ಬೆಂಗಳೂರು: ಪ್ರಚೋದನಕಾರಿ ಹೇಳಿಕೆ ನೀಡಿರುವ ಮರುಳಾರಾಧ್ಯ ಶ್ರೀಗಳ ವಿರುದ್ಧ ಏನು ಕ್ರಮ ಕೈಗೊಳ್ಳಬೇಕೆಂದು ತೀರ್ಮಾನ ಮಾಡುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ಸದಾಶಿವನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮರುಳಾರಾಧ್ಯ ಶ್ರೀಗಳು ಮಕ್ಕಳ ಕೈಗೆ ಪೆನ್ ಬದಲು ತಲ್ವಾರ್ ಕೊಡಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಮರುಳಾರಾಧ್ಯ ಶಿವಾಚಾರ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಕ್ಕಳ ಕೈಯಲ್ಲಿ ಪೆನ್ ಬದಲು ತಲ್ವಾರ್ ಕೊಡಿ ಅಂತಾರೆ. ಯಾವ ಸೆಕ್ಷನ್‌ನಡಿ ಕ್ರಮ ತೆಗೆದುಕೊಳ್ಳಬೇಕೆಂದು ನೋಡೋಣ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ತಾರೆ ಎಂದರು.
ಧರ್ಮಗುರುಗಳು ಧರ್ಮದಿಂದ ನಡೆದುಕೊಳ್ಳಬೇಕು. ಧರ್ಮ ಪ್ರಚಾರಕರಾಗಿ ಪ್ರಚೋದನೆ ನೀಡಬಾರದು. ನಾವುಗಳು ಪೂಜ್ಯನೀಯ ದೃಷ್ಟಿಯಿಂದ ನೋಡ್ತೇವೆ. ಸ್ವಾಮೀಜಿಗಳ ಕಾಲಿಗೆ ಬೀಳ್ತೇವೆ. ಅವರು ತಲ್ವಾರ್ ಕೊಡಿ ಅಂದರೆ ಸರಿಯಲ್ಲ. ಸ್ವಾಮಿಗಳು ಯಾರೂ ಪ್ರಚೋದನೆಯ ಹೇಳಿಕೆ ನೀಡಬಾರದು ಎಂದು ತಿಳಿಸಿದರು.
ಇಂದು ಬಹಿರಂಗ ಪ್ರಚಾರ ಅಂತ್ಯ ವಿಚಾರವಾಗಿ ಪ್ರತಿಕ್ರಿಯಿಸಿ, ಈಗಾಗಲೇ ಸಾಕಷ್ಟು ಪ್ರಚಾರ ಮಾಡಿದ್ದಾರೆ. ಸಿಎಂ ಸಚಿವರು ಪ್ರಚಾರ ಮಾಡಿದ್ದಾರೆ. ಸರ್ಕಾರದ ಆಡಳಿತವನ್ನು ಜನರಿಗೆ ಮುಟ್ಟಿಸಿದ್ದೇವೆ. ಇದರ ನಡುವೆ ಅನವಶ್ಯಕ ಮಾತುಗಳು ನಡೆದಿವೆ. ಮತದಾರ ಎಲ್ಲವನ್ನು ಗಮನಿಸಿದ್ದಾನೆ. ನಾಡಿದ್ದು ಮತ ಚಲಾಯಿಸುವ ದಿವಸ. ಇಂದು ಅಧಿಕೃತವಾಗಿ ಬಹಿರಂಗ ಪ್ರಚಾರ ನಿಲ್ಲುತ್ತೆ. ಒಬ್ಬರಿಗೊಬ್ಬರು ಬೈಯುವುದು ನಿಲ್ಲುತ್ತದೆ ಎಂದರು.
ಮೋದಿಯವರಿಂದ ಭ್ರಷ್ಟಾಚಾರದ ಆರೋಪವಾಗಿ ಪ್ರತಿಕ್ರಿಯಿಸುತ್ತಾ, ಯಾರೋ ಒಬ್ಬ ನಾಯಕ ಹೇಳಿದ್ರೆ ಪರವಾಗಿಲ್ಲ. ಏನೋ ಹೇಳಿದ್ದಾರೆ ಅಂತ ಸುಮ್ಮನಾಗಬಹುದು. ಒಬ್ಬ ಪ್ರಧಾನಿ ಹೇಳಿದ್ದಾರೆ ಅಂದ್ರೆ ಹೇಗೆ?. ಇದು ಸತ್ಯಕ್ಕೆ ದೂರವಾಗಿರುವ ಮಾತು. 700 ಕೋಟಿ ರೂಪಾಯಿ ಹೇಗೆ ಮಹಾರಾಷ್ಟ್ರಕ್ಕೆ ಕಳಿಸಿದ್ದೇವೆ?. ಅಲ್ಲೂ ಕೂಡ ಕಾಂಗ್ರೆಸ್ ಕಮಿಟಿ ಇದೆ. ಅವರು ಚುನಾವಣೆ ಮಾಡ್ತಾರೆ. ಆದ್ರೆ ಪ್ರಧಾನಿ ಅವರ ಹೇಳಿಕೆ ಒಪ್ಪಲು ಆಗಲ್ಲ. ಅವರು ಒಬ್ಬ ಜವಾಬ್ದಾರಿ ಸ್ಥಾನದಲ್ಲಿ ಇರೋರು. ಈ ರೀತಿ ಹೇಳಿಕೆಗಳನ್ನು ಕೊಡಬಾರದು ಎಂದು ವಾಗ್ದಾಳಿ ನಡೆಸಿದರು.
ಮಂಡ್ಯ ದಲಿತರ ಪ್ರವೇಶ ನಿರಾಕರಣೆ ವಿಚಾರವಾಗಿ ಮಾತನಾಡಿದ ಗೃಹ ಸಚಿವರು, ಕಾನೂನಿನ ಪ್ರಕಾರ ಕ್ರಮವಾಗಲಿದೆ. ಇಂತಹ ಘಟನೆ ನಡೆಯುತ್ತಲೇ ಇವೆ. ದೇವಸ್ಥಾನದಲ್ಲಿ ದಲಿತರಿಗೆ ಪ್ರವೇಶಕ್ಕೆ ಬಿಡ್ತಿಲ್ಲ. ಆದ್ರೆ ಕಾಲ ಬದಲಾಗುತ್ತಿದೆ ಅಲ್ವಾ?. ದೇವರು ಎಲ್ಲಾರಿಗೂ ಒಂದೇ. ಸಮಾಜವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಚಿವ ಜಮೀರ್ ಅಹ್ಮದ್ ವಿರುದ್ಧ ಕ್ರಮಕ್ಕೆ ರಾಜ್ಯಪಾಲರ ಪತ್ರ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ಗೊತ್ತಿಲ್ಲ. ಪತ್ರ ಬರೆದಿರುವ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆ ಬಗ್ಗೆ ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ದೇವೇಗೌಡರು ಹಿರಿಯ ರಾಜಕಾರಣಿ. ಸ್ವಲ್ಪ ಮಾಹಿತಿ ಕೊರತೆ ಇರಬಹುದು ಅನ್ನಿಸುತ್ತೆ ಎಂದರು.
ಇದನ್ನೂ ಓದಿ: 700 ಕೋಟಿ ರೂ. ಹಗರಣ ಆರೋಪ; ಮೋದಿಗೆ ನೇರ ಸವಾಲು ಹಾಕಿದ ಸಿದ್ದರಾಮಯ್ಯ