ಗಂಗಾವತಿ: ''ಶೋಷಿತರು, ದಲಿತರ ಬಗ್ಗೆ ನೈಜ ಕಾಳಜಿಯಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಂತೆ ಎಸ್‌ಸಿಪಿ– ಎಸ್‌ಟಿಪಿ ಯೋಜನೆ ಜಾರಿಗೆ ತಂದು ಆಯಾ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡಲಿ'' ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ''ದೇಶದ ಎಲ್ಲ ವರ್ಗದ ಜನರ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಯ ಉದ್ದೇಶ ಇರಿಸಿಕೊಂಡಿರುವ ಸರ್ಕಾರ ಮಾತ್ರ ಅಧಿಕಾರದಲ್ಲಿರಬೇಕು. ಆದರೆ, ಕೇಂದ್ರದ ಮೋದಿ ಸರ್ಕಾರ, ಶೋಷಿತರು, ದಲಿತರು, ಕೃಷಿಕರು, ಶ್ರಮಿಕರು, ಕಾರ್ಮಿಕರು, ರೈತರು ಹಾಗೂ ಮಹಿಳಾ ವಿರೋಧಿಯಾಗಿದೆ. ಈ ಸರ್ಕಾರ ಬದಲಾವಣೆಯಾಗದೇ ಹೋದಲ್ಲಿ ಸಾಮಾಜಿಕ ಅಸಮಾನತೆ ಹೆಚ್ಚಾಗಲಿದೆ'' ಎಂದು ಆತಂಕ ವ್ಯಕ್ತಪಡಿಸಿದರು.
''ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಮೋದಿ ಭರವಸೆ ನೀಡಿದಂತೆ ನಡೆದುಕೊಂಡಿಲ್ಲ. ಕಳೆದ ಹತ್ತು ವರ್ಷದಲ್ಲಿ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. 2014 ರಿಂದ 18ರವರೆಗೆ ಕಾಂಗ್ರೆಸ್ ನೇತೃತ್ವದಲ್ಲಿನ ರಾಜ್ಯ ಸರ್ಕಾರದ ಅವಧಿಯಲ್ಲಿ 165 ಭರವಸೆಗಳನ್ನು ನೀಡಿದ್ದೆವು. ಈ ಪೈಕಿ 158 ಭರವಸೆ ಈಡೇರಿಸಿದ್ದೇವೆ. ಹೆಚ್ಚುವರಿ 30 ಭರವಸೆ ಈಡೇರಿಸಿದ್ದೇವೆ. ಆದರೆ, ಕೇಂದ್ರ ಸರ್ಕಾರ 650 ಭರವಸೆ ನೀಡಿತ್ತು. ಈ ಪೈಕಿ ಶೇ.10ರಷ್ಟು ಈಡೇರಿಸಿಲ್ಲ. ಎಸ್ಸಿ, ಎಸ್ಟಿ ಸಮುದಾಯದ ಬಗ್ಗೆ ಕಳಕಳಿ ಇದ್ದರೆ ಕಾಯ್ದೆ ಜಾರಿ ಮಾಡಿ. ಬಡ್ತಿಯಲ್ಲಿ ಮೀಸಲಾತಿ ತನ್ನಿ. ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಕೊಡಿ. ಇದು ಬಿಟ್ಟು ಸುಮ್ಮೆಲೆ ಒಳ್ಳೇಯ ಮಾತುಗಳನ್ನಾಡಿದರೆ ಅವರ ಉದ್ಧಾರ ಆಗದು'' ಎಂದು ಸಿದ್ದರಾಮಯ್ಯ ಕೇಂದ್ರದ ನಡೆಯನ್ನು ಟೀಕಿಸಿದರು.
''ಬಡ್ತಿ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಆದರೆ, ನಾವು ರತ್ನಪ್ರಭಾ ಎಂಬ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ಮತ್ತೆ ಬಡ್ತಿ ಮೀಸಲಾತಿ ನೀಡಿದ್ದೇವೆ. ಇದನ್ನು ನೀಡಿದ ಏಕೈಕ ರಾಜ್ಯ ಕರ್ನಾಟಕ ಆಗಿದೆ. ಆದರೆ, ಮೋದಿ ಕಳೆದ ಹತ್ತು ವರ್ಷದಲ್ಲಿ ಬರೀ ಸುಳ್ಳುಗಳನ್ನೇ ಹೇಳಿಕೊಂಡು ಬಂದಿದ್ದಾರೆ. ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಜಮೆ ಮಾಡುವುದಾಗಿ ಹೇಳಿದ್ದರು. ಇಂದಿಗೆ ಹದಿನೈದು ರೂಪಾಯಿ ಬಂದಿಲ್ಲ. ಹತ್ತು ವರ್ಷದಲ್ಲಿ ಹತ್ತು ಲಕ್ಷ ಉದ್ಯೋಗ ಸೃಷ್ಟಿಯಾಗಿಲ್ಲ. ರೈತರ ಆದಾಯ ದ್ವಿಗುಣ ಎಂದರು. ಆದರೆ, ಇರುವ ಕೃಷಿ, ದಿನನಿತ್ಯದ ಸರಕುಗಳ ಬೆಲೆ ಏರಿಕೆ ಮಾಡಿದ್ದಾರೆ'' ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಗಂಗಾವತಿಯ ಋಣ ತೀರಿಸಲಾಗದು- ಸಿದ್ದರಾಮಯ್ಯ: ''ಈ ಹಿಂದೆ ಕೊಪ್ಪಳ ಲೋಕಸಭಾ ಕ್ಷೇತ್ರದಕ್ಕೆ ಸ್ಪರ್ಧಿಸಿದ್ದಾಗ ಗಂಗಾವತಿ ನನಗೆ ಲೀಡ್ ಕೊಟ್ಟ ಕ್ಷೇತ್ರ. ಹೀಗಾಗಿ ನನ್ನ ರಾಜಕೀಯ ಜೀವನದಲ್ಲಿ ಮಹತ್ವದ ತಿರುವ ನೀಡಿದ ಗಂಗಾವತಿ ಕ್ಷೇತ್ರ ಮತ್ತು ಜನರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ'' ಎಂದು ಸಿಎಂ ಸಿದ್ದರಾಮಯ್ಯ ಭಾವನಾತ್ಮಕವಾಗಿ ಹೇಳಿದರು.
''ಇಲ್ಲಿನ ಜನರ ಋಣ ತೀರಿಸಲು ಸಾಧ್ಯವಿಲ್ಲ. ಹೀಗಾಗಿ ಗಂಗಾವತಿ, ಇಲ್ಲಿನ ಜನರು ಎಂದರೆ ನನಗೆ ವಿಶೇಷವಾದ ಪ್ರೀತಿ, ಗೌರವವಿದೆ. ಜನ ನನಗೆ ನೀಡಿದ ಪ್ರೀತಿಯನ್ನು ಈ ಲೋಕಸಭಾ ಚುನಾವಣೆಯಲ್ಲಿ ನೀಡಬೇಕು. ಮುಖ್ಯವಾಗಿ ಗಂಗಾವತಿಯಲ್ಲಿ ಸಾಕಷ್ಟು ಕಾಂಗ್ರೆಸ್ ನಾಯಕರು ಇದ್ದೀರಿ. ನಿಮ್ಮಲ್ಲಿನ ಭಿನ್ನಮತಗಳನ್ನು ಮರೆತು ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ವೇದಿಕೆ ಮೇಲಿದ್ದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮಾಜಿ ಶಾಸಕ ಶ್ರೀನಾಥ್ ಸೇರಿದಂತೆ ಇತರ ನಾಯಕರಿಗೆ ಸಿಎಂ ಸಲಹೆ ನೀಡಿದರು.
ಸಿಎಂ ಸಮ್ಮುಖದಲ್ಲಿ ಜಟಾಪಟಿ: ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಇಲ್ಲಿನ ಕಾಂಗ್ರೆಸ್ ನಾಯಕರ ಮಧ್ಯೆ ಇರುವ ಭಿನ್ನಮತ ಮತ್ತೊಮ್ಮೆ ಸ್ಫೋಟವಾಗಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಸಮ್ಕುಖದಲ್ಲಿಯೇ ಜಟಾಪಟಿ ಮಾಡಿಕೊಂಡ ಘಟನೆ ನಡೆಯಿತು. ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ಮಾಜಿ ಶಾಸಕ ಎಚ್.ಆರ್. ಶ್ರೀನಾಥ್ ಮಧ್ಯೆ ಇರುವ ಮುನಿಸು ಪಕ್ಷದ ವೇದಿಕೆ ಕಾರ್ಯಕ್ರಮದಲ್ಲಿ ಅದರಲ್ಲೂ ಮುಖ್ಯವಾಗಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಭಿನ್ನಮತ ಮತ್ತೊಮ್ಮೆ ಬಹಿರಂಗವಾಯಿತು.
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವೇದಿಕೆ ಮೇಲಿದ್ದ ಸಚಿವರು, ಶಾಸಕರು, ಮತ್ತು ನಾಯಕರು, ಈ ಇಬ್ಬರ ನಾಯಕರ ನಡುವಿನ ಮುನಿಸು ಶಮನ ಮಾಡಲು ಹರಸಾಹ ಮಾಡಿದರು. ಇಬ್ಬರ ನಡುವಿನ ಮುನಿಸು ಶಮನಕ್ಕೆ ಯತ್ನಿಸಿದ ಸಿದ್ದರಾಮಯ್ಯ ತಮ್ಮ ಎಡಕ್ಕೆ ಶ್ರೀನಾಥ್ ಮತ್ತು ಬಲಕ್ಕೆ ಇಕ್ಬಾಲ್ ಅನ್ಸಾರಿ ಅವರನ್ನು ಕೂರಿಸಿಕೊಂಡು ಸಮಾಧಾನ ಮಾಡಿದರು. ಅಲ್ಲದೇ ಅನ್ಸಾರಿ ತಮ್ಮ ಪ್ರಸ್ತಾವಿಕ ಭಾಷಣದಲ್ಲಿ ತಮ್ಮ ಸೋಲಿಗೆ ಪರೋಕ್ಷವಾಗಿ ಕಾರಣರಾದವರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಮುಜುಗುರಕ್ಕೆ ಒಳಗಾದ ಶ್ರೀನಾಥ್ ಮಾತನಾಡಲು ವೇದಿಕೆಗೆ ಆಗಮಿಸಿದಾಗ ನೆರೆದ ಜನ ವಿರೋಧ ವ್ಯಕ್ತಪಡಿಸಿದರು. ಇದನ್ನು ಲೆಕ್ಕಿಸದೇ ಮಾತನಾಡಿದ ಶ್ರೀನಾಥ್, ಇದೇ ವೇದಿಕೆಯಲ್ಲಿ ತಿರುಗೇಟು ನೀಡಿದರು.
ಇದನ್ನೂ ಓದಿ: ಮೋದಿ ಸೋಲಿಸಲು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅವಶ್ಯವಾಗಿದೆ: ಸಿ.ಎಂ. ಇಬ್ರಾಹಿಂ - CM Ibrahim