ಬೆಂಗಳೂರು: ''27 ವರ್ಷಗಳಲ್ಲಿ ಮೊದಲ ಬಾರಿಗೆ 'ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್' ಟ್ರ್ಯಾಕ್ ಅನ್ನು ಪರಿಚಯಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಲಾಗಿದೆ'' ಎಂದು ಇಂಡಿಯನ್ ಎಲೆಕ್ಟ್ರಾನಿಕ್ ಆ್ಯಂಡ್ ಸೆಮಿಕಂಡಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಚಂದಕ್ ಹೇಳಿದರು.
2024ರ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಅಂತಿಮ ದಿನವಾದ ಗುರುವಾರ 'ಈಟಿವಿ ಭಾರತ' ಪ್ರತಿನಿಧಿ ಜೊತೆ ಮಾತನಾಡಿದ ಅವರು, ''ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್‌ಗಳ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ಕರ್ನಾಟಕ ಮತ್ತು ಭಾರತದ ನಾಯಕತ್ವವನ್ನು ಟೆಕ್ ಸಮ್ಮಿಟ್ ಒತ್ತಿ ಹೇಳಿದೆ. ಇಲ್ಲಿನ ಎಲೆಕ್ಟ್ರೋ-ಸೆಮಿಕಾನ್ ಟ್ರ್ಯಾಕ್‌ನ ಸರ್ಕ್ಯೂಟ್ ಹಂತ ನಾವೀನ್ಯತೆಯನ್ನು ಹೆಚ್ಚಿಸಲು, ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಜಾಗತಿಕ ಉದ್ಯಮದಲ್ಲಿ ಭಾರತದ ಸ್ಥಾನವನ್ನು ಗಟ್ಟಿಗೊಳಿಸಲು ಸಹಕಾರಿಯಾಗಿದೆ'' ಎಂದು ಅಭಿಪ್ರಾಯಪಟ್ಟರು.
''ಶೃಂಗಸಭೆಯಲ್ಲಿ 24 ಪ್ರತಿಷ್ಠಿತ ಸ್ಪೀಕರ್‌ಗಳ ವಿಚಾರ ವಿನಿಮಯ ಎಲೆಕ್ಟ್ರಾನಿಕ್ ಮತ್ತು ಸೆಮಿಕಂಡಕ್ಟರ್‌ಗಳ ಹೆಚ್ಚಿನ ಕಲ್ಪನೆ ಮತ್ತು ಜ್ಞಾನ ಹಂಚಿಕೆಯ ಸಂಗಮಕ್ಕೆ ಕೊಡುಗೆ ನೀಡಿದೆ. ಒಟ್ಟಾರೆ, ಟೆಕ್ ಸಮ್ಮಿಟ್ ನಿಜವಾಗಿಯೂ ತಾಂತ್ರಿಕ ಶ್ರೇಷ್ಠತೆಯ ಆಚರಣೆಯಾಗಿದೆ ಹೊರಹೊಮ್ಮಿದೆ'' ಎಂದು ಅಶೋಕ್ ಚಂದಕ್ ಶ್ಲಾಘಿಸಿದರು.
ರಾಜ್ಯದ ಸ್ಥಾನಮಾನ ಹೆಚ್ಚಲಿದೆ: ''ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಭಾರತದ ಮೊದಲ ಜಿಸಿಸಿ ನೀತಿಯ ಬಿಡುಗಡೆಯಾಗಿದ್ದು, ಇದು ದೇಶದ ತಾಂತ್ರಿಕ ಪ್ರಗತಿಯಲ್ಲಿ ಮಹತ್ವದ ಮೈಲಿಗಲ್ಲನ್ನು ಸೃಷ್ಟಿಸಲಿದೆ. ಈ ಕಾರ್ಯತಂತ್ರದಿಂದ ಉದ್ಯಮದ ಬೇಡಿಕೆ, ಆರ್ ಆ್ಯಂಡ್ ಡಿ, ಮೂಲಸೌಕರ್ಯ ಅಭಿವೃದ್ಧಿ, ವೆಚ್ಚದ ದಕ್ಷತೆ, ಜಾಗತಿಕ ಮಾರುಕಟ್ಟೆ ಪ್ರವೇಶ, ಸೆಮಿಕಂಡಕ್ಟರ್ ಕಂಪನಿಗಳಿಗೆ ಉತ್ತಮ ಪರಿಸರದ ವ್ಯವಸ್ಥೆ, ಸಾಮರ್ಥ್ಯ ವೃದ್ಧಿ, ನೆಟ್‌ವರ್ಕ್ ಮತ್ತು ಸಂಪನ್ಮೂಲಗಳ ವಿನ್ಯಾಸ, ಉತ್ಪಾದನೆ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮೂಲಕ ಪ್ರಮುಖ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ವಲಯದಲ್ಲಿ ರಾಜ್ಯದ ಸ್ಥಾನಮಾನ ಹೆಚ್ಚಲಿದೆ'' ಎಂದು ತಿಳಿಸಿದರು.
''ಟೆಕ್ ಶೃಂಗಸಭೆ ಕೊನೆಯ ದಿನದಂದು, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ದುಂಡುಮೇಜಿನ ಚರ್ಚೆ ನಡೆಯಿತು. ಇದರಲ್ಲಿ ಉತ್ಪಾದನೆ, ಇ-ತ್ಯಾಜ್ಯ ನೀತಿ, ಸೌರ ಫಲಕ ತಯಾರಿಕೆ, ಕೌಶಲ್ಯ ಮತ್ತು ಮೌಲ್ಯ ಸರಪಳಿ ವರ್ಧನೆಯಂತಹ ನಿರ್ಣಾಯಕ ವಿಷಯಗಳನ್ನು ಹೈಲೈಟ್ ಮಾಡಲಾಯಿತು. ಚರ್ಚೆಯ ಸಮಯದಲ್ಲಿ ಸೆಮಿಕಂಡಕ್ಟರ್‌ಗಳ ಪ್ರಧಾನ ಉದ್ಯಮ ಸಂಸ್ಥೆಗಳು ಮತ್ತು ಭಾರತದಲ್ಲಿನ ದೇಶೀಯ ಬೇಡಿಕೆಯನ್ನು ಪೂರೈಸಲು ಮೈಸೂರಿನಂತಹ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸುವ ಮೂಲಕ ಆಮದು ಅವಲಂಬನೆಯಿಂದ ರಫ್ತು ನೇತೃತ್ವದ ಬೆಳವಣಿಗೆಗೆ ಬದಲಾಗುವ ಅಗತ್ಯವನ್ನು ಒತ್ತಿಹೇಳಲಾಯಿತು'' ಎಂದು ಅಶೋಕ್ ಚಂದಕ್ ವಿವರಿಸಿದರು.
ಇದನ್ನೂ ಓದಿ: ಉದ್ಯಮಶೀಲತೆ ಹೆಚ್ಚಿಸಲು 100 ಉದ್ದಿಮೆಗಳಿಂದ 100 ಕಾಲೇಜುಗಳ ದತ್ತು: ಸಚಿವ ಪ್ರಿಯಾಂಕ್ ಖರ್ಗೆ