ಬೆಂಗಳೂರು: ಬಳ್ಳಾರಿ, ಬೆಳಗಾವಿಯ ಬೆನ್ನಲ್ಲೇ ಬೆಂಗಳೂರಲ್ಲೂ ಬಾಣಂತಿ ಸಾವಿನ ಸರಣಿ ಮುಂದುವರೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟರೆ, ಖಾಸಗಿ ಆಸ್ಪತ್ರೆಯಲ್ಲಿ ಮತ್ತೊಂದು ಸಾವು ಸಂಭವಿಸಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಇಬ್ಬರು ಬಾಣಂತಿಯರ ಸಾವಾಗಿದೆ.
ಅಸ್ಸಾಂ ಮೂಲದ 32 ವರ್ಷದ ವಿನುತಿ ವಾಣಿವಿಲಾಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಡೆಲಿವರಿಗೆ ಎಂದು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ, ನಿನ್ನೆ ರಾತ್ರಿಗೆ ಮಗುವಿಗೆ ಜನ್ಮ ನೀಡಿದ್ದಾರೆ. ಡೆಲಿವರಿ ಆದ ಬಳಿಕ ರಕ್ತಸ್ರಾವ ಹೆಚ್ಚಾಗಿದ್ದ ಕಾರಣಕ್ಕೆ ವಾಣಿ ವಿಲಾಸ್ ಆಸ್ಪತ್ರೆಗೆ ಶಿಫ್ಫ್ ಮಾಡಲಾಗಿತ್ತು. ಆದರೆ, ಕೆಲ ಗಂಟೆಗಳಲ್ಲಿಯೇ ಬಾಣಂತಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.
ವೈದ್ಯರು ಹೇಳಿದ್ದಿಷ್ಟು: ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ನಾರ್ಮಲ್ ಡೆಲಿವರಿಯಾಗಿತ್ತು. ಡೆಲಿವರಿ ಬಳಿಕ ಹೆಚ್ಚು ರಕ್ತಸ್ತಾವ ಆಗಿತ್ತು. ಹೀಗಾಗಿ ನಮ್ಮ ಆಸ್ಪತ್ರೆಗೆ ಕಳುಹಿಸಿದ್ದರು. ಕೆ ಸಿ ಜನರಲ್ ಆಸ್ಪತ್ರೆಯಿಂದ ಬಂದಾಗ ಕಂಡಿಷನ್ ಕ್ರಿಟಿಕಲ್ ಆಗಿತ್ತು. ಹೆಚ್ಚು ರಕ್ತಸ್ರಾವ ಕೂಡಾ ಆಗುತ್ತಿತ್ತು. ಹೆಚ್ಚು ಬ್ಲಡ್ ಇನ್ಫ್ಯೂಸ್ ಮಾಡಿದೆವು. ಅತಿಯಾದ ರಕ್ತಸ್ರಾವದಿಂದ ಗರ್ಭಿಣಿಯ ಸಾವು ಆಗಿದೆ ಎಂದು ವಾಣಿ ವಿಲಾಸ್ ಆಸ್ಪತ್ರೆ ಡಾ ಶರಧಿನಿ ಅವರು ಹೇಳಿದ್ದಾರೆ.
ಎರಡನೇ ಪ್ರಕರಣ: ಇನ್ನು ನಗರ ನಿವಾಸಿ, ವೃತ್ತಿಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಬಾಣಂತಿ ಅನುಷಾ (28) ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದ ಅವರು ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದರು.
ಮೃತಳ ಸಂಬಂಧಿಕರ ಆರೋಪವೇನು?: ಮೂಲತಃ ಕಡೂರು ತಾಲೂಕಿನ ಗರ್ಜೆ ಗ್ರಾಮದವರಾದ ಅನುಷಾ ಅವರಿಗೆ ತರೀಕೆರೆ ರಾಜ್ ನರ್ಸಿಂಗ್ ಹೋಮ್‌ನಲ್ಲಿ ನಾರ್ಮಲ್ ಡೆಲಿವರಿ ಆಗಿತ್ತು. ಫ್ರಿ ಡೆಲಿವರಿ ಸ್ಕ್ಯಾನಿಂಗ್ ಮಾಡಿದಾಗ ಸ್ಟೋನ್ ಇದೆ ಎಂದು ವೈದ್ಯರು ಹೇಳಿದ್ದರು. ಅದೇ ಸ್ಕ್ಯಾನಿಂಗ್ ರಿಪೋರ್ಟ್ ಆಧಾರದ ಮೇಲೆ ಶಿವಮೊಗ್ಗದ ಖಾಸಗಿ (ಮ್ಯಾಕ್ಸ್) ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲಾಗಿತ್ತು. ಆಪರೇಷನ್ ವೇಳೆ ಕರುಳಿಗೆ ಡ್ಯಾಮೇಜ್ ಆಗಿತ್ತು. ಈ ವಿಚಾರವನ್ನು ವೈದ್ಯರು ಮುಚ್ಚಿಟ್ಟಿದ್ದರು. ನಂತರ ನಗರದ ಪೋರ್ಟಿಸ್ ಆಸ್ಪತ್ರೆಯಲ್ಲಿ ಕಳೆದ ದಿನಗಳ ಚಿಕಿತ್ಸೆಗೆ ನಾಲ್ಕುವರೆ ಲಕ್ಷ ಬಿಲ್ ಮಾಡಿದ್ದಾರೆ. ಪ್ರಕರಣ ಚರ್ಚೆಗೆ ಬಂದ ಬಳಿಕ ಎರಡೂವರೆ ಲಕ್ಷ ಕೇಳುತ್ತಿದ್ದಾರೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಆಸ್ಪತ್ರೆ: ಈ ಎಲ್ಲ ಆರೋಪಗಳು ನಿರಾಧಾರ ಎಂದು ಪೋರ್ಟಿಸ್ ಆಸ್ಪತ್ರೆ ಆಡಳಿತ ಮಂಡಳಿ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
23ನೇ ಡಿಸೆಂಬರ್ 2024ರಂದು ಮುಂಜಾನೆ 4:18ಕ್ಕೆ ಮೃತಪಟ್ಟ 24 ವರ್ಷದ ರೋಗಿ ಅನುಷಾ 2019ರಿಂದ ದೀರ್ಘಕಾಲದ ಪ್ಯಾಂಕ್ರಿಯಾಟೈಟಿಸ್ ಸೇರಿದಂತೆ ಸಂಕೀರ್ಣ ವೈದ್ಯಕೀಯ ಇತಿಹಾಸವನ್ನು ಹೊಂದಿದ್ದರು. ಎರಡು ತಿಂಗಳ ಹಿಂದೆ ನಾರ್ಮಲ್ ಹೆರಿಗೆಯಿಂದ ಮಗುವಿನ ಜನ್ಮ ನೀಡಿದ್ದರು.
ಹೆರಿಗೆ ಬಳಿಕ ನ.30ರಂದು ಶಿವಮೊಗ್ಗದ ಮತ್ತೊಂದು ಆಸ್ಪತ್ರೆಯಲ್ಲಿ ಲ್ಯಾಪರೋಸ್ಕೋಪಿಕ್ ಕೊಲೆಸಿಸ್ಟೆಕ್ಟಮಿಗೆ ಒಳಗಾದರು. ಶಸ್ತ್ರಚಿಕಿತ್ಸೆಯ ನಂತರ ಅವರು ದೀರ್ಘಕಾಲದ ಕಿಬ್ಬೊಟ್ಟೆ ಕ್ಷೀಣಿಸಿ ತೀವ್ರ ಹೊಟ್ಟೆ ನೋವಿನಿಂದ ಗಂಭೀರ ಸ್ಥಿತಿ ತಲುಪಿದರು. ಬಳಿಕ ಅವರನ್ನು ಡಿ.18ರಂದು ನಾಗರಬಾವಿ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಪೆರಿ ಆಪರೇಟಿವ್ ಕಾರ್ಡಿಯೊಮಿಯೊಪತಿ (20%ರ ಇಎಫ್) ಪಿತ್ತರಸ ಸೆಪ್ಸಿಸ್ ಮತ್ತು ಪ್ಲೆರಲ್ ಎಫ್ಯೂಸನ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆ ಇರುವುದು ತಿಳಿದು ಬಂದಿತು.
ಅವರನ್ನು ಕೂಡಲೇ ಸುಧಾರಿತ ಐಸಿಯುಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರನ್ನು ನಮ್ಮ ವೈದ್ಯತಂಡ ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿತ್ತು. ಎಲ್ಲ ರೀತಿಯ ಪ್ರಯತ್ನದ ಬಳಿಕವೂ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಲೇ ಇತ್ತು. ಇದೇ ವೇಳೆ, ಅವರು ಮಲ್ಟಿಪಲ್ ಆರ್ಗನ್ ಡಿಸ್ಫಂಕ್ಷನ್ ಸಿಂಡ್ರೋಮ್ (MODS)ನೊಂದಿಗೆ ಸೆಫ್ಟಿಕ್ ಸಮಸ್ಯೆಗೆ ಒಳಗಾದರು. ಇದು ಅವರ ಹೃದಯ ಸ್ತಂಭನಕ್ಕೆ ಕಾರಣವಾಯಿತು. ಎಷ್ಟೇ ಪ್ರಯತ್ನಪಟ್ಟರೂ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ವಿಫಲವಾಯಿತು. ಈ ಅಗಾಧವಾದ ಸವಾಲಿನ ಸಮಯದಲ್ಲಿ ನಾವು ಅವರ ಕುಟುಂಬ ಮತ್ತು ಪ್ರೀತಿ ಪಾತ್ರರಿಗೆ ಸಂಪಾತ ವ್ಯಕ್ತಪಡಿಸುತ್ತೇವೆ ಎಂದು ಪೋರ್ಟಿಸ್ ಆಸ್ಪತ್ರೆಯು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ: ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ - MATERNAL DEATH IN BIMS