ಬೆಂಗಳೂರು: ''ನಾನು ಮಂಡ್ಯ ಕ್ಷೇತ್ರದ ಆಕಾಂಕ್ಷಿ ಅಲ್ಲ. ಇದನ್ನು ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ನಾನು ಯು ಟರ್ನ್ ಹೊಡೆಯುವ ಗಿರಾಕಿ ಅಲ್ಲ. 2019ರಲ್ಲಿ ಅಭ್ಯರ್ಥಿ ಆಗಿದ್ದು, ಸೋತಿದ್ದೆ. ಈಗಲೂ ನನ್ನ ಸ್ಪರ್ಧೆಗೆ ಸಹಜವಾಗಿ ಮಂಡ್ಯ ಮುಖಂಡರ ಒತ್ತಾಯ ಇದೆ. ಆದರೆ, ನಾನು ಆಕಾಂಕ್ಷಿ ಅಲ್ಲ'' ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಶೇಷಾದ್ರಿಪುರಂನಲ್ಲಿರುವ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕಳೆದ ನಾಲ್ಕು ದಿನಗಳಿಂದಲೂ ನಾನು ಗಮನಿಸುತ್ತಿದ್ದೇನೆ, ನನ್ನ ನಿರ್ಧಾರದಲ್ಲಿ ನನಗೆ ಸ್ಪಷ್ಟತೆ ಇದೆ. ನಾನು ಮಂಡ್ಯ ಟಿಕೆಟ್ ಆಕಾಂಕ್ಷಿ ಅಲ್ಲ. ನೀವು ಬರಬೇಕು, ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು ಅಂತ ಮಂಡ್ಯ ಮುಖಂಡರು, ಕಾರ್ಯಕರ್ತರು ಕರೆದರು. ಈ ಒತ್ತಡದ ಕಾರಣವಾಗಿ ನಾನು ಮಂಡ್ಯ ಭಾಗದಲ್ಲಿ ಓಡಾಡಿದ್ದೇ ಅಷ್ಟೇ. ಮೈತ್ರಿ ಬಲಪಡಿಸಬೇಕು, ಮತ್ತೆ ಮೋದಿಯವರು ಪ್ರಧಾನಿ ಆಗಬೇಕು ಎನ್ನುವ ಅಪೇಕ್ಷೆ ನಮ್ಮದು. ಅದಕ್ಕಾಗಿ ನನ್ನ ಗಮನ 28 ಕ್ಷೇತ್ರಗಳ ಕಡೆಯೂ ಇರುತ್ತದೆ'' ಎಂದು ಹೇಳಿದರು.
ಕಾಲವೇ ಎಲ್ಲದಕ್ಕೂ ಉತ್ತರಿಸಲಿದೆ: ''ಮಂಡ್ಯ, ಹಾಸನದಲ್ಲಿ ಜೆಡಿಎಸ್ಗೆ ಪ್ರೀತಂಗೌಡ ವಿರೋಧ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರಸ್ವಾಮಿ, ಇದಕ್ಕೆಲ್ಲ ಕೇಂದ್ರದ ನಾಯಕರು, ನಮ್ಮ ಪಕ್ಷದ ವರಿಷ್ಠರು ಅತೀ ಶೀಘ್ರದಲ್ಲೇ ಎಲ್ಲ ಪ್ರಶ್ನೆಗಳಿಗೂ ತೆರೆ ಎಳೆಯುತ್ತಾರೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಬೇಕು, ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಪ್ರೀತಂ ಗೌಡರ ಹೇಳಿಕೆ ಗಮನಿಸಿದೆ. ಆದರೆ ಈ ಬಗ್ಗೆ ಕೇಂದ್ರದ ನಾಯಕರು, ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ'' ಎಂದರು.
''ಮಂಡ್ಯ ಟಿಕೆಟ್ಗೆ ಸುಮಲತಾ ಒತ್ತಾಯ ವಿಚಾರದಲ್ಲಿ ಏನೇ ಪ್ರಶ್ನೆ ಕೇಳಿದರೂ ಕಾಲವೇ ಉತ್ತರಿಸುತ್ತದೆ. ಮಂಡ್ಯ ಜೆಡಿಎಸ್ನಲ್ಲಿ ಗಂಡಸರು ಯಾರೂ ಇಲ್ವಾ ಎಂಬ ಮದ್ದೂರು ಶಾಸಕ ಕದಲೂರು ಉದಯ್ ಹೇಳಿಕೆಗೂ ಕಾಲವೇ ಉತ್ತರಿಸಲಿದೆ'' ಎಂದು ಪ್ರತಿಕ್ರಿಯಿಸಿದರು.
''ಕೇಂದ್ರ ಗೃಹ ಸಚಿವ ಅಮಿತ್ ಶಾ ಮೈಸೂರಿಗೆ ಬಂದಿದ್ದಾರೆ. ಅಮಿತ್ ಶಾ ಅವರಿಗೆ ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ. ಕುಮಾರಸ್ವಾಮಿ ಸ್ವಲ್ಪ ಆರೋಗ್ಯದ ಸಮಸ್ಯೆಯಿಂದ ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡುತ್ತಿಲ್ಲ. ಈ ವಿಚಾರವನ್ನು ಶಾ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಕುಮಾರಸ್ವಾಮಿ ನಾಳೆ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ'' ಎಂದು ತಿಳಿಸಿದರು.
ಕಾಂಗ್ರೆಸ್ ಜನರ ದಿಕ್ಕು ತಪ್ಪಿಸುತ್ತಿದೆ: ತೆರಿಗೆ ಹಂಚಿಕೆ ತಾರತಮ್ಯ, ಉತ್ತರ ಕೊಡಿ ಅಮಿತ್ ಶಾ ಎಂಬ ಕಾಂಗ್ರೆಸ್ ಒತ್ತಾಯ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ನಿಖಿಲ್, ''ಹಣಕಾಸು ಆಯೋಗಗಳು ಸ್ವಾಯತ್ತ ಸಂಸ್ಥೆಗಳಾಗಿವೆ. ಹಿಂದುಳಿದ ರಾಜ್ಯಗಳಿಗೆ ತೆರಿಗೆ, ಅನುದಾನ ಹಂಚಿಕೆ ಬಗ್ಗೆ ಹಣಕಾಸು ಆಯೋಗದ ಶಿಫಾರಸು ಅನ್ವಯ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ಆದರೆ ಇದನ್ನೇ ರಾಜಕೀಯವಾಗಿ, ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ನಾಯಕರು ಬಳಸಿಕೊಳ್ಳುತ್ತಿದ್ದಾರೆ. ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರು ಈಗ ಬಹಳ ಪ್ರಜ್ಞಾವಂತರು, ಬುದ್ಧಿವಂತರಾಗಿದ್ದಾರೆ, ಈ ವಿಚಾರ ಜನರ ಗಮನದಲ್ಲಿದೆ'' ಎಂದು ಹೇಳಿದರು.
ಇದನ್ನೂ ಓದಿ; ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆ ನಿಲ್ಲಿಸುವುದಾಗಿ ಘೋಷಿಸಲಿ: ಸಿಎಂ ಸವಾಲು