ಬೆಂಗಳೂರು : ಕರ್ತವ್ಯಕ್ಕೆ ಎಂಟು ತಿಂಗಳು ಅನಧಿಕೃತವಾಗಿ ಗೈರು ಹಾಜರಾಗಿದ್ದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ನ ಉದ್ಯೋಗಿಯ ವಜಾ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಎಚ್‌ಎಎಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮಾನ್ಯ ಮಾಡಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯಪೀಠ, ಸೇವೆಗೆ ದೀರ್ಘಾವಧಿ ಗೈರು ಹಾಜರಾಗಿರುವುದನ್ನು ಗಂಭೀರ ದುರ್ನಡತೆ ಎಂದು ಹೇಳಿ ಸೇವೆಯಿಂದ ವಜಾ ಆದೇಶವನ್ನು ಸರಿ ಎಂದು ಹೇಳಿದೆ. ಅಲ್ಲದೇ, ಮೇಲ್ಮನವಿದಾರರು ವಜಾ ಆದೇಶದಿಂದ ಉದ್ಯೋಗಿಗೆ ಭವಿಷ್ಯದಲ್ಲಿ ಉದ್ಯೋಗ ಸಿಗಲು ತೊಂದರೆ ಆಗುತ್ತದೆ. ಇದು ತೀವ್ರ ಕಠಿಣ ಕ್ರಮವಾಗಲಿದೆ. ಆದರೆ, ಆಗಿರುವ ದುರ್ನಡತೆಗೆ ಬೆಲೆ ತೆರಬೇಕಾಗುತ್ತದೆ. ಏಕ ಸದಸ್ಯಪೀಠ ನೀಡಿದ್ದ ಆದೇಶದಂತೆ ಉದ್ಯೋಗಿಯಿಂದ ಪಡೆದಿದ್ದ 2.2 ಲಕ್ಷ ರೂ. ಹಣವನ್ನು ಹಿಂತಿರುಗಿಸುವಂತೆ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ : ಎಚ್ಎಎಲ್ನಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಎ.ಕೆ.ಸಿನ್ಹಾ 2016ರ ಸೆಪ್ಟೆಂಬರ್ 22ರಿಂದ 2017 ಜನವರಿ 6ರವರೆಗೆ ಸತತ 107 ದಿನ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದನು. ಇಲಾಖಾ ವಿಚಾರಣೆ ನಂತರ ಆತನನ್ನು ಸೇವೆಯಿಂದ ವಜಾಗೊಳಿಸಿತ್ತು. ಅಲ್ಲದೇ, ಸೇವಾ ಗುತ್ತಿಗೆ ಉಲ್ಲಂಘನೆ ಮಾಡಿದ್ದಕ್ಕಾಗಿ 2.2 ಲಕ್ಷ ರೂ. ಹಣ ಪಾವತಿಸುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ಏಕ ಸದಸ್ಯಪೀಠದ ಮುಂದೆ ಪ್ರಶ್ನಿಸಲಾಗಿತ್ತು. ಏಕ ಸದಸ್ಯಪೀಠ 2023ರ ನವೆಂಬರ್ನಲ್ಲಿ ಕಂಪನಿ ಸೇವೆಯಿಂದ ವಜಾಗೊಳಿಸಿದ್ದ ಆದೇಶ ರದ್ದುಗೊಳಿಸಿ, ಕಂಪನಿ ಉದ್ಯೋಗಿಯಿಂದ ಪಡೆದಿದ್ದ ಹಣವನ್ನು ವಾಪಸ್ ನೀಡುವಂತೆ ಆದೇಶ ನೀಡಿತ್ತು.
ಇದನ್ನು ಪ್ರಶ್ನಿಸಿ ಎಚ್‌ಎಎಲ್ ಮೇಲ್ಮನವಿ ಸಲ್ಲಿಸಿ, ಅನಧಿಕೃತವಾಗಿ ಗೈರು ಹಾಜರಾಗಿದ್ದೇ ಅಲ್ಲದೇ, ಆ ಸಂಬಂಧ ಸಲ್ಲಿಸಿದ್ದ ವೈದ್ಯಕೀಯ ಪ್ರಮಾಣ ಪತ್ರಗಳೂ ಸಹ ದಾರಿ ತಪ್ಪಿಸುವಂತಿದ್ದವು ಎಂದು ಹೇಳಿತ್ತು. ಆದರೆ, ಸಿನ್ಹಾ ತನಗೆ ಬೆನ್ನು ನೋವು ಇತ್ತು. ಆ ಕಾರಣ ಸೇವೆಗೆ ಹಾಜರಾಗಿರಲಿಲ್ಲ. ಇದೀಗ ವಜಾ ಆದೇಶದಿಂದ ತೊಂದರೆ ಆಗಿದೆ ಎಂದು ಹೇಳಿದ್ದರು.