ಬೆಂಗಳೂರು: ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೆಂದು ಚಂದ್ರಶೇಖರನಾಥ ಸ್ವಾಮೀಜಿ ಒತ್ತಾಯಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಅದೆಲ್ಲಾ ದೊಡ್ಡವರ ವಿಷಯ. ನನಗೆ ಗೊತ್ತಿಲ್ಲ ಎಂದು ಹೇಳಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚಂದ್ರಶೇಖರನಾಥ ಸ್ವಾಮೀಜಿ ಯಾವ ಮಟ್ಟದಲ್ಲಿ ಇದ್ದರು, ಹೆಚ್.ಡಿ.ದೇವೇಗೌಡರ ಬಗ್ಗೆ ಕಳೆದೊಂದು ತಿಂಗಳಿಂದ ಏನೇನು ನಡೀತಿದೆ ಎಂಬುದು ಗೊತ್ತಿದೆ ಎಂದರು.
ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ದೇವೇಗೌಡರನ್ನು ಆಹ್ವಾನಿಸದಿರುವ ಬಗ್ಗೆ ಸ್ವಾಮೀಜಿ ಸೌಜನ್ಯಕ್ಕಾದರೂ ಹೇಳಬಹುದಿತ್ತಲ್ಲವೇ?. ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಪಟ್ಟಿದ್ದು, ಬೇರೆ ಕಾರ್ಯಕ್ರಮ ಅಂತಾ ಹೇಳಬಹುದಿತ್ತು. ಕಾರ್ಯಕ್ರಮದಲ್ಲಿ ಗೌಡರ ಬಗ್ಗೆ ಯಾರಾದ್ರೂ ಮಾತನಾಡಬೇಕಿತ್ತು. ದೇವೇಗೌಡರು ಅವರ ಮಠಕ್ಕೆ ಏನೆಲ್ಲಾ ಮಾಡಿದ್ದಾರೆ. ಸಮಾಜದ ಮುಖಂಡರ ಈ ರೀತಿ ಆದಾಗ ಖಂಡಿಸಬೇಕಿತ್ತು ಅಲ್ವಾ? ಎಂದು ಅಸಮಾಧಾನ ಹೊರಹಾಕಿದರು.
ನಾನು ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ: ನನಗೆ ವೈರಾಗ್ಯ ಏನಿಲ್ಲ. ನಾನು ರಾಜಕೀಯದಿಂದ ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ. ಮುಂದೆ ಕಾಲವೇ ಉತ್ತರಿಸಲಿದೆ ಎಂದರು.
ಪುತ್ರರಾದ ಪ್ರಜ್ವಲ್ ಹಾಗೂ ಸೂರಜ್ ರೇವಣ್ಣ ಪ್ರಕರಣದ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ಕಾನೂನು, ನ್ಯಾಯಾಂಗದ ಬಗ್ಗೆ ಗೌರವ ಇದೆ. ಪ್ರಕರಣ ಕೋರ್ಟ್‌ನಲ್ಲಿರುವಾಗ ಮಾತನಾಡುವುದಿಲ್ಲ ಎಂದು ಹೇಳಿದರು.
ಮಾಜಿ ಶಾಸಕ ಪ್ರೀತಂಗೌಡ ಷಡ್ಯಂತ್ರದ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ದೊಡ್ಡವರು ಎಂದೂ ಕುಟುಕಿದರು.
ಇದನ್ನೂ ಓದಿ: ಸಿಎಂ ಬದಲಾವಣೆ: ಸ್ವಾಮೀಜಿ ಹೇಳಿಕೆ ಹಿಂದೆ ವಿರೋಧ ಪಕ್ಷಗಳ ಕೈವಾಡ- ಚಲುವರಾಯಸ್ವಾಮಿ - N Chaluvarayaswamy