ಶಿವಮೊಗ್ಗ: ಆಗಸ್ಟ್ 26ರಂದು ಸಾಗರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆಗೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಸರ್ಕಾರ ಸಾಗರ ನಗರಸಭೆ ಅಧ್ಯಕ್ಷ ಸ್ಥಾನ ಮೀಸಲಾತಿಯನ್ನು ಸಾಮಾನ್ಯ ಮಹಿಳೆಗೆ ಘೋಷಿಸಿತ್ತು. ಆದರೆ ಕಳೆದ ಮೂರು ಅವಧಿಗೂ ಸಹ ಇದೇ ಮೀಸಲಾತಿ ಜಾರಿ ಮಾಡಲಾಗಿತ್ತು. ಹೀಗಾಗಿ ಕಾಂಗ್ರೆಸ್ ನಗರಸಭೆ ಸದಸ್ಯೆ ಲಲಿತಮ್ಮ ಎಂಬವರು ಮೀಸಲಾತಿ ಪಟ್ಟಿಯಲ್ಲಿ ಆವರ್ತನ ಪದ್ಧತಿ ಪಾಲಿಸಿಲ್ಲ ಎಂದು ಆರೋಪಿಸಿ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಕುರಿತು ಕಾಂಗ್ರೆಸ್ ನಗರಸಭೆ ಸದಸ್ಯೆ ಲಲಿತಮ್ಮ ಪ್ರತಿಕ್ರಿಯಿಸಿ, "ನಗರಸಭೆ ಪ್ರಾರಂಭವಾದಾಗಿನಿಂದ ಮೂರು ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಬಂದಿದೆ. ಬೇರೆ ವರ್ಗದವರಿಗೆ ಬಂದಿಲ್ಲ. ನಗರಸಭೆಯಲ್ಲಿ ಬೇರೆ ವರ್ಗದವರೂ ಸಹ ಇದ್ದಾರೆ. ಅವರಿಗೆ ಅವಕಾಶ ಸಿಗಬೇಕು. ಇದರಿಂದ ನಾನು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದೇನೆ. ಸಾಮಾನ್ಯ ಮಹಿಳೆ ಹೊರತುಪಡಿಸಿ ಬೇರೆ ಯಾರಿಗೆ ಮೀಸಲಾತಿ ಸಿಕ್ಕರೂ ಸಹ ಸಂತೋಷ" ಎಂದರು.
ಲಲಿತಮ್ಮ ಪರ ವಕೀಲ ಸಂತೋಷ ತಬಲಿ ಬಂಗಾರಪ್ಪ ಪ್ರತಿಕ್ರಿಯಿಸಿ, "ಸಾಗರ ನಗರಸಭೆ ಸದಸ್ಯೆ ಲಲಿತಮ್ಮನವರು ಸರ್ಕಾರ ನೀಡಿರುವ ಮೀಸಲಾತಿಯ ವಿರುದ್ಧ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಇದರ ಕುರಿತು ನ್ಯಾಯಾಲಯಕ್ಕೆ ರಿಟ್ ಅರ್ಜಿ ದಾಖಲಿಸಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯ ಮುಂದಿನ ಆದೇಶದವರೆಗೂ ಚುನಾವಣೆ ನಡೆಸದಂತೆ ತಡೆಯಾಜ್ಞೆ ನೀಡಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ವೃತ್ತಿಪರ ಕೋರ್ಸ್ಗಳಿಗೆ ಕ್ರೀಡಾ ಕೋಟಾದಲ್ಲಿ ಅರ್ಹತೆ ಮರು ಪರಿಶೀಲಿಸಲು ಕೆಇಎಗೆ ಹೈಕೋರ್ಟ್ ನಿರ್ದೇಶನ - High Court