ಬೆಂಗಳೂರು: ಹೊಸ ವರ್ಷವನ್ನು ಸ್ವಾಗತಿಸಲು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭರ್ಜರಿ ಸಿದ್ಧತೆ ಶುರುವಾಗಿದೆ. ಎಂ.ಜಿ.ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ನಗರದ ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ. ಹೀಗಾಗಿ ನಮ್ಮ ಮೆಟ್ರೋ ರೈಲು ಸೇವೆಯನ್ನು ತಡರಾತ್ರಿ ಎರಡು ಗಂಟೆಯವರೆಗೂ ವಿಸ್ತರಿಸಲಾಗಿದ್ದು, ಇದೀಗ ಬಿಎಂಟಿಸಿ ಕೂಡ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಿದೆ.
ಬೆಂಗಳೂರಿನ ವಿವಿಧ ಭಾಗಗಳಿಂದ ರಾತ್ರಿ 2 ಗಂಟೆಯವರೆಗೆ ಹೆಚ್ಚುವರಿ ಬಸ್ಗಳು ಸಂಚರಿಸಲಿವೆ. ಎಂ.ಜಿ.ರಸ್ತೆಯಿಂದ ನಗರದ ವಿವಿಧೆಡೆ ಹೆಚ್ಚಿನ ಬಸ್ ಸೌಲಭ್ಯವಿದೆ. 13 ಸ್ಥಳಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿರುವುದಾಗಿ ಬಿಎಂಟಿಸಿ ಮಾಹಿತಿ ನೀಡಿದೆ.
ರಾತ್ರಿ 11 ಗಂಟೆಯಿಂದ ತಡರಾತ್ರಿ 2 ಗಂಟೆಯವರೆಗೆ ಹೆಚ್ಚುವರಿ ಬಸ್ ಸೇವೆ ಸಿಗಲಿದೆ. ಬಾಗಲೂರು, ಹೊಸಕೋಟೆ, ಚನ್ನಸಂದ್ರ, ಕಾಡುಗೋಡಿ, ಬನಶಂಕರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಬನಶಂಕರಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಹೆಬ್ಬಾಳ, ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.
ಮದ್ಯ ಸೇವಿಸಿ ಬರುವ ಪ್ರಯಾಣಿಕರಿಗೆ ನೋ ಎಂಟ್ರಿ: ಹೊಸ ವರ್ಷದ ಸಂಭ್ರಮಾಚರಣೆಗೆ ಮೆಟ್ರೋ ರೈಲು ಸೇವೆಯನ್ನು ವಿಸ್ತರಿಸಲಾಗಿದ್ದು, ತಡರಾತ್ರಿ 2 ಗಂಟೆಗೆ ಎಲ್ಲಾ ಟರ್ಮಿನಲ್‌ನಿಂದ ಕೊನೆಯ ರೈಲು ಹೊರಡಲಿದೆ. ಆದರೆ, ಕುಡಿದು ಬಂದ ಪ್ರಯಾಣಿಕರಿಗೆ ಈ ಬಾರಿ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಲು ಅವಕಾಶವಿಲ್ಲ. ಮೆಟ್ರೋ ನಿಲ್ದಾಣದಲ್ಲಿ ಅಂಥವರು ಕಂಡು ಬಂದರೆ 500 ರೂಪಾಯಿ ದಂಡ ವಿಧಿಸಲಾಗುವುದು. ಮಹಿಳೆಯರಿಗೆ ತೊಂದರೆ ನೀಡಿದರೆ ಪೊಲೀಸರ ವಶಕ್ಕೆ ನೀಡಲಾಗುವುದು. 31ರ ರಾತ್ರಿ ಮಹಿಳೆಯರ ಸುರಕ್ಷತೆಗಾಗಿ ಪ್ರತೀ ಮೆಟ್ರೋ ಕೋಚ್‌ನಲ್ಲೂ ಮಹಿಳಾ ಸೆಕ್ಯುರಿಟಿ ಮತ್ತು ಪ್ಯಾಟ್ರೋಲ್ ಟೀಮ್ ನಿಯೋಜಿಸಲಾಗಿದೆ ಎಂದು ಬಿ.ಎಂ.ಆರ್.ಸಿ.ಎಲ್ ಹೇಳಿದೆ.
ಇದನ್ನೂ ಓದಿ: ಹೊಸ ವರ್ಷಾಚರಣೆ ವೇಳೆ ಪೀಪಿ, ವಿ - ಮಾಸ್ಕ್ ಬಳಸದಿರುವಂತೆ ಪೊಲೀಸ್ ಆಯುಕ್ತರ ಮನವಿ - COMMISSIONER APPEAL ON V MASK