ಹುಬ್ಬಳ್ಳಿ: ಸಂಗೀತ ಕ್ಷೇತ್ರಕ್ಕೂ ಉತ್ತರ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಪುಟ್ಟರಾಜ ಗವಾಯಿಗಳು, ಗಂಗೂಬಾಯಿ ಹಾನಗಲ್, ಸವಾಯಿ ಗಂಧರ್ವ ಸೇರಿದಂತೆ ಹಲವು ಜನ ಸಂಗೀತ ದಿಗ್ಗಜರನ್ನು ಕೊಟ್ಟ ನೆಲ ಉತ್ತರ ಕರ್ಮಾಟಕ. ಆದ್ರೆ, ಸ್ವರ ಹೊಮ್ಮಿಸಿ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಉತ್ತರ ಕರ್ನಾಟಕ ವಿದ್ಯಾರ್ಥಿಗಳು ಈಗ ಸಂಗೀತ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ ತೆಗೆದುಕೊಂಡ ಏಕರೂಪದ ನಿರ್ಧಾರದಿಂದ ಈ ಭಾಗದ ನೂರಾರು ಅಂಧ ಹಾಗೂ ಅಂಗವಿಕಲ ಮಕ್ಕಳು ಪರೀಕ್ಷೆಯಿಂದ ದೂರ ಉಳಿದಿದ್ದಾರೆ.
ಸಂಗೀತ ವಿಷಯದಲ್ಲಿ ಜ್ಯೂನಿಯರ್, ಸಿನಿಯರ್, ವಿದ್ವತ್ ಪೂರ್ವ, ವಿದ್ವತ್ ಅಂತಿಮ ಹೀಗೆ ವಿವಿಧ ಪರೀಕ್ಷೆ ನಡೆಸುತ್ತದೆ. ಇದನ್ನು ಮೊದಲು ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿಯೇ ನಡೆಸುತ್ತಿತ್ತು. ಆದರೆ, ಈ ಬಾರಿ ಸಂಗೀತ ವಿಷಯಕ್ಕೆ ಸಂಬಂಧಪಟ್ಟಂತೆ ಮೈಸೂರಿನಲ್ಲಿರುವ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ ನಡೆಸುತ್ತಿದೆ. ಈ ಪರೀಕ್ಷೆಗೆ ಎಲ್ಲ ವಿದ್ಯಾರ್ಥಿಗಳು ಕುಳಿತುಕೊಳ್ಳುತ್ತಾರೆ. ಆದರೆ ಅಂಧ ಮಕ್ಕಳು, ಅಂಗವಿಕಲ ಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ತಗೆದುಕೊಳ್ಳುವುದು ಮಾಮೂಲಿಯಾಗಿದೆ.
ಕಳೆದ ಹಲವು ವರ್ಷಗಳಿಂದ ಮಕ್ಕಳ ಅನುಕೂಲಕ್ಕಾಗಿ ಹತ್ತಿರದ ಶಾಲೆ ಕಾಲೇಜುಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಪ್ರತಿವರ್ಷ ನಡೆಯುವ ಈ ಪರೀಕ್ಷೆಯೂ ಕಳೆದ ಶನಿವಾರ ಮತ್ತು ಭಾನುವಾರದಂದು ನಡೆದಿದ್ದು, ಗದಗ ಜಿಲ್ಲೆ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಹುಬ್ಬಳ್ಳಿಯ ಕನಕದಾಸ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗಿತ್ತು. ಇಲ್ಲಿ ಧಾರವಾಡ ಹಾಗೂ ಗದಗ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಆಯೋಜನೆ ಮಾಡಿತ್ತು. ಆದರೆ, ಗದಗ ವೀರೇಶ್ವರ ಪುಣ್ಯಾಶ್ರಮ ಹಾಗೂ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆಯ 125 ವಿದ್ಯಾರ್ಥಿಗಳು (ಅಂಧ ಮತ್ತು ಅಂಗವಿಕಲ) ಪರೀಕ್ಷೆ ಬರೆಯಬೇಕಿತ್ತು.
ಆದ್ರೆ, ಹೊಳೆಆಲೂರಿನಿಂದ ಹುಬ್ಬಳ್ಳಿ 130 ಕಿ.ಮೀ., ಗದಗ ನಗರದಿಂದ 60 ಕಿಲೋ ಮೀಟರ್ ಇದೆ. ಇಷ್ಟು ದೂರವಿರುವ ಪರೀಕ್ಷಾ ಕೇಂದ್ರಕ್ಕೆ ಆ ಮಕ್ಕಳನ್ನು ಕರೆತರುವುದು ಸುಲಭದ ಮಾತಲ್ಲ. ಜತೆಗೆ ಪರೀಕ್ಷೆ ಬರೆಯುವ ಮಕ್ಕಳಿಗೆ ಸಹಾಯಕರನ್ನು ನೇಮಿಸಿದ್ದು, ಇವರನ್ನು ಕರೆದುಕೊಂಡು ಬರಬೇಕು. ಇತ್ತ ಪರೀಕ್ಷಾ ಕೇಂದ್ರ ಅಂಗವಿಕಲ, ಅಂಧ ಮಕ್ಕಳ ಸ್ನೇಹಿಯಾಗಿರಬೇಕು. ಆದರೆ ಇವುಗಳನ್ನು ವಿಶ್ವವಿದ್ಯಾಲಯ ಪರಿಶೀಲಿಸಿಲ್ಲ. ಹೀಗಾಗಿ ನಮ್ಮ ಮಕ್ಕಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ ಎಂದು ಹೊಳೆ ಆಲೂರಿನ ಜ್ಞಾನ ಸಿಂಧು ಶಾಲೆಯ ಮುಖ್ಯಸ್ಥ ಶಿವಾನಂದ ಕೇಲೂರ ಅಸಮಾಧಾನ ಹೊರಹಾಕಿದರು.
ನೇರವಾಗಿ ಕನಕದಾಸ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ತೆರೆದು ಕೈತೊಳೆದುಕೊಂಡಿದ್ದು, ಜೊತೆಗೆ ದೂರವೂ ಆಗುತ್ತದೆ. ಆದಕಾರಣ ಪರೀಕ್ಷಾ ಕೇಂದ್ರ ಬದಲಿಸಿ ಗದಗದಲ್ಲೇ ಪರೀಕ್ಷಾ ಕೇಂದ್ರ ತೆರೆಯಿರಿ ಎಂದು ಅಂಧ ಮಕ್ಕಳು 15 ದಿನಗಳ ಹಿಂದೆ ಗದಗ, ಜಿಲ್ಲಾಧಿಕಾರಿ ಮೂಲಕ ಸಂಬಂಧಪಟ್ಟ ವಿವಿಗೆ ಮನವಿ ಸಲ್ಲಿಸಿದ್ದಾರೆ. ಜೊತೆಗೆ ಈ ಎರಡು ಶಾಲೆಗಳ ಸಿಬ್ಬಂದಿ ಕೂಡ ಉನ್ನತ ಶಿಕ್ಷಣ ಇಲಾಖೆಗೂ ಮನವಿ ಕೊಟ್ಟಿದ್ದು ಆಗಿದೆ. ಗದಗ ಜಿಲ್ಲಾ ಉಸ್ತುವಾರಿ ಎಚ್.ಕೆ. ಪಾಟೀಲ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದು ವಿಷಯ ತಿಳಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಕೂಡ ವಿವಿ ಕುಲಪತಿಗಳೊಂದಿಗೆ ಚರ್ಚಿಸಿದ್ದರು. ಆದರೆ, ಯಾವುದಕ್ಕೂ ವಿವಿ ಮಾತ್ರ ಸ್ಪಂದಿಸಲಿಲ್ಲ. ಹೀಗಾಗಿ ಅಂಧ ಮಕ್ಕಳು ಪರೀಕ್ಷೆಯಿಂದ ವಂಚಿತರಾಗಬೇಕಾಯಿತು ಎಂದು ಕೇಲೂರು ಬೇಸರ ವ್ಯಕ್ತಪಡಿಸಿದರು.
ಜ್ಞಾನ ಸಿಂಧು ಶಾಲೆಯ ವಿದ್ಯಾರ್ಥಿ ದೇವರಾಜ್ ತಳವಾರ ಪ್ರತಿಕ್ರಿಯಿಸಿ, ''ಪರೀಕ್ಷೆ ಬರೆಯಲು ಮತ್ತೊಮ್ಮೆ ಅವಕಾಶ ಕಲ್ಪಿಸಬೇಕು. ಹೊಳೆಆಲೂರಿನಿಂದ ಹುಬ್ಬಳ್ಳಿ ಹಾಗೂ ಧಾರವಾಡಕ್ಕೆ ತೆರಳಿ ಪರೀಕ್ಷೆ ಬರೆಯುವದು ಕಷ್ಟ. ನಾವು ಅಂಧ ಮಕ್ಕಳಾಗಿರುವದರಿಂದ ಇವರಿಗೆ ಪರೀಕ್ಷೆ ಸಹಾಯಕರಾಗಿ ಮತೋರ್ವ ವಿದ್ಯಾರ್ಥಿ ಕರೆದುಕೊಂಡು ಹೋಗಲು ಅಸಾಧ್ಯ. ಹೀಗಾಗಿ ಗದಗನಲ್ಲಿಯೇ ಪರೀಕ್ಷೆ ಬರೆಸಬೇಕು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತಗೆದುಕೊಳ್ಳಬೇಕು'' ಎಂದು ಮನವಿ ಮಾಡಿದರು.