ಹುಬ್ಬಳ್ಳಿ : ಶಿಗ್ಗಾಂವಿಯಲ್ಲಿ ಉಪಚುನಾವಣೆ ರಂಗು ಪಡೆಯುತ್ತಿದ್ದರೆ, ಇತ್ತ ವಾಣಿಜ್ಯ ನಗರಿ ಹುಬ್ಬಳ್ಳಿ ಉಪಚುನಾವಣೆಯ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯುತ್ತಿದ್ದು, ಎರಡು ರಾಷ್ಟ್ರೀಯ ಪಕ್ಷಗಳಿಗೆ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ತಂತ್ರಗಾರಿಕೆ ನಡೆಸುತ್ತಿವೆ. ಇದಕ್ಕಾಗಿ ಹುಬ್ಬಳ್ಳಿಯನ್ನು ಕೇಂದ್ರ ಸ್ಥಾನ ಮಾಡಿಕೊಂಡು ಕಾರ್ಯತಂತ್ರ ರೂಪಿಸುತ್ತಿವೆ.
ರಾಜ್ಯ ನಾಯಕರಿಗೆ ಹುಬ್ಬಳ್ಳಿ ಏಕೆ ಇಷ್ಟ?: ಎರಡು ಪಕ್ಷಗಳ ಪ್ರಮುಖ ನಾಯಕರಿಗೆ ಹುಬ್ಬಳ್ಳಿಯೇ ಹಾಟ್ ಫೆವರೀಟ್ ಸ್ಪಾಟ್ ಆಗಿದೆ. ಹುಬ್ಬಳ್ಳಿಗೆ ಎಲ್ಲ ಕಡೆಗಳಿಂದ ಸಂಪರ್ಕವಿದೆ. ವಿಮಾನ ಸೌಲಭ್ಯ, ರೈಲು ಹಾಗೂ ರಸ್ತೆ ಸೌಲಭ್ಯ ಇದೆ. ಹೀಗಾಗಿ, ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲದ ಆಗಮಿಸುವ ನಾಯಕರು, ಪ್ರಮುಖ ಹೋಟೆಲ್‌ಗಳಲ್ಲಿ ಬೀಡು ಬಿಡುತ್ತಾರೆ. ಅಲ್ಲಿಯೇ ಕುಳಿತು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಶತಾಯಗತಾಯ ಪ್ರಯತ್ನಿಸುತ್ತಿದ್ದು, ವಿವಿಧ ರಾಜಕೀಯ ರಣತಂತ್ರಗಳನ್ನು ರೂಪಿಸುತ್ತಿದ್ದಾರೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಸ್ಪರ್ಧಿಸಿರುವುದರಿಂದ ಬಿಜೆಪಿಯ ಘಟಾನುಘಟಿಗಳು ಇಲ್ಲಿಯೇ ಉಳಿದುಕೊಂಡು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.
20 ವರ್ಷದಿಂದ ಬಿಜೆಪಿ ತೆಕ್ಕೆಯಲ್ಲಿದ್ದ ಶಿಗ್ಗಾಂವಿ ಕ್ಷೇತ್ರವನ್ನು ಕಾಂಗ್ರೆಸ್ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಎಲ್ಲ ಸಚಿವರು, ಶಾಸಕರು ಹಾಗೂ ಮಾಜಿ ಶಾಸಕರು ಒಗ್ಗಟ್ಟಿನಿಂದ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ಬಸವರಾಜ ಬೊಮ್ಮಾಯಿ ತಮ್ಮ ಮಗನ ಗೆಲುವಿಗೋಸ್ಕರ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದಲ್ಲಿ ನಿರಂತರ ಪ್ರಚಾರ ನಡೆಸಿದ್ದಾರೆ. ಅಭಿವೃದ್ಧಿಗೆ ಮತ ನೀಡಿ ಎಂದು ಹೇಳಿಕೊಂಡು ಜನರ ಬಳಿ ಹೋಗುತ್ತಿದ್ದಾರೆ. ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರಲ್ಹಾದ್ ಜೋಶಿ ಸೇರಿದಂತೆ ಹಲವು ನಾಯಕರು ಪ್ರಚಾರ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕರ ದಂಡು ಕೂಡ ಹುಬ್ಬಳ್ಳಿಯಲ್ಲಿ ಬೀಡುಬಿಟ್ಟಿದೆ. ಐವರು ಉಸ್ತುವಾರಿ ಸಚಿವರು ಹಾಗೂ ಹತ್ತಕ್ಕೂ ಶಾಸಕರು ಹಗಲು ರಾತ್ರಿ ಪ್ರಚಾರ ನಡೆಸುತ್ತಿದ್ದಾರೆ.
ವಾಸ್ತವ್ಯಕ್ಕೆ ಹೇಳಿ ಮಾಡಿಸಿದ ಸ್ಥಳ : ಹುಬ್ಬಳ್ಳಿ ನಾಯಕರ ವಾಸ್ತವ್ಯಕ್ಕೆ ಹೇಳಿ ಮಾಡಿಸಿದಂತಿದೆ. ಹುಬ್ಬಳ್ಳಿಯಿಂದ ಶಿಗ್ಗಾಂವಿ 35 ಕಿ.ಮೀ ದೂರ ಇದ್ದರೆ, ಜಿಲ್ಲಾ ಕೇಂದ್ರ ಹಾವೇರಿಯಿಂದ ಶಿಗ್ಗಾಂವಿ 40 ಕಿ.ಮೀ ದೂರದಲ್ಲಿದೆ. ಇಲ್ಲಿ ಸಚಿವರು ಹಾಗೂ ಶಾಸಕರ ವಾಸ್ತವ್ಯಕ್ಕೆ ಸ್ಟಾರ್ ಹೋಟೆಲ್ಗಳಿವೆ. ಅದರ ಜೊತೆಗೆ ನೀತಿ ಸಂಹಿತೆ ಇಲ್ಲಿ ಅನ್ವಯವಾಗುವುದಿಲ್ಲ. ಹೀಗಾಗಿ, ಇಲ್ಲಿಂದ ರಾಜಕೀಯ ರಣತಂತ್ರಗಳನ್ನು ರೂಪಿಸುತ್ತಿದ್ದಾರೆ.
ಎರಡು ಪಕ್ಷಗಳ ಪ್ರಮುಖ ನಾಯಕರು ಆಯಾ ಜಾತಿ, ಜನಾಂಗದ ನಾಯಕರನ್ನು ಸೆಳೆದು ಇಲ್ಲಿಯೇ ಮಾತುಕತೆ ನಡೆಸುತ್ತಿರುವುದು ಸಾಮಾನ್ಯವಾಗಿದೆ. ನಗರದ ಎಲ್ಲಾ ಹೋಟೆಲ್ಗಳು ರಾಜಕೀಯ ನಾಯಕರಿಂದ ಭರ್ತಿಯಾಗಿವೆ. ಪ್ರತಿದಿನ ರಾತ್ರಿಯಿಂದ ಬೆಳಗ್ಗೆ 11 ಗಂಟೆಯವರೆಗೂ ಹೋಟೆಲ್ಗಳ ಎದುರು ವಾಹನಗಳ ಸಾಲು ಹಾಗೂ ಒಳಗಡೆ ರಾಜಕೀಯ ತಂತ್ರಗಾರಿಕೆಯಿಂದ ತುಂಬಿ ತುಳುಕುತ್ತಿವೆ.
ಇದನ್ನೂ ಓದಿ : ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ವಿಜಯೇಂದ್ರ ಪ್ರಚಾರ: ಗೆಲ್ಲಿಸಲು ಮತದಾರರಲ್ಲಿ ಮನವಿ