ಬೆಂಗಳೂರು : ವಿಧಾನಪರಿಷತ್ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ದಿನಕ್ಕೂ ಹಿಂದಿನ 48 ಗಂಟೆ ಅವಧಿಯಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದ ಜಿಲ್ಲಾಧಿಕಾರಿಯ ಕ್ರಮವನ್ನು ಎತ್ತಿಹಿಡಿದಿರುವ ಹೈಕೋರ್ಟ್, ಕೇವಲ ಮತ ಎಣಿಕೆ ಹಾಗೂ ಮತದಾನ ದಿನಕ್ಕೆ ಸೀಮಿತಗೊಳಿಸಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದೆ.
ಮದ್ಯ ಮಾರಾಟ ನಿಷೇಧ ಒಂದು ದಿನಕ್ಕೆ ಸೀಮಿತಗೊಳಿಸಿದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರಿದ್ದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿ ಆದೇಶಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 135(ಸಿ) ಪ್ರಕಾರ ಯಾವುದೇ ಚುನಾಚಣೆ ಘೋಷಣೆ ಆದರೂ, ಚುನಾವಣೆಗೂ ಮುನ್ನ 48 ಗಂಟೆಗಳ ಕಾಲ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಬೇಕು ಎಂದು ತಿಳಿಸಲಾಗಿದೆ. ಅದರಂತೆ, ಸರ್ಕಾರ ವಿಧಾನಪರಿಷತ್ ಉಪ ಚುನಾವಣೆಗೆ ಮತದಾನದ ದಿನಕ್ಕೂ ಮುನ್ನ 48 ಗಂಟೆಗಳ ಕಾಲ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ವಿವರಿಸಿದರು.
ಅಲ್ಲದೆ, ಏಕಸದಸ್ಯ ಪೀಠ ಮದ್ಯ ಮಾರಾಟವನ್ನು ಒಂದೇ ದಿನಕ್ಕೆ ಸೀಮಿತಗೊಳಿಸಿರುವ ಆದೇಶವು ಕಾನೂನಿಗೆ ವಿರುದ್ಧವಾಗಿದೆ. ಜೊತೆಗೆ, ಮದ್ಯ ಮಾರಾಟ ಮಾಡುವುದು ಮೂಲಭೂತ ಹಕ್ಕು ಅಲ್ಲ. ಆದ್ದರಿಂದ ಈ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿ ಜಿಲ್ಲಾಧಿಕಾರಿಗಳ ಆದೇಶವನ್ನು ಎತ್ತಿಹಿಡಿದಿದೆ.
ಅಲ್ಲದೆ, ಮತದಾನಕ್ಕೂ ಮುನ್ನ 48 ಗಂಟೆಗಳು ಹಾಗೂ ಮತ ಎಣಿಕೆ ದಿನದಲ್ಲಿ ಆಹಾರ ಪೂರೈಸಲು ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಪೀಠ ಇದೇ ವೇಳೆ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಫೆ.14ರಂದು ಸಂಜೆ 5ರಿಂದ ಮತದಾನ ನಡೆಯುವ ಫೆ.16ರ ಮಧ್ಯರಾತ್ರಿ 12ರ ವರೆಗೆ ಮದ್ಯ ಮಾರಾಟ ಹಾಗೂ ಮಳಿಗೆ ತೆರೆಯುವುದನ್ನು ನಿಷೇಧಿಸಲಾಗಿತ್ತು. ಹಾಗೆಯೇ, ಮತ ಎಣಿಕೆ ದಿನವಾದ ಫೆ.20ರಂದು ಬೆಳಗ್ಗೆ 6ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬೆಂಗಳೂರು ನಗರ ಮತ್ತು ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್‌ಗಳ ಸಂಘ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ಅವರಿದ್ದ ನ್ಯಾಯಪೀಠ, ಚುನಾವಣೆ ಮುಕ್ತಾಯಕ್ಕೆ ಹಿಂದಿನ 48 ಗಂಟೆ ಅವಧಿಯಲ್ಲಿ ಮದ್ಯ ಮಾರಾಟ ನಿರ್ಬಂಧಿಸಬಹುದು ಎಂಬ ಸರ್ಕಾರದ ವಾದವನ್ನು ತಿರಸ್ಕರಿಸಿತ್ತು. ಜೊತೆಗೆ, ಮತದಾನದ ದಿನವಾದ ಫೆ.16 ಮತ್ತು ಮತ ಎಣಿಕೆ ದಿನವಾದ ಫೆ.20ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ಮಾತ್ರ ನಗರದಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಿ ಮಧ್ಯಂತರ ಆದೇಶ ಮಾಡಿತ್ತು. ಆ ಮೂಲಕ ನಗರ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರ ಆದೇಶವನ್ನು ಮಾರ್ಪಡಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ: ಕಾನೂನು ಪದವಿ ಪಡೆದಿದ್ದ ಸರ್ಕಾರಿ ನೌಕರನಿಗೆ ಪ್ರಮಾಣ ಪತ್ರ ನೀಡಲು ಹೈಕೋರ್ಟ್ ಸೂಚನೆ