ಹುಬ್ಬಳ್ಳಿ: 'ಛೋಟಾ ಮುಂಬೈ' ಎಂದೇ ಪ್ರಸಿದ್ಧಿ ಪಡೆದಿರುವ ವಾಣಿಜ್ಯ ನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ದೇಶದಲ್ಲಿ ಐದನೇ ಸ್ಥಾನ ಸಿಕ್ಕಿದೆ. 1974ರಲ್ಲಿ ನಿರ್ಮಾಣವಾಗಿರುವ ಈ ನಿಲ್ದಾಣಕ್ಕೆ ಈಗ ಸುವರ್ಣ ಮಹೋತ್ಸವದ ಸಂಭ್ರಮ. ಈ ಮಧ್ಯೆ ಗ್ರಾಹಕರ ಸಂತೃಪ್ತಿ ಸಮೀಕ್ಷೆಯಲ್ಲಿ ದೇಶದಲ್ಲೇ ಟಾಪ್ 5ರಲ್ಲಿ ಸ್ಥಾನ ಪಡೆದಿದೆ. ಮಧ್ಯಮ ಗಾತ್ರದ ವಿಮಾನ ನಿಲ್ದಾಣಗಳ ವಿಭಾಗದಲ್ಲಿ ಗ್ರಾಹಕರಿಗೆ ನೀಡುತ್ತಿರುವ ಸೇವೆ ಹಾಗೂ ಸೌಲಭ್ಯಗಳನ್ನು ಪರಿಗಣಿಸಿ ಈ ಸಮೀಕ್ಷೆ ನಡೆಸಲಾಗಿತ್ತು.
-
ಗ್ರಾಹಕರ ತೃಪ್ತಿ ಸಮೀಕ್ಷೆಯಲ್ಲಿ 58 ಭಾರತೀಯ ವಿಮಾನ ನಿಲ್ದಾಣಗಳ ( ಮಧ್ಯಮ ಗಾತ್ರದ ವಿಮಾನ ನಿಲ್ದಾಣ) ಪೈಕಿ 5ನೇ ಸ್ಥಾನ ಪಡೆದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಈ ಮನ್ನಣೆಯನ್ನು ಗಳಿಸುವುದಕ್ಕೆ ಕಾರಣಕರ್ತರಾದ ಹುಬ್ಬಳ್ಳಿ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳು.
— Pralhad Joshi (Modi Ka Parivar) (@JoshiPralhad) March 20, 2024
ಕಳೆದೆರಡು ದಶಕಗಳಿಂದ ಅತ್ಯಾಧುನಿಕ ಸೌಲಭ್ಯಗಳಿಂದ ವಿಮಾನ ನಿಲ್ದಾಣ ಮೇಲ್ದರ್ಜೆಗೇರುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಹಾಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡುವ ವಿಮಾನ ನಿಲ್ದಾಣವಿದು. ದೇಶದ 58 ವಿಮಾನ ನಿಲ್ದಾಣಗಳ ಪೈಕಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುವಲ್ಲಿ ಹುಬ್ಬಳ್ಳಿ ಏರ್ಪೋರ್ಟ್‌ಗೆ ಒಟ್ಟು 5 ಅಂಕಕ್ಕೆ 4.95ರಷ್ಟು ಅಂಕಗಳು ದೊರೆತಿವೆ. ಈ ಮನ್ನಣೆಗೆ ಕಾರಣರಾದ ನಿಲ್ದಾಣದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಏರ್‌ಪೋರ್ಟ್ ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣ
"ಹುಬ್ಬಳ್ಳಿ ಇದೀಗ ದೇಶದ ಎಲ್ಲ ಪ್ರಮುಖ ನಗರಗಳಿಗೆ ವಿಮಾನಯಾನ ಸಂಪರ್ಕ ಒದಗಿಸುತ್ತಿದೆ. ನಿತ್ಯ ಸುಮಾರು 15 ವಿಮಾನಗಳು ವಾಣಿಜ್ಯ ನಗರದಿಂದ ಹಾರಾಟ ನಡೆಸುತ್ತಿವೆ. ಸಾವಿರಾರು ಪ್ರಯಾಣಿಕರು ಸುಖಕರ ಪ್ರಯಾಣ ಮಾಡುತ್ತಿದ್ದಾರೆ" ಎಂದು ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶ ಕುಮಾರ್ ಮಾಹಿತಿ ನೀಡಿದರು.
ಹುಬ್ಬಳ್ಳಿಯಿಂದ ದೇಶದ ಹಲವು ನಗರಗಳಿಗೆ ವಿಮಾದನಯಾನ ಸೇವೆ ಆರಂಭವಾಗಿದೆ. ದೆಹಲಿ, ಬೆಂಗಳೂರು, ಹೈದರಾಬಾದ್, ಮುಂಬೈ ಹಾಗು ಚೆನ್ನೈ ಮುಂತಾದ ನಗರಗಳಿಗೆ ಇಲ್ಲಿಂದ ವಿಮಾನದಲ್ಲಿ ಪ್ರಯಾಣಿಸುವ ಸೌಲಭ್ಯ ಲಭ್ಯವಿದೆ. ಇಂಡಿಗೋ, ಸ್ಪೇಸ್ ಜೆಟ್, ಏರ್ಇಂಡಿಯಾ, ಅಲಯನ್ಸ್ ಏರ್ ಮುಂತಾದ ಕಂಪನಿಗಳು ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಿವೆ. ಕೆಲವು ವರ್ಷಗಳಿಂದ ಇಲ್ಲಿ ಕಾರ್ಗೋ ಸೇವೆಯನ್ನೂ ಆರಂಭಿಸಲಾಗಿದೆ.
ಇತ್ತೀಚೆಗಷ್ಟೇ ಸುಮಾರು 320 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ಎರಡನೇ ಟರ್ಮಿನಲ್ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಎರಡೇ ವರ್ಷದಲ್ಲಿ ಇದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ರೂಪುಗೊಳ್ಳುತ್ತದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದರು.
ಇದನ್ನೂ ಓದಿ: ಹುಬ್ಬಳ್ಳಿ ವಿಮಾನ ನಿಲ್ದಾಣ ನಂಬರ್ 1; ಮೊದಲ ಸ್ಥಾನದಲ್ಲಿದ್ದ ಬೆಳಗಾವಿಗೆ 2ನೇ ಸ್ಥಾನ