ಮೈಸೂರು: ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ಕಲಾ ಸೇವೆಯನ್ನು ಮುಂದುವರಿಸುತ್ತೇನೆ. ರಾಜಕೀಯ ಸೇರ್ಪಡೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಮೈಸೂರಿನಲ್ಲಿ ಅಯೋಧ್ಯೆ ಬಾಲರಾಮನ ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದರು.
ಅಯೋಧ್ಯೆಯಿಂದ ನಿನ್ನೆ ಬೆಂಗಳೂರಿಗೆ ಬಂದಿದ್ದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಇಂದು ಮೈಸೂರಿಗೆ ಆಗಮಿಸಿ ಅಗ್ರಹಾರದಲ್ಲಿರುವ ಕಶ್ಯಪ ಶಿಲ್ಪ ಕಲಾಕೇಂದ್ರದ ಹೆಸರಿನ ತಮ್ಮ ಮನೆಗೆ ಆಗಮಿಸಿದ ವೇಳೆ ಅದ್ದೂರಿ ಸ್ವಾಗತ ನೀಡಲಾಯಿತು. ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅರುಣ್ ಯೋಗಿರಾಜ್, ನನಗೆ ರಾಜಕೀಯಕ್ಕೆ ಬರುವ ಯಾವುದೇ ಉದ್ದೇಶ ಇಲ್ಲ. ಕಲೆ ಮೂಲಕ ಸೇವೆ ಮಾಡಬೇಕು ಎಂಬುದು ನನ್ನ ಉದ್ದೇಶ. ನಾನು ರಾಜಕೀಯಕ್ಕೆ ಬರುವ ವಿಚಾರ ಚರ್ಚೆ ಆಗಿಲ್ಲ. ಜೊತೆಗೆ ರಾಜಕೀಯಕ್ಕೆ ಹೊಸ ಇಚ್ಛಾಶಕ್ತಿಯೂ ಇಲ್ಲ. ನನಗೆ ಕಲೆ ಜೊತೆ ಇರಬೇಕು ಎನ್ನುವುದು ಇಷ್ಟ. ಅದನ್ನು ಬಿಟ್ಟು ದೂರ ಹೋಗಲು ಇಷ್ಟವಿಲ್ಲ ಎಂದು ತಿಳಿಸಿದರು.
ನಮ್ಮ ಕಲೆಗೆ ಸಿಕ್ಕ ಅತ್ಯುತ್ತಮ ಗೌರವ: ನನ್ನನು ಕಲೆಯೇ ಇಲ್ಲಿಯವರೆಗೆ ಕರೆದುಕೊಂಡು ಬಂದು ನಿಲ್ಲಿಸಿದೆ. ಇಷ್ಟು ಸಣ್ಣ ಸಮಯದಲ್ಲಿ ನನಗೆ ಸ್ವಲ್ಪ ಹೆಸರು ತಂದು ಕೊಟ್ಟಿರುವುದು ಕಲೆ ಮಾತ್ರ ಎಂದು ಹೇಳಿದ ಅರುಣ್ ಯೋಗಿರಾಜ್. ನಾನು ನನಗೆ ವಹಿಸಿದ ಕೆಲಸವನ್ನು ಶ್ರದ್ಧೆಯಿಂದ ಮಾಡಿರುವೆ. ಆದರೆ ನಮ್ಮ ದೇಶದ ಜನ , ನಮ್ಮ ರಾಜ್ಯದ ಜನ ಹಾಗೂ ಮೈಸೂರಿನ ಜನ ಇಷ್ಟೊಂದು ಪ್ರೀತಿ ಕೊಡುತ್ತಾರೆ ಎಂದು ಅಂದುಕೊಂಡಿರಲಿಲ್ಲ.
ಇದು ನಮ್ಮ ಕಲೆಗೆ ಸಿಕ್ಕ ಗೌರವ, ನಮ್ಮ ಕೆಲಸಕ್ಕೆ ಸಿಕ್ಕ ಅತ್ಯುತ್ತಮ ಗೌರವ ಎಂದು ಹೇಳಲು ನಾನು ಬಯಸುತ್ತೇನೆ ಎಂದ ಶಿಲ್ಪಿ ಅರುಣ್ ಯೋಗಿರಾಜ್ ನಿನ್ನೆ ಬೆಂಗಳೂರಿಗೆ ಬಂದಾಗ ಬಹಳಷ್ಟು ಜನ ಅಲ್ಲಿಗೆ ಬಂದಿದ್ದರು, ಆದರೆ ದುರಾದೃಷ್ಟ ಎಂದರೆ ನಾನು ಎಲ್ಲರನ್ನೂ ಭೇಟಿ ಮಾಡಲು ಆಗಲಿಲ್ಲ, ಅಷ್ಟು ಜನ ಸೇರಿದ್ದರು. ಅವರಿಗೆಲ್ಲ ಈ ಮುಖಾಂತರ ಕ್ಷಮೆ ಕೋರುತ್ತೇನೆ ಎಂದು ಶಿಲ್ಪಿ ಅರುಣ್ ಯೋಗಿರಾಜ್ ಮನವರಿಕೆ ಮಾಡಿದರು.
ಯದುವೀರ್ ಭೇಟಿಯಾದ ಶಿಲ್ಪಿ ಅರುಣ್ ಯೋಗಿರಾಜ್ : ಮೈಸೂರಿಗೆ ಬಂದ ತಕ್ಷಣ ಮಹಾರಾಜ ಯದುವೀರ್ ಕೃಷ್ಣ ದತ್ತ ಚಾಮರಾಜ ಅವರನ್ನು ಅರಮನೆಯಲ್ಲಿ ಭೇಟಿಯಾಗಿ ಅಯೋಧ್ಯೆಯಲ್ಲಿ ಆದ ಅನುಭವವನ್ನು ಹಂಚಿಕೊಂಡರು. ಈ ವೇಳೆ ಶಿಲ್ಪಿ ಅರುಣ್ ಯೋಗಿರಾಜ್ ಅವರು, ಕುಟುಂಬದ ತಾತಾನಿಗೆ ಅರಮನೆಯ ಮಹಾರಾಜರು ಆಶ್ರಯ ನೀಡಿದ್ದು, ಮನೆತನದ ಕಲೆ ಉಳಿಯಲಿಕ್ಕೆ ಸಹಾಯ ಮಾಡಿದ್ದು, ಆ ದೃಷ್ಟಿಯಿಂದ ಯಧುವೀರ್ ಅವರನ್ನು ಭೇಟಿಯಾದೆ ಎಂದು ಹೇಳಿದ ಶಿಲ್ಪಿ ಅರುಣ್ ಅವರು, ನಾಳೆ ಸುತ್ತೂರು ಶ್ರೀ ಗಳನ್ನು ಭೇಟಿ ಮಾಡುವುದಾಗಿ ಮಾಹಿತಿ ನೀಡಿದರು.
ನನಗೆ ಈಗ ಸ್ವಲ್ಪ ಒತ್ತಡವಿದ್ದು, ಒಂದೆರೆಡು ಜವಾಬ್ದಾರಿಗಳಿವೆ. ಅದನ್ನು ಮುಗಿಸಿ ನಾನು ನನ್ನ ಕೆಲಸವನ್ನು ಮಾಡುತ್ತೇನೆ. ಪೂರ್ವಜರು ಮಾಡುವ ಕುಲಕಸುಬುಗಳನ್ನು ಶ್ರದ್ಧೆಯಿಂದ ಮಾಡಿದರೆ ಅದಕ್ಕೆ ಫಲ ಸಿಗುತ್ತದೆ. ಅದಕ್ಕೆ ನಾನೇ ಸಾಕ್ಷಿ. ದೇವರು ನಾವು ಮಾಡುವ ಉತ್ತಮ ಕೆಲಸಕ್ಕೆ ಆಶೀರ್ವಾದ ಮಾಡೇ ಮಾಡುತ್ತಾನೆ ಎಂದು ಹೇಳಿದ ಅವರು, ನನಗೆ 7 ತಿಂಗಳಲ್ಲಿ ಇಷ್ಟು ದೊಡ್ಡ ಗೌರವ ಸಿಗುತ್ತದೆ ಎಂದು ಊಹಿಸಿರಲಿಲ್ಲ. ಮುಂದೆಯೂ ನನ್ನ ಜವಾಬ್ದಾರಿಯನ್ನು ಅರಿತು ಕೆಲಸವನ್ನು ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂಓದಿ:ಕರಾವಳಿಯಲ್ಲಿ ನಡೆಯುತ್ತೆ ಮರಾಠಿ ನಾಯ್ಕ ಸಮಾಜದ ಗೋಂದೋಳು ಪೂಜೆ