ಮೈಸೂರು: ಯದುವೀರ್ಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಸಂದರ್ಭದಲ್ಲಿ ನನಗೆ ಕಾಂಗ್ರೆಸ್‌ನಿಂದ ಟಿಕೆಟ್ ಕೊಟ್ಟಿದ್ದರೂ ನಾನು ಚುನಾವಣೆಗೆ ನಿಲ್ಲುತ್ತಿರಲಿಲ್ಲ. ನಾನು ಮೈಸೂರು-ಕೊಡಗು ಕ್ಷೇತ್ರದಲ್ಲಿ ಯದುವೀರ್ ಪರ ಮತ ಪ್ರಚಾರ ಮಾಡುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದರು.
ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಎಂಎಲ್‌ಸಿಯಾಗಿದ್ದರೂ ಕಾಂಗ್ರೆಸ್‌ನಿಂದ ಲೋಕಸಭಾ ಚುನಾವಣೆಗೆ ಟಿಕೆಟ್ ಕೇಳಿದ್ದು ನಿಜ. ಈಗ ಪಕ್ಷ ರಾಜಕಾರಣ ಸತ್ತು ಬಹಳ ವರ್ಷವಾಗಿದೆ. ಈಗೇನಿದ್ದರೂ ವ್ಯಕ್ತಿ ರಾಜಕಾರಣದ ವೈಭವೀಕರಣ ಎಂದರು.
ರಾಜಕಾರಣ ನಿಂತ ನೀರಲ್ಲ, ಹರಿಯುವ ಗಂಗೆಯ ರೀತಿ. ಧ್ರುವೀಕರಣ ಆಗುತ್ತಿದೆ. ನನ್ನ ಒಂದು ವೋಟನ್ನು ಯದುವೀರ್ಗೆ ಹಾಕುವ ಮೂಲಕ ಮಹಾರಾಜರ ಋಣ ತೀರಿಸುತ್ತೇನೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ನಲ್ಲಿ ಛೀಮಾರಿ ವಿಚಾರ: ರಾಜ್ಯದಲ್ಲಿ 5,8,9 ತರಗತಿಗೆ ಬೋರ್ಡ್ ಪರೀಕ್ಷೆ ನಡೆಸುವುದು ಕಾನೂನುಬಾಹಿರ. ಇದು ಶಿಕ್ಷಣ ಹಕ್ಕು ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಎರಡನೇ ಬಾರಿಗೆ ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕೋರ್ಟ್ ಛೀಮಾರಿ ಹಾಕಿದೆ. ಈ ಹಿಂದೆ ಬಿಜೆಪಿ ಸರ್ಕಾರ ಕೂಡ ಇದನ್ನೇ ಮಾಡಿತು. ಈಗ ಕಾಂಗ್ರೆಸ್ ಸರ್ಕಾರವೂ ಕೂಡ ಇದೇ ನೀತಿಯನ್ನು ಮುಂದುವರಿಸುತ್ತಿದೆ. ಪ್ರಶ್ನೆ ಪತ್ರಿಕೆಯ ವಿಚಾರದಲ್ಲಿ ಕಿಕ್ ಬ್ಯಾಕ್ ಪಡೆಯಲು ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ದೂರಿದರು.
'ಶಿಕ್ಷಣ ಸಚಿವರನ್ನು ಬದಲಿಸಲಿ': ಪ್ರಶ್ನೆ ಪತ್ರಿಕೆ ಟೆಂಡರ್ ಒಬ್ಬನೇ ವ್ಯಕ್ತಿಗೆ ನೀಡಲಾಗಿದೆ. ಈ ಮೂಲಕ ಪರೀಕ್ಷೆಯ ಪ್ರಾವಿತ್ರ್ಯತೆಯನ್ನು ಸರ್ಕಾರ ಹಾಳು ಮಾಡುತ್ತಿದೆ. ಕರ್ನಾಟಕ ಶಿಕ್ಷಣಕ್ಕೆ ಮಾದರಿಯಾಗಿತ್ತು. ಈಗ ಕೆಳಹಂತಕ್ಕೆ ಹೋಗಿದೆ. ಶಿಕ್ಷಣ ಇಲಾಖೆಯನ್ನು ನಿಭಾಯಿಸುವುದರಲ್ಲಿ ಸಚಿವ ಮಧು ಬಂಗಾರಪ್ಪ ಸಂಪೂರ್ಣ ವಿಫಲರಾಗಿದ್ದಾರೆ. ಪ್ರತಿಷ್ಠೆಗೆ ಬಿದ್ದು ಸರ್ಕಾರ ಪರೀಕ್ಷೆಯ ಪ್ರಾವಿತ್ರ್ಯತೆಯನ್ನು ಹಾಳು ಮಾಡಿದೆ. ಕೂಡಲೇ ಮುಖ್ಯಮಂತ್ರಿಗಳು ಶಿಕ್ಷಣ ಸಚಿವರನ್ನು ಬದಲಿಸಬೇಕು. ರಾಜ್ಯ ಸರ್ಕಾರ ಗ್ಯಾರಂಟಿ ಜತೆಗೆ, ಶಿಕ್ಷಣ ಗ್ಯಾರಂಟಿ ನೀಡಬೇಕು ಎಂದು ಆಗ್ರಹಿಸಿದರು.