ಬೆಂಗಳೂರು: HSRP ನಂಬರ್ ಪ್ಲೇಟ್ ಅಳವಡಿಕೆಗೆ ಜಿಲ್ಲೆಗಳಲ್ಲಿ ಹೆಚ್ಚಿನ ಕಡೆ ನೋಂದಣಿ ಕೇಂದ್ರ ಸ್ಥಾಪಿಸಲು ಯೋಜಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, "HSRP ನಂಬರ್ ಪ್ಲೇಟ್ ಅಳವಡಿಕೆಗೆ ಜಿಲ್ಲೆಗಳಲ್ಲಿ ಈಗ ಒಂದು ಕಡೆ ಪಾಯಿಂಟ್ ಕೊಡಲಾಗುತ್ತಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ಮಾಡುತ್ತಿದ್ದೇವೆ. ತಾಲೂಕು ಮಟ್ಟದಲ್ಲಿ ನೋಂದಣಿ ಕೇಂದ್ರಗಳನ್ನು ಕೊಡಲಾಗುವುದಿಲ್ಲ. ಇನ್ನೂ ಸಮಯಾವಕಾಶ ಇರುವುದರಿಂದ ಮುಂದೆ ನೋಡೋಣ" ಎಂದು ತಿಳಿಸಿದರು.
"HSRP ನಂಬರ್ ಪ್ಲೇಟ್ ಅಳವಡಿಕೆಗೆ ಸರ್ವರ್ ಸಮಸ್ಯೆ ಆಗುತ್ತಿರುವುದರ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. HSRP ನಂಬರ್ ಪ್ಲೇಟ್ ಆನ್ಲೈನ್ನಲ್ಲಿ ಅಳವಡಿಕೆ ಮಾಡುವ ದಿನಾಂಕವನ್ನು ಮುಂದೂಡಿಕೆ ಮಾಡಿದ್ದೇವೆ. ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ. ಎಲ್ಲರೂ ಒಂದೇ ಅವಧಿಗೆ ಅಪ್ಲೈ ಮಾಡುವಾಗ ಸರ್ವರ್ ಸಮಸ್ಯೆ ಆಗಲಿದೆ. ಸರ್ವರ್ ಸಮಸ್ಯೆಯನ್ನು ಸರಿಪಡಿಸುತ್ತೇವೆ" ಎಂದರು.
ಸೋಲ್ತಾರೆಂದೇ ಕುಪೇಂದ್ರ ರೆಡ್ಡಿಗೆ ಟಿಕೆಟ್: "ಕುಪೇಂದ್ರ ರೆಡ್ಡಿ 5ನೇ ಅಭ್ಯರ್ಥಿಯಾಗಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಏಜೆಂಟ್ಗೆ ತೋರಿಸಿ ಮತ ಹಾಕಬೇಕು. ಒಂದು ಮತ ಕೂಡ ಟ್ರಾನ್ಸಪರ್ ಆಗುವುದಿಲ್ಲ. ಪ್ರಾಶಸ್ತ್ಯ ಮತಗಳು ನಮಗೇ ಹೆಚ್ಚು ಸಿಗಲಿವೆ. ಗೆಲ್ಲುವ ಸಮಯಲ್ಲಿ ಕುಪೇಂದ್ರ ರೆಡ್ಡಿಗೆ ಟಿಕೆಟ್ ಕೊಡಬೇಕಿತ್ತು. ಆಗ ಕೊಟ್ಟಿದ್ದರೆ ಗೆಲ್ಲುತ್ತಿದ್ದರು. ಈಗ ಸೋಲುತ್ತಾರೆ ಎಂದೇ ಟಿಕೆಟ್ ಕೊಡೋಕೆ ಹೋಗುತ್ತಿದ್ದಾರೆ. ಒಂದೇ ಒಂದು ಮತ ಸಹ ಬೇರೆಯವರಿಗೆ ಹೋಗಲ್ಲ. ಎಲ್ಲರೂ ಏಜೆಂಟ್ಗೆ ತೋರಿಸಿ ಮತ ಹಾಕಬೇಕು. ಹೀಗಾಗಿ ಆ ರೀತಿಯ ಗಿಮಿಕ್ ನಡೆಯೋದಿಲ್ಲ" ಎಂದು ಕಿಡಿಕಾರಿದರು.
ಇದನ್ನೂ ಓದಿ: 'ಹೈ ಸೆಕ್ಯುರಿಟಿ ನಂಬರ್ ಪ್ಲೇಟ್' ಅಳವಡಿಕೆ ಸಮಯ 3 ತಿಂಗಳು ವಿಸ್ತರಣೆ