ಮಂಗಳೂರು: ಜೆರೋಸಾ ಶಾಲೆಯ ಶಿಕ್ಷಕಿಯಿಂದ ಧಾರ್ಮಿಕ ನಿಂದನೆ ಆರೋಪ ಪ್ರಕರಣ ಸಂಬಂಧ ತನಿಖಾಧಿಕಾರಿ ಆಕಾಶ್ ಶಂಕರ್ ಅವರು ವಿದ್ಯಾರ್ಥಿಗಳು ಹಾಗೂ ಪೋಷಕರ ವಿಚಾರಣೆ ನಡೆಸಿದ್ದಾರೆ. ಪ್ರಕರಣ ಸಂಬಂಧ ತನಿಖೆಗಾಗಿ ಸರ್ಕಾರವು ಐಎಎಸ್ ಅಧಿಕಾರಿ ಆಕಾಶ್ ಶಂಕರ್ ಅವರನ್ನು ಇತ್ತೀಚೆಗೆ ನೇಮಕ ಮಾಡಿತ್ತು.
ಆಕಾಶ್ ಅವರು ಮಂಗಳವಾರವೂ ಕೂಡ ಡಿಡಿಪಿಐ ಕಚೇರಿಯಲ್ಲಿ ಮುಂಜಾನೆಯಿಂದಲೇ ವಿವಿಧ ಹಂತದಲ್ಲಿ ತನಿಖೆ ನಡೆಸಿ, ಕೆಲವು ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಸುಮಾರು ಶೇ. 30ರಷ್ಟು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಮೌಖಿಕವಾಗಿ ವಿಚಾರಣೆ ನಡೆಸಿದ್ದಾರೆ. ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರಕರಣ ಸಂಬಂಧ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಿದ್ದಾರೆ. ಜೊತೆಗೆ, ಶಾಲಾ ಆಡಳಿತ ಮಂಡಳಿಯನ್ನು ಕರೆಯಿಸಿ ವಿಚಾರಣೆ ನಡೆಸಲಾಗಿದೆ. ಶಾಲೆಗೂ ಭೇಟಿ ನೀಡಿದ್ದಾರೆ.
''ಎರಡು ದಿನಗಳಲ್ಲಿ ಈ ಪ್ರಕ್ರಿಯೆ ಮುಗಿಸುವ ಅಂದಾಜಿದ್ದರೂ ಇನ್ನಷ್ಟು ಮಾಹಿತಿ ಕಲೆಹಾಕುವ ಅವಶ್ಯಕತೆ ಇರುವುದರಿಂದ ತನಿಖೆ ಮುಂದುವರೆಯಲಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ತಮ್ಮ ಅನಿಸಿಕೆ ನೀಡಲು ಮುಕ್ತ ಅವಕಾಶ ನೀಡಲಾಗಿದೆ. ತನಿಖೆಯನ್ನು ತರಾತುರಿಯಲ್ಲಿ ಮಾಡುವ ಉದ್ದೇಶವಿಲ್ಲ. ನ್ಯಾಯಯುತವಾಗಿ ನಡೆಸಿ, ಸರ್ಕಾರಕ್ಕೆ ಸತ್ಯಾಂಶವನ್ನು ನೀಡಲಿದ್ದೇನೆ. ಎಲ್ಲವೂ ಪೂರ್ಣಗೊಂಡ ಬಳಿಕ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ'' ಎಂದು ಆಕಾಶ್ ಶಂಕರ್ ತಿಳಿಸಿದ್ದಾರೆ.
ಬೆದರಿಕೆ ಆರೋಪ, ಶಿಕ್ಷಕಿಯಿಂದ ದೂರು: ಈ ನಡುವೆ ಜೆರೋಸಾ ಶಾಲೆಯಲ್ಲಿ ಧಾರ್ಮಿಕ ನಿಂದನೆ ಆರೋಪಿಸಿ ಆಡಿಯೋ ಮಾಡಿದ ಪೋಷಕಿ ಇವರೇ ಎಂದು ಮಹಿಳೆಯ ಕುಟುಂಬದ ಸಹಿತ ಫೋಟೋವನ್ನು ಕಿಡಿಗೇಡಿಗಳು ವೈರಲ್ ಮಾಡಿದ್ದು, ಈ ಬಗ್ಗೆ ದೂರು ದಾಖಲಾಗಿದೆ. ತಮ್ಮ ಕುಟುಂಬದ ಫೋಟೋದೊಂದಿಗೆ, ನಂಬರ್ ಕೂಡ ವೈರಲ್ ಮಾಡಲಾಗಿದೆ ಎಂದು ಆರೋಪಿಸಿ ಕವಿತಾ ಎಂಬುವರು ದೂರು ದಾಖಲಿಸಿದ್ದಾರೆ. ಜೊತೆಗೆ, ವಿದೇಶದಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದಾರೆ.
ಕವಿತಾ ತೊಕ್ಕೊಟ್ಟುವಿನ ಹೋಲಿ ಏಂಜಲ್ ಶಾಲೆಯಲ್ಲಿ ಪ್ರಾಥಮಿಕ ತರಗತಿ ಶಿಕ್ಷಕಿಯಾಗಿದ್ದು, ಅವರ ಮಗಳು ಜೆರೋಸಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಕತಾರ್, ದುಬೈ, ಸೌದಿ ಸೇರಿ ಹಲವೆಡೆಯಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು, ಅವಾಚ್ಯವಾಗಿ ನಿಂದಿಸಿ ವಾಟ್ಸ್ಆ್ಯಪ್ಗೆ ಅಶ್ಲೀಲವಾದ ಆಡಿಯೋ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂದು ದೂರಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ
ಶಿಕ್ಷಕಿ ಅಮಾನತು: ಈ ನಡುವೆ ಹೋಲಿ ಏಂಜಲ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಕವಿತಾ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಜೆರೋಸಾ ಶಾಲೆಯಲ್ಲಿನ ಧಾರ್ಮಿಕ ನಿಂದನೆ ಆರೋಪ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡಿದ ವಿಚಾರ ಹಿನ್ನೆಲೆಯಲ್ಲಿ ಶಿಕ್ಷಕಿಯನ್ನು ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕವಿತಾ ಮಾತನಾಡಿ, ''ನನಗೆ ಫೆ.10ರಿಂದ ವಿದೇಶದಿಂದ ಬೆದರಿಕೆ ಕರೆಗಳು ಬರುತ್ತಿದೆ. ನನ್ನಿಂದ ಆಡಿಯೋ ವೈರಲ್ ಆಗಿದೆ ಎಂದು ಹೇಳುತ್ತಿದ್ದಾರೆ. ನನ್ನಿಂದ ವೈರಲ್ ಆಗಿಲ್ಲ. ನಾನು ಕೆಲಸ ಮಾಡುತ್ತಿದ್ದ ಶಾಲೆಯಿಂದಲೂ ಕೆಲಸಕ್ಕೆ ಬರುವುದು ಬೇಡ ಅಂದಿದ್ದಾರೆ. ನನ್ನ ಸೇವೆ ಅಗತ್ಯ ಇಲ್ಲ ಅಂದಿದ್ದಾರೆ. ಈ ಬಗ್ಗೆ ಹೇಳಿಕೆ ಕೊಟ್ಟ ನಂತರ ಈ ಬೆಳವಣಿಗೆ ಆಗಿದೆ'' ಎಂದರು.
ಇದನ್ನೂ ಓದಿ: ಜೆರೋಸಾ ಶಾಲೆಯಲ್ಲಿ ಧಾರ್ಮಿಕ ನಿಂದನೆ ಪ್ರಕರಣ: ಐಎಎಸ್ ಅಧಿಕಾರಿಯಿಂದ ತನಿಖೆ ಆರಂಭ