ಬೆಂಗಳೂರು : ಬಳ್ಳಾರಿ ಉಸ್ತುವಾರಿ ಜಮೀರ್ ಆಗಿರುವುದಕ್ಕೂ ನಟ ದರ್ಶನ್ ಸ್ಥಳಾಂತರಕ್ಕೂ ಸಂಬಂಧವಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಜೈಲಾಧಿಕಾರಿಗಳು ಶಿಫ್ಟ್ ಮಾಡಲು ತೀರ್ಮಾನಿಸಿದ್ದಾರೆ. ಇನ್ನು ತಲುಪಿದ್ದಾರೋ ಏನೋ ಗೊತ್ತಿಲ್ಲ. ಸೆಕ್ಯುರಿಟಿ ದೃಷ್ಟಿಯಿಂದ ಬಂಧಿಖಾನೆಗೆ ತಲುಪಿಸ್ತಾರೆ. ಯಾವ ಜಿಲ್ಲೆಗೆ ಹಾಕಿದ್ರೂ ಉಸ್ತುವಾರಿ ಸಚಿವರು ಇರ್ತಾರೆ. ಜಮೀರ್ ಇದ್ದಾರೆ ಅಂತಲ್ಲ. ಅದು ಸತ್ಯಕ್ಕೆ ದೂರವಾದ ಆರೋಪ. ಯಾರನ್ನು ಯಾವ ಜಿಲ್ಲೆಯ ಜೈಲಿಗೆ ಕಳಿಸಿದ್ರೂ ಇರ್ತಾರೆ. ಉಸ್ತುವಾರಿ ಸಚಿವರು ಇದ್ದೇ ಇರ್ತಾರೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಜಮೀರ್ ಅಹಮದ್ ದರ್ಶನ್ಗೆ ಆಪ್ತರು ಇದ್ದರೇನಂತೆ. ಯಾರೇ ಇದ್ರೂ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಅವರು ಉಸ್ತುವಾರಿ ಆಗಿದ್ದಾರೆ. ಏನೋ ಆಗಿಬಿಡಬಹುದು ಅನ್ನೋದು ಸರಿಯಲ್ಲ ಎಂದರು.
ಕೋರ್ಟ್ ತೀರ್ಮಾನ ಏನು ಬರುತ್ತೆ ಅಂತ ಕಾದು ನೋಡ್ತೇವೆ: ಹೈಕೋರ್ಟ್‌ನಲ್ಲಿ ಸಿಎಂ ವಿಚಾರಣೆ ವಿಚಾರವಾಗಿ ಮಾತನಾಡಿ, ಕೋರ್ಟ್ ತೀರ್ಮಾನ ಏನು ಬರುತ್ತೆ ಅಂತ ಕಾದು ನೋಡ್ತೇವೆ. ಈ ಹಂತದಲ್ಲಿ ಯಾವುದನ್ನೂ ಊಹೆ ಮಾಡಲ್ಲ. ಕಾನೂನು ಚೌಕಟ್ಟಿನಲ್ಲಿ ಏನು ಬರುತ್ತೆ ನೋಡ್ತೇವೆ. ಅದಾದ ನಂತರ ಮುಂದಿನ ಕ್ರಮ. ಸಿಎಂ, ನಮ್ಮ ಕಾನೂನು ತಂಡ ತೀರ್ಮಾನ ತಗೋತಾರೆ. ಡಿಕೆಶಿ ಪ್ರಕರಣದಲ್ಲೂ ಕಾದು ನೋಡೋಣ. ಏನು ತೀರ್ಮಾನ ಬರುತ್ತೋ ನೋಡೋಣ. ನ್ಯಾಯಯುತವಾಗಿ ತೀರ್ಮಾನ ಆಗಬೇಕು. ಆ ರೀತಿ ಅನ್ನೋದು ನಮ್ಮ ಅಪೇಕ್ಷೆ. ಯಾವ ತೀರ್ಮಾನ ಬರುತ್ತೋ ಕಾದು ನೋಡೋಣ ಎಂದರು.
ವಯೋಮಾನ ಹೆಚ್ಚಳ ಬಗ್ಗೆ ವರದಿ ಸಂಪೂರ್ಣ ಬಂದಿಲ್ಲ: ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ವಿಚಾರವಾಗಿ ಮಾತನಾಡಿ, ವಯೋಮಾನ ಹೆಚ್ಚಿಸಲು ಅಭ್ಯರ್ಥಿಗಳ ಮನವಿ ಸಂಬಂಧ ಪ್ರತಿಕ್ರಿಯಿಸುತ್ತಾ, ವಯೋಮಾನ ಹೆಚ್ಚಳ ಬಗ್ಗೆ ವರದಿ ಸಂಪೂರ್ಣ ಬಂದಿಲ್ಲ. ಬೇರೆ ರಾಜ್ಯಗಳಲ್ಲಿ 40 ವರ್ಷದವರೆಗೆ ಇದೆ. ಅಷ್ಟು ವಯಸ್ಸಿಗೆ ನೇಮಕಾತಿ ಆದ್ರೆ ಹೇಗೆ?. ಅವರಿಗೆ ಸರ್ವಿಸ್ ಎಲ್ಲಿ ಸಿಗುತ್ತೆ?. ಯುವಕರು ಮನವಿ ಮಾಡಿದ್ದಾರೆ. ಆರ್ಮಿಗೆ 16 ವರ್ಷಕ್ಕೆ ನೇಮಕಾತಿ ಮಾಡಿಕೊಳ್ತಾರೆ. ನಮಗೆ ಯಾಕೆ ಅಷ್ಟು ವಯಸ್ಸಿನ ಅಂತರ ಅಂತಾರೆ. ಹೊಸ ರಿಕ್ರೂಟ್ಮೆಂಟ್ ಆಗ್ತಿರುತ್ತೆ. ಒಂದು ಕಡೆ ಪ್ರತೀ ವರ್ಷ ರಿಟೈರ್ಡ್ ಆಗ್ತಿರ್ತಾರೆ. ಹಣಕಾಸು ಇಲಾಖೆ ಒಪ್ಪಿಗೆ ಪಡೆಯುತ್ತೇವೆ. ಒಪ್ಪಿಗೆ ಪಡೆದು ನೇಮಕಾತಿ ಮಾಡ್ತೇವೆ ಎಂದು ಗೃಹ ಸಚಿವರು ಹೇಳಿದರು.