ಚಾಮರಾಜನಗರ: 2025ಕ್ಕೆ ಕ್ಷಣಗಣನೆ ಶುರುವಾಗಿದೆ. ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ಜನ ಕಾತುರರಾಗಿದ್ದಾರೆ. 2024ರಲ್ಲಿ ಹಲವು ಸಿಹಿ-ಕಹಿ ಘಟನೆಗಳಿಗೆ ಚಾಮರಾಜನಗರ ಸಾಕ್ಷಿಯಾಗಿದೆ. ಜಿಲ್ಲೆಯ ಪ್ರಮುಖ ಸುದ್ದಿಗಳ ಹಿನ್ನೋಟ ಇಲ್ಲಿದೆ.
ಕಾಂಗ್ರೆಸ್ ಗೆಲುವು: 2019ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಮಾಜಿ ಸಂಸದ ದಿ.ವಿ.ಶ್ರೀನಿವಾಸ ಪ್ರಸಾದ್ ಗೆದ್ದು, ಮೊದಲ ಬಾರಿಗೆ ಕಮಲ ಅರಳಿಸಿದ್ದರು. ತನ್ನ ಭದ್ರಕೋಟೆಯಂತಿದ್ದ ಚಾಮರಾಜನಗರವನ್ನು ಮತ್ತೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಗೆಲುವು ಸಾಧಿಸಿದ್ದರು.
ಮತಗಟ್ಟೆ ಧ್ವಂಸ: ಮೂಲಸೌಕರ್ಯಕ್ಕೆ ಒತ್ತಾಯಿಸಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಜನರು ಮತಗಟ್ಟೆಯನ್ನೇ ಧ್ವಂಸಗೊಳಿಸಿದ್ದರು. ಬಳಿಕ ಮರು ಮತದಾನ ನಡೆಸಲಾಗಿತ್ತು.
ಗಜಗಣತಿ: ಚಾಮರಾಜನಗರದ ಬಂಡೀಪುರ, ಬಿಳಿಗಿರಿರಂಗನಾಥ ದೇವಾಲಯ, ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ಬೆಟ್ಟ ಹಾಗೂ ಕಾವೇರಿ ವನ್ಯಜೀವಿಧಾಮದಲ್ಲಿ ಮೂರು ದಿನ ಗಜಗಣತಿ ನಡೆದಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೆಚ್ಚು ಆನೆಗಳು ಕಂಡುಬಂದಿದ್ದವು.
ಜೊತೆಗೆ, ದೇಶದಲ್ಲೇ ಎರಡನೇ ಅತ್ಯುತ್ತಮ ಹುಲಿ ಸಂರಕ್ಷಿತ ಪ್ರದೇಶ ಎಂಬ ಕೀರ್ತಿಗೂ ಬಂಡೀಪುರ ಪಾತ್ರವಾಗಿತ್ತು. ಬಂಡೀಪುರದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ ಮತ್ತು ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ವಿದ್ಯಾರ್ಥಿ ಮಿತ್ರ ಕಾರ್ಯಕ್ರಮ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿತ್ತು.
ಪುಟ್ಟರಂಗಶೆಟ್ಟಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರನ್ನು ಎಂಎಸ್ಐಎಲ್ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಕವಿಗೆ ದೆಹಲಿ ಗಣರಾಜ್ಯೋತ್ಸವಕ್ಕೆ ಆಹ್ವಾನ: ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ್ದ ಜೋಗುಳ ಪದ ರಚಿಸಿದ್ದ ಕೊಳ್ಳೇಗಾಲದ ಕವಿ ಮಂಜುನಾಥ್ ಅವರಿಗೆ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಚಾಮರಾಜನಗರದ ಮಹಿಳಾ ಉದ್ಯಮಿ ವರ್ಷಾ ಅವರಿಗೆ ಆಹ್ವಾನ ಕೊಡಲಾಗಿತ್ತು. ಇವರು ಉಮ್ಮತ್ತೂರು ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲಿ ಬಾಳೆ ದಿಂಡು ಉತ್ಪನ್ನಗಳ ತಯಾರಿಕಾ ಉದ್ಯಮ ಆರಂಭಿಸಿ ಮಹಿಳೆಯರಿಗೆ ಉದ್ಯೋಗ ಕೊಟ್ಟಿದ್ದರು.
ಚಾಮರಾಜನಗರ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ರಾಜ್ಯದ ಕೊನೆಯ ರೈಲ್ವೆ ನಿಲ್ದಾಣವಾದ ಚಾಮರಾಜನಗರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಅಮೃತ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದರು. ಕಾಮಗಾರಿ ಪ್ರಗತಿಯಲ್ಲಿದ್ದು, 2025ರ ಫೆಬ್ರವರಿ, ಮಾರ್ಚ್ ಒಳಗೆ ಹೊಸ ರೂಪದಲ್ಲಿ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.
ಸ್ಟೆಲ್ಲಾ ಮೇರಿಗೆ ಕ್ಲೀನ್ಚಿಟ್: ಕಾಡುಗಳ್ಳ ವೀರಪ್ಪನ್ ಗುಂಪಿನಲ್ಲಿ ಗುರುತಿಸಿಕೊಂಡು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದ ಸ್ಟೆಲ್ಲಾ ಮೇರಿ ಆರೋಪ ಮುಕ್ತರಾಗಿದ್ದರು. ಚಾಮರಾಜನಗರ ಬಾಲ ನ್ಯಾಯ ಮಂಡಳಿಯು ಸ್ಟೆಲ್ಲಾ ಮೇರಿ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳಿಂದ ಖುಲಾಸೆಗೊಳಿಸಿತ್ತು.
ವಿ.ಶ್ರೀನಿವಾಸ್ ಪ್ರಸಾದ್ ಅಸ್ತಂಗತ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಾಮರಾಜನಗರದ ಮಾಜಿ ಸಂಸದ ಶ್ರೀನಿವಾಸ್ ಪ್ರಸಾದ್ (76) ಏಪ್ರಿಲ್ 28ರಂದು ಇಹಲೋಕ ತ್ಯಜಿಸಿದ್ದರು.
ಕೊಳ್ಳೇಗಾಲ ಮಾಜಿ ಶಾಸಕ, ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಅನಾರೋಗ್ಯದಿಂದ ಡಿ.10ರಂದು ನಿಧನವಾಗಿದ್ದರು.
ಕೈದಿಗಳಿಗೆ ಕಂಪ್ಯೂಟರ್ ತರಬೇತಿ: ಕಾರಾಗೃಹ ಬಂಧಿಗಳಿಗೆ ಕಾರಾಗೃಹದಲ್ಲಿಯೇ ಕಂಪ್ಯೂಟರ್ ಶಿಕ್ಷಣ ತರಬೇತಿ ನೀಡುವ ರಾಜ್ಯದಲ್ಲಿಯೇ ಮೊದಲು ಎನಿಸಿರುವ ವಿನೂತನ ಅರ್ಥಪೂರ್ಣ ಕಾರ್ಯಕ್ರಮ ಚಾಮರಾಜನಗರ ಜಿಲ್ಲೆಯಲ್ಲಿ ಯಶಸ್ಸು ಕಂಡಿತ್ತು. ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಬಂಧಿಗಳಿಗೆ ಅಲ್ಲಿಯೇ ಕಂಪ್ಯೂಟರ್ ತರಬೇತಿ ನೀಡಿ ಅವರು ಬಿಡುಗಡೆಗೊಂಡ ಬಳಿಕ ಬದುಕು ಕಟ್ಟಿಕೊಳ್ಳಲು ನೆರವಾಗಲಿ ಎಂಬ ಉದ್ದೇಶದಿಂದ ಕಂಪ್ಯೂಟರ್ ತರಬೇತಿ ನೀಡಲು ಯೋಚಿಸಿ ಮೈಸೂರಿನ ಇನ್ಫೋಸಿಸ್ ರೋಟರಿ ಪಂಚಶೀಲ ಸಂಸ್ಥೆಗಳೊಂದಿಗೆ ಸಿಎಸ್‍ಆರ್ ನೆರವಿನೊಂದಿಗೆ ಕಾರಾಗೃಹದಲ್ಲಿಯೇ ಕಂಪ್ಯೂಟರ್ ತರಬೇತಿ ಕೊಡಿಸಲಾಗಿತ್ತು.
ಚಿಕ್ಕಲ್ಲೂರು ಜಾತ್ರೆಯಲ್ಲಿ ಪಂಕ್ತಿಸೇವೆ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆಯಲ್ಲಿ ಪಂಕ್ತಿಸೇವೆ ನಿರ್ವಿಘ್ನದಿಂದ ನಡೆದಿತ್ತು. ದೇಗುಲ ಆವರಣ ಬಿಟ್ಟು ಖಾಸಗಿ ಜಮೀನುಗಳಲ್ಲಿ ಬಿಡಾರ ಹೂಡಿದ್ದ ಭಕ್ತರು, ಮಾಂಸದ ಅಡುಗೆ ಮಾಡಿ ಪಂಕ್ತಿಸೇವೆ ನಡೆಸಿದ್ದರು.
ಆತ್ಮಹತ್ಯೆಗೆ ಯತ್ನಿಸಿ ಇಬ್ಬರು ಸಾವು: ಯುವಕನ ಬ್ಲಾಕ್ಮೇಲ್ಗೆ ಬೇಸತ್ತ ಕುಟುಂಬವೊಂದು ಸಾಮೂಹಿಕವಾಗಿ ಮಾದಪ್ಪನ ಸನ್ನಿಧಿಗೆ ಕೆಲವೇ ಕಿಲೋಮೀಟರ್ ದೂರದಲ್ಲಿರುವ ತಾಳಬೆಟ್ಟದ ಬಳಿ ಆತ್ಮಹತ್ಯೆಗೆ ಯತ್ನಿಸಿ, ಇಬ್ಬರು ಮೃತಪಟ್ಟಿದ್ದರು.
ಇದನ್ನೂ ಓದಿ: 2024ರಲ್ಲಿ ಮೈಸೂರು ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನಾವಳಿಗಳ ಸಂಕ್ಷಿಪ್ತ ಹಿನ್ನೋಟ