ಬೆಂಗಳೂರು: ಊಟ ಮಾಡುವಾಗ ಇಲಿ ಪಾಷಾಣ ಸ್ಪ್ರೇ ಮಾಡಿದ್ದರ ಪರಿಣಾಮ 19 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ತಡರಾತ್ರಿ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ನಡೆದಿದೆ.
ಹಾಸ್ಟೆಲ್‌ನಲ್ಲಿದ್ದ ನರ್ಸಿಂಗ್ ವಿದ್ಯಾರ್ಥಿಗಳು ರಾತ್ರಿ 8 ಗಂಟೆ ಸುಮಾರಿಗೆ ಊಟ ಮಾಡಲು ಬಂದಿದ್ದರು. ಹಾಸ್ಟೆಲ್‌ನಲ್ಲಿದ್ದ ನೆಲಮಹಡಿಯಲ್ಲಿರುವ ಜನರೇಟರ್ಗಳಿಗೆ ಇಲಿಗಳಿಂದ ಹಾನಿಯಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಹಾಸ್ಟೆಲ್ ಸಿಬ್ಬಂದಿ ಇಲಿ ಪಾಷಾಣ ಸ್ಪ್ರೇ ಮಾಡುತ್ತಿದ್ದರು. ಆದರೆ ಏನೂ ಆಗಲಾರದು ಎಂದು ಊಟ ಮುಗಿಸಿ ಹೋಗಿದ್ದ 19 ಜನ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.
ತಕ್ಷಣವೇ ಎಚ್ಚೆತ್ತ ಹಾಸ್ಟೆಲ್ ಸಿಬ್ಬಂದಿ ಹತ್ತಿರದ ಆಸ್ಪತ್ರೆಗಳಿಗೆ ವಿದ್ಯಾರ್ಥಿಗಳ ರವಾನೆ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಪೈಕಿ ಮೂವರು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಸ್ಥಳಕ್ಕೆ ಜ್ಞಾನಭಾರತಿ ಠಾಣಾ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ನಿರ್ಲಕ್ಷ್ಯ ವಹಿಸಿದ ಆರೋಪದಡಿ ಹಾಸ್ಟೆಲ್ ಸಿಬ್ಬಂದಿ ಮಂಜೇಗೌಡ ಹಾಗೂ ವ್ಯವಸ್ಥಾಪಕ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಕಳ್ಳತನದಲ್ಲಿ ಪಾಲು ನೀಡುವಂತೆ ತಾಯಿ-ಮಗನ ಅಪಹರಿಸಿ ಹಲ್ಲೆ, ಲೈಂಗಿಕ ಕಿರುಕುಳ; 9 ಜನರ ಬಂಧನ - KIDNAP CASE