ಬೆಂಗಳೂರು: ತಪ್ಪು ಯಾರೇ ಮಾಡಿದ್ರೂ ಕಾನೂನು ಕ್ರಮ ಆಗುತ್ತೆ. ಅದನ್ನ ನಾವು ದ್ವೇಷ ಭಾವನೆ ಮೂಡುವಂತೆ ಮಾಡುವುದು ಸರಿಯಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.
ನಗರದ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಹೊಸಪೇಟೆ ರೈಲಿನಲ್ಲಿ ಬೆದರಿಕೆ ಆರೋಪದ ಕುರಿತು ಎಫ್ಐಆರ್ ದಾಖಲಾಗಿದೆ. ಅಯೋಧ್ಯೆಯಿಂದ ಬಂದ ಟ್ರೈನ್ ಮೈಸೂರಿಗೆ ಹೋಗಬೇಕಿತ್ತು. ಹೊಸಪೇಟೆಯಲ್ಲಿ ರೈಲು ನಿಲ್ಲಿಸಲಾಗಿದೆ. ಅದೇ ಸಮಯದಲ್ಲಿ ಇನ್ನೊಂದು ರೈಲು ನಿಂತಿತ್ತು. ರೈಲಿನಿಂದ ಇನ್ನೊಂದು ರೈಲಿಗೆ ಆರೋಪಿ ಹೋಗಿದ್ದಾನೆ. ಅದಕ್ಕೆ ರೈಲಿನಲ್ಲಿ ಇದ್ದವರೆಲ್ಲ ಆತನನ್ನು ಸ್ವಲ್ಪ ರೇಗಿಸಿದ್ದಾರೆ. ಆಗ ಆತ ಬೆದರಿಕೆ ಹಾಕಿದ್ದಾನೆ ಅಂತಾ ಇದೆ. ಅಷ್ಟು ಜನ ಇರುವಾಗ ಒಬ್ಬ ವ್ಯಕ್ತಿ ಆ ರೀತಿ ಬೆದರಿಕೆ ಹಾಕಿದ್ದಾನಾ ಇಲ್ವೋ ಗೊತ್ತಿಲ್ಲ?. ಆ ವ್ಯಕ್ತಿ ರೈಲ್ವೆ ಉದ್ಯೋಗಿ ಆಗಿದ್ದು, ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಆರೋಪಿಗೆ ಸ್ಟೇಷನ್ ಬೇಲ್ ಕೊಟ್ಟು ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಿಜೆಪಿ ಅವರು ಅಭಿವೃದ್ಧಿ ಬಗ್ಗೆ ಏನು ಮಾತನಾಡುತ್ತಿಲ್ಲ. ಮಾತನಾಡುತ್ತಿರೋದು ಭಾವನಾತ್ಮಕ ವಿಚಾರದ ಬಗ್ಗೆ. ಜನರ ಮನಸ್ಸಿನಲ್ಲಿ ದ್ವೇಷ ಅಸೂಯೆ ತುಂಬ್ತಿದ್ದಾರೆ. ಬೇರೆ ಸಮುದಾಯದವರನ್ನು ಪ್ರಚೋದಿಸ್ತಾರೆ. ಈ ರೀತಿ ಮಾಡಿದರೆ ದೇಶ ಉಳಿಯೋದಿಲ್ಲ. ಹಾಗಾಗಿ ಇದು ಒಳ್ಳೆ ಬೆಳವಣಿಗೆ ಅಲ್ಲ. ದೇಶದಲ್ಲಿ ಕಾನೂನು ಇದೆ ಎಂದರು.
ಜೆಡಿಎಸ್ ಬಿಜೆಪಿ ಮೈತ್ರಿ ಸೀಟು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರ ಪಕ್ಷದ ವಿಚಾರ ನಾನು ಚರ್ಚೆ ಮಾಡಲ್ಲ. ನಮ್ಮ ಪಕ್ಷದಲ್ಲಿ ನಾವು ತಯಾರಿ ಮಾಡಿಕೊಂಡಿದ್ದೇವೆ. ನಮ್ಮಲ್ಲಿ ಅಭ್ಯರ್ಥಿ ಇನ್ನೂ ತೀರ್ಮಾನ ಮಾಡಿಲ್ಲ. ನಾವು ಈ ಬಾರಿ ತುಮಕೂರಿನಲ್ಲಿ ಗೆಲ್ಲುತ್ತೇವೆ. ಮುದ್ದಹನುಮೇಗೌಡರನ್ನ ಯಾರು ವಿರೋಧಿಸಲ್ಲ. ಪಕ್ಷ ತೀರ್ಮಾನ ಮಾಡಿದ ಮೇಲೆ ನಾವು ಕೆಲಸ ಮಾಡ್ತೇವೆ ಎಂದು ತಿಳಿಸಿದರು.
ಡಿಕೆಶಿ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿ, ಲೋಕಸಭೆ ಚುನಾವಣೆ ತಯಾರಿ ಮಾಡಿಕೊಳ್ಳಬೇಕು. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಆಯ್ತು. ಅದನ್ನ ಬಿಟ್ಟು ಬೇರೆ ಏನು ಚರ್ಚೆ ಆಗಿಲ್ಲ. ಸ್ಕ್ರೀನಿಂಗ್ ಕಮಿಟಿ ಮುಂದೆ ಅಭ್ಯರ್ಥಿಗಳ ಹೆಸರು ಇಟ್ಟಿದ್ದಾರೆ. ಒಂದು ಮೀಟಿಂಗ್ ಆಗಿದೆ. ಎರಡನೇ ಮೀಟಿಂಗ್‌ನಲ್ಲಿ ಅಂತಿಮ ತೀರ್ಮಾನ ಆಗುತ್ತೆ. ನಿನ್ನೆ ಡಿನ್ನರ್ ಮೀಟಿಂಗ್‌ನಲ್ಲಿ ಅದೆಲ್ಲ ಚರ್ಚೆ ಆಗಿಲ್ಲ. ಅದು ಹೈಕಮಾಂಡ್ ಲೆವೆಲ್‌ನಲ್ಲಿ ತೀರ್ಮಾನ ಆಗುತ್ತೆ. ಇಲ್ಲಿ ಆ ರೀತಿ ಚರ್ಚೆ ಆಗಿಲ್ಲ. ಅದು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗುತ್ತೆ ಎಂದರು.
ರಾಜ್ಯಸಭಾ ಚುನಾವಣೆ ವಿಚಾರವಾಗಿ ಮಾತನಾಡಿ, ನಾಳೆ ಯಾರು ಯಾರಿಗೆ ಮತ ಹಾಕಬೇಕು?. ಅಂತ ಲಿಸ್ಟ್ ಮಾಡಿ ಕೊಡ್ತಾರೆ. ಅದರ ಪ್ರಕಾರ ಮತ ಹಾಕ್ತೀವಿ. ನಮ್ಮ ಪಕ್ಷದಿಂದ ಆಮಿಷದ ಬಗ್ಗೆ ದೂರು ಕೂಡ ಕೊಟ್ಟಿದ್ದೇವೆ. ಇದರಲ್ಲೇ ಗೊತ್ತಾಗುತ್ತೆ ಏನೇನೋ ಆಗ್ತಾ ಇದೆ ಅಂತ. ನಮ್ಮ ಪಕ್ಷದಿಂದ ಏನು ಎಚ್ಚರಿಕೆ ವಹಿಸಬೇಕೋ ವಹಿಸುತ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: ಬೆಂಗಳೂರು: ಇನ್ಮುಂದೆ ಬೆಳಗ್ಗೆ 5 ಗಂಟೆಯಿಂದ ನಮ್ಮ ಮೆಟ್ರೋ ಸೇವೆ, ಪ್ರತಿ 3 ನಿಮಿಷಕ್ಕೊಂದು ರೈಲು ಸಂಚಾರ