ಬೆಂಗಳೂರು: ಬೆಳಗಿನ ಜಾವ 3:40ರಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಶ್ ರೂಮ್ನ ಕನ್ನಡಿಯಲ್ಲಿ ಬಾಂಬ್ ಸ್ಫೋಟಿಸುವ ಚೀಟಿಯೊಂದು ಪತ್ತೆಯಾಗಿದೆ. ಈ ಚೀಟಿ ನೋಡಿದ ಪ್ರಯಾಣಿಕರು, ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ, ಎರಡು ಟರ್ಮಿನಲ್ಗಳನ್ನ ತಪಾಸಣೆ ನಡೆಸಿದ್ದಾರೆ. ಕೊನೆಗೆ ಇದೊಂದು ಹುಸಿ ಬಾಂಬ್ ಎಂದು ಬೆಳಗ್ಗೆ 7 ಗಂಟೆಗೆ ಷೋಷಣೆ ಮಾಡಲಾಯಿತು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -1 ಪುರುಷರ ವಾಶ್ ರೂಮ್ನಲ್ಲಿರುವ ಕನ್ನಡಿಗೆ ಅಂಟಿಸಲಾದ ಚೀಟಿಯೊಂದು ಪ್ರಯಾಣಿಕರಿಗೆ ಕಣ್ಣಿಗೆ ಬಿದ್ದಿದೆ. ಚೀಟಿಯಲ್ಲಿ ಟರ್ಮಿನಲ್ -1ರ A3ನಲ್ಲಿ 25 ನಿಮಿಷದಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಬರೆಯಲಾಗಿತ್ತು. ತಕ್ಷಣವೇ ಪ್ರಯಾಣಿಕರು ನಿಲ್ದಾಣದ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಸುದ್ದಿ ತಿಳಿದ ನಂತರ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಎರಡು ಟರ್ಮಿನಲ್ಗಳನ್ನ ತಪಾಸಣೆ ನಡೆಸಿದೆ. ಆದರೆ, ಬಾಂಬ್ ಇಟ್ಟಿರುವ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಕೊನೆಗೆ ಬೆಳಗ್ಗೆ 7 ಗಂಟೆಗೆ ಇದೊಂದು ಹುಸಿ ಬಾಂಬ್ ಎಂದು ದೃಢಪಡಿಸಲಾಯಿತು. ಕಳೆದ 15 ದಿನಗಳಲ್ಲಿ ನಡೆದ 2ನೇ ಹುಸಿ ಬಾಂಬ್ ಕರೆ ಇದಾಗಿದೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಐಎಸ್ಎಫ್ನ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಉನ್ನತ ಅಧಿಕಾರಿಗಳು, ಬಾಂಬ್ ಸ್ಫೋಟದ ಕರೆ ಬಂದ ತಕ್ಷಣವೇ ನಮ್ಮಲ್ಲಿರುವ ಎಲ್ಲಾ ಭದ್ರತಾ ಸಿಬ್ಬಂದಿ ಬಾಂಬ್ ತಪಾಸಣೆಗಾಗಿ ನಿಯೋಜನೆ ಮಾಡಲಾಗಿತು. ಇದರಿಂದ ಪ್ರಯಾಣಿಕರ ಭದ್ರತಾ ತಪಾಸಣೆ ಮತ್ತು ಚೆಕ್ ಇನ್ನಲ್ಲಿ ವಿಳಂಬವಾಗಲು ಕಾರಣವಾಗಿತು. ದುರುದ್ದೇಶದಿಂದ ಮತ್ತು ತಮಾಷೆಗಾಗಿ ಕೆಲವರು ಇಂತಹ ಕೆಲಸಗಳನ್ನ ಮಾಡುತ್ತಾರೆ. ಆದರೆ, ನಾವು ಈ ರೀತಿಯ ಯಾವುದೇ ಕರೆಯನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಸಂಪೂರ್ಣ ತಪಾಸಣೆ ನಂತರ ಹುಸಿ ಬಾಂಬ್ ಕರೆ ಎಂದು ಸಾಬೀತಾಗುವ ತನಕ ನಾವು ಕಾರ್ಯಪ್ರವೃತ್ತರಾಗುತ್ತೇವೆ ಎಂದು ಹೇಳಿದರು.
ವಾರದ ಹಿಂದೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಬ್ಯಾಗ್‌ನಲ್ಲಿ ಬಾಂಬ್ ಇದೆ ಅಂತಾ ಅವಾಂತರ ಸೃಷ್ಟಿಸಿದ್ದ. ಬ್ಯಾಗೇಜ್ ಚೆಕ್ ಮಾಡುವಾಗ ಬಾಂಬ್ ಇದೆ ಅಂತಾ ಜೋಕ್ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದನು.
ಇದನ್ನೂ ಓದಿ: ದೇವನಹಳ್ಳಿ: ಬ್ಯಾಗ್‌ನಲ್ಲಿ ಬಾಂಬ್ ಇದೆಯೆಂದು ತಮಾಷೆ ಮಾಡಿದ ಪ್ರಯಾಣಿಕನ ವಿರುದ್ಧ ಕೇಸ್ - Case Against Passenger