ಶಿವಮೊಗ್ಗ: ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಇಂದು ಮುಂಜಾನೆಯಿಂದ ಸತತ ಐದು ಗಂಟೆಗಳ ಕಾಲ ಮಳೆ ಸುರಿದಿದೆ. ಶಿವಮೊಗ್ಗ ನಗರ ಮಧ್ಯಭಾಗದಲ್ಲಿ ಹರಿದು ಹೋಗುವ ತುಂಗಾ ಕಾಲುವೆ ಉಕ್ಕಿ ಹರಿದಿದೆ. ಇದರಿಂದಾಗಿ ವಿನೋಬನಗರ ಮೊದಲನೇ ಹಂತದಲ್ಲಿ 5 ಮನೆಗಳು ಕುಸಿದಿವೆ.
ಹೊಸಮನೆಯಲ್ಲಿ ಹಾದು ಹೋಗುವ ರಾಜಕಾಲುವೆಯ ನೀರು ವೆಂಕಟೇಶ ನಗರದ ಐದು ಕ್ರಾಸ್ಗಳಿಗೆ ನುಗ್ಗಿದೆ. ಇದರಿಂದ ಮನೆಗಳಲ್ಲಿ ಮೂರು ಅಡಿಯಷ್ಟು ನೀರು ನಿಂತಿದೆ. ಮನೆಯಲ್ಲಿನ ದಿನಸಿ ಸಾಮಗ್ರಿ ನೀರು ಪಾಲಾಗಿದೆ. ಹಾಗೆಯೇ ಗೋಪಾಲ ಬಡಾವಣೆಯಲ್ಲಿ ರಸ್ತೆಗಳ ಮೇಲೆಯೇ ನೀರು ಉಕ್ಕಿ ಹರಿಯುತ್ತಿದ್ದು, ವಾಹನ ಸಂಚಾರ ಸ್ಥಗಿತವಾಗಿದೆ.
ಗ್ರಾಮಾಂತರ ಭಾಗದಲ್ಲೂ ಅನಾಹುತ: ಶಿವಮೊಗ್ಗ ತಾಲೂಕು ಬಿಕ್ಕೂನಹಳ್ಳಿಯಲ್ಲಿ ಬೆಟ್ಟದ ಮೇಲಿಂದ ಹರಿದುಬರುವ ನೀರು ಶಿವಮೊಗ್ಗ-ಸವಳಂಗ ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದಾಗಿ ಕೆಲಕಾಲ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಗಾಜನೂರಿನ ಸಕ್ರೆಬೈಲು ಬಳಿಯ ಮೀನಿನ ಹೋಟೆಲ್ ಜಲಾವೃತಗೊಂಡಿದೆ. ತುಂಗಾ ಕಾಲುವೆಯ ನೀರು ನವೋದಯ ಶಾಲೆಯ ಬಳಿ ನೀರು ಉಕ್ಕಿ ಹರಿದು ಅಡಕೆ ತೋಟ ಹಾಗೂ ಭತ್ತದೆ ಗದ್ದೆಗೆ ನುಗ್ಗಿದೆ.
ಆರ್‌ಎಸ್‌ಎಸ್ ಪಥಸಂಚಲನ: ಇಂದು ಬೆಳಗ್ಗೆ ಶಿವಮೊಗ್ಗ ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ವತಿಯಿಂದ ವಿಜಯದಶಮಿ ಪಥ ಸಂಚಲನ ನಡೆಯಿತು. ಸುರಿಯುವ ಮಳೆಯಲ್ಲಿ ನಗರದ ಮೈಲಾರೇಶ್ವರ ದೇವಾಲಯದಿಂದ ಪ್ರಾರಂಭವಾದ ಪಥ ಸಂಚಲನ ಮಳೆಯಲ್ಲೇ ಮುಂದುವರೆಯಿತು. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ ಸೇರಿದಂತೆ ಪ್ರಮಖರು ಭಾಗಿಯಾಗಿದ್ದರು.
ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ: ಈ 10 ಜಿಲ್ಲೆಗಳಿಗೆ ಮುಂದಿನ 24 ಗಂಟೆ ಭಾರೀ ಮಳೆ ಸಾಧ್ಯತೆ