ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರೆದಿದೆ. ಕಳೆದ ವರ್ಷದ ಭೂ ಕುಸಿತ, ಗುಡ್ಡ ಕುಸಿತ, ರಸ್ತೆ ಕುಸಿತಗಳನ್ನು ನೆನಪಿಸುವಂತಹ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಭಾರೀ ಮಳೆಗೆ ಚಾರ್ಮಾಡಿ ಹೆದ್ದಾರಿಯ ಆಲೆಖಾನ್ ತಿರುವಿನ ಸಮೀಪ ಗುಡ್ಡ ಕುಸಿದಿದೆ. ಚಿಕ್ಕಮಗಳೂರಿಗೆ ಬರುತ್ತಿದ್ದ ವಾಹನದ ಮುಂಭಾಗಕ್ಕೆ ಬಿದ್ದ ಮಣ್ಣು ಕಂಡು ಸವಾರ ಬೆಚ್ಚಿ ಬಿದ್ದಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ರಸ್ತೆ, ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದೀಗ ಗುಡ್ಡ ಕುಸಿದಿದೆ. ಮೂಡಿಗೆರೆ ಸಿಪಿಐ ಹಾಗೂ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಕಳೆದ ವರ್ಷ ಸುರಿದ ಧಾರಾಕಾರ ಮಳೆಗೆ ಘಾಟಿಯ ರಸ್ತೆಯುದ್ದಕ್ಕೂ ಹತ್ತಾರು ಭಾಗಗಳಲ್ಲಿ ಭೂಕುಸಿತ ಹಾಗೂ ಗುಡ್ಡ ಕುಸಿತ ಉಂಟಾಗಿತ್ತು. ಪ್ರತಿ ವರ್ಷ ಈ ಭಾಗದಲ್ಲಿ ಸುರಿಯುವ ಧಾರಾಕಾರ ಮಳೆಗೆ ಭೂಕುಸಿತ ಹಾಗೂ ಗುಡ್ಡ ಕುಸಿತ ಸರ್ವೇಸಾಮಾನ್ಯವಾಗಿದೆ. ಆದರೆ ಈ ವರ್ಷ ಮೊದಲ ಮಳೆಯಲ್ಲೇ ಈ ರೀತಿಯ ಅವಘಡಗಳು ಜರುಗುತ್ತಿರುವುದರಿಂದ ಈ ದಾರಿಯಲ್ಲಿ ಪ್ರತಿನಿತ್ಯ ಸಂಚರಿಸುವ ವಾಹನ ಸವಾರರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.