಧರಿಸಲಾಗದು ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್.
- ಮಾನಸಿಕ ಕ್ರೌರ್ಯದ ಆಧಾರದಲ್ಲಿ 2ನೇ ಬಾರಿ ಪತಿಯೂ ಪತ್ನಿ ವಿರುದ್ಧ ವಿಚ್ಛೇದನ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಆದೇಶಿಸಿದ್ದ ಹೈಕೋರ್ಟ್.
- ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಮಾತು ಉಲ್ಲಂಘಿಸಿದ ಆರೋಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯ.
- ಪತಿಯಿಂದ ಮಾಸಿಕ 6 ಲಕ್ಷ ರೂಪಾಯಿ ಜೀವನಾಂಶ ಕೋರಿದ ಪತ್ನಿಯ ನಡೆಗೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತು. ಇಷ್ಟು ಹಣ ಖರ್ಚು ಮಾಡಲು ಬಯಸುವುದಾದರೆ ತಾವೇ ದುಡಿಯುವುದು ಉತ್ತಮ ಎಂದು ಸಲಹೆ ನೀಡಿತ್ತು.
- ಕುಟುಂಬದ ವ್ಯಾಖ್ಯಾನದಲ್ಲಿ ಸೊಸೆ ಇಲ್ಲ, ಹೀಗಾಗಿ ಸೊಸೆಗೆ ಅನುಕಂಪದ ಆಧಾರದ ಹುದ್ದೆ ನೀಡಲಾಗದು ಎಂದು ಹೈಕೋರ್ಟ್ ಮಹತ್ವದ ಆದೇಶ.
- ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಲ್ಲಿ ಪತ್ನಿಯನ್ನು ಶಿಕ್ಷೆಗೆ ಗುರಿಪಡಿಸುವುದಕ್ಕೆ ಅವಕಾಶ ಇಲ್ಲ ಎಂದು ಹೈಕೋರ್ಟ್ ಆದೇಶ.
- ಪತಿಯಿಂದ ದೂರವಿದ್ದು, ವೈವಾಹಿಕ ಸುಖಭೋಗಕ್ಕೆ ಅಡ್ಡಿಪಡಿಸುವುದು ಕ್ರೌರ್ಯಕ್ಕೆ ಸಮ ಎಂದ ಹೈಕೋರ್ಟ್. ಎಂಟು ವರ್ಷಗಳ ಕಾಲ ಪತಿಯಿಂದ ದೂರವೇ ಉಳಿದಿದ್ದ ಪತ್ನಿಗೆ ವಿಚ್ಛೇದನ ಮಂಜೂರು ಮಾಡಿ ಆದೇಶಿಸಿದೆ.
- ಪತಿ ಜೊತೆಗಿದ್ದುಕೊಂಡೇ 2ನೇ ಮದುವೆಗೆ ವರನ ಹುಡುಕಾಡಿದ ಪತ್ನಿ. ಕೌಟುಂಬಿಕ ಕಲಹ ಪ್ರಕರಣವೊಂದರಲ್ಲಿ ದಂಪತಿಗೆ ಕೌಟುಂಬಿಕ ನ್ಯಾಯಾಲಯವು ಮಂಜೂರು ಮಾಡಿದ್ದ ವಿಚ್ಛೇದನದ ಆದೇಶ ಎತ್ತಿಹಿಡಿದಿದ್ದ ಹೈಕೋರ್ಟ್.
- ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡಿ ಬಳಿಕ ಮೂರನೇ ಪತ್ನಿಗೂ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ಪತಿಗೆ 25 ಸಾವಿರ ರೂ. ದಂಡ ಹಾಕಿದ ಹೈಕೋರ್ಟ್. ಅಸ್ಪಷ್ಟ ಆಧಾರಗಳ ಮೇಲೆ ಪವಿತ್ರ ವಿವಾಹ ಬಂಧ ಬೇರ್ಪಡಿಸಲಾಗದು ಎಂದು ಪೀಠ ಹೇಳಿತ್ತು.
ಇದನ್ನೂ ಓದಿ: 2024ರ ರೌಂಡ್ ಅಪ್: ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಗಳು, ಮೇಲಾಟಗಳ ಮೆಲುಕು