ಉಡುಪಿ: ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಿನ್ನೆ(ಶನಿವಾರ) ನಡೆದಿದೆ. ಲಕ್ಷ್ಮಣ (38) ಬಂಧಿತ ಆರೋಪಿ. ಅನಿತಾ (32) ಪತಿಯಿಂದ ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ.
ನಡೆದಿದ್ದೇನು?: ದಂಪತಿ ಸಾಗರ ಮೂಲದವರಾಗಿದ್ದು, ಬಸ್ರೂರಿನ ವೃದ್ಧಾಶ್ರಮವೊಂದರ ತೋಟದಲ್ಲಿ ಕೆಲಸಕ್ಕೆಂದು ಬಂದಿದ್ದರು. ಇವರು ಇಲ್ಲಿನ ಕ್ವಾಟ್ರಸ್ನ ಒಂದು ರೂಮ್ನಲ್ಲಿ ವಾಸ್ತವ್ಯ ಹೂಡಿದ್ದರು. ಯಾವುದೋ ವಿಷಯಕ್ಕೆ ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ದಂಪತಿ ಮಧ್ಯೆ ಗಲಾಟೆ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಲಕ್ಷ್ಮಣ, ಪತ್ನಿ ಅನಿತಾ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕುಂದಾಪುರ (ಕಂಡ್ಲೂರು) ಗ್ರಾಮಾಂತರ ಠಾಣೆ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಸ್ಥಳೀಯರ ಸಹಾಯದೊಂದಿಗೆ ಮಹಿಳೆಯನ್ನು ರಕ್ಷಿಸಿದ್ದಾರೆ.
ಹರಸಾಹಸಪಟ್ಟು ಆರೋಪಿಯನ್ನು ಬಂಧಿಸಿದ ಪೊಲೀಸರು: ಪತ್ನಿಯ ಕೊಲೆಗೆ ಯತ್ನಿಸಿದ ಆರೋಪಿಯನ್ನು ಹಿಡಿಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು ಹೆದರಿಸುತ್ತಿದ್ದುದರಿಂದ ಎದುರಿನ ಬಾಗಿಲು ಮುರಿದು ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಪೊಲೀಸರು ಆತನಿದ್ದ ರೂಮ್ ಕಿಟಕಿ ಮೂಲಕ ಖಾರದ ಪುಡಿ ಎರಚಿದ್ದರು, ಇದರಿಂದ ಆತ ತಪ್ಪಿಸಿಕೊಂಡಿದ್ದ. ಬಳಿಕ ಏರ್ಗನ್ ಮೂಲಕ ಗ್ಯಾಸ್ ಸಿಂಪಡಿಸಿದ್ದರು, ಅದರಿಂದಲೂ ತಪ್ಪಿಸಿಕೊಂಡಿದ್ದ. ಕೊನೆಗೆ ಎದುರಿನ ಬಾಗಿಲನ್ನು ಒಡೆಯಲು ಪ್ರಯತ್ನಿಸುತ್ತಿರುವಂತೆ ಮಾಡಿ, ಮತ್ತೊಂದು ತಂಡ ಕಿಟಕಿ ಮೂಲಕ ಒಳಗೆ ಪ್ರವೇಶಿಸಿ ಮಹಿಳೆಯನ್ನು ರಕ್ಷಿಸಿದೆ. ಬಳಿಕ ಆರೋಪಿಯನ್ನು ಸೆರೆಹಿಡಿದ್ದಾರೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಳಗಾವಿ: ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ ಪಾಪಿ ಮಗ - SON KILLS MOTHER