ಬೆಂಗಳೂರು: 'ಹಿಂದೂಗಳ ಅಗತ್ಯ ನಮಗೆ ಬೇಡ. ಮುಸ್ಲಿಮರ ವೋಟು ಸಾಕು. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ. ಮುಸ್ಲಿಮರ ಓಲೈಕೆ ಬಗ್ಗೆ ಬಿಜೆಪಿಗರ ಟೀಕೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ಅದು ಪತ್ರಿಕೆಯಲ್ಲಿ ವರದಿಯಾಗಿದೆ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪ ಎದುರಿಸುತ್ತಿರುವ ವಿ.ಪ್ರಭಾಕರ್ ರೆಡ್ಡಿ ಸೇರಿ ಮೂವರು ಆರೋಪಿಗಳ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ಬೆಂಗಳೂರು ಪಶ್ಚಿಮ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ವಿ.ಪ್ರಭಾಕರ್ ರೆಡ್ಡಿ, ಹೆಚ್.ಎನ್. ವಿಜಯಕಯಮಾರ್, ವಿರೂಪಾಕ್ಷ ಬಣಕಾರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ''ಅರ್ಜಿದಾರ ಆರೋಪಿಗಳು ಮೂಲ ಸುದ್ದಿಯ ಜನಕರಲ್ಲ. ಇವರು ಇದ್ದ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತಪ್ಪಾಗಿ ಸುಳ್ಳು ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ. ಪೊಲೀಸರು ವಿಧಿಸಿರುವ ಅಪರಾಧ ಕಲಂಗಳು ಅರ್ಜಿದಾರರಿಗೆ ಅನ್ವಯ ಆಗಲ್ಲ. ಆದ್ದರಿಂದ ಅರ್ಜಿದಾರ ಆರೋಪಿಗಳ ವಿರುದ್ಧದ ಪ್ರಕರಣ ರದ್ದುಪಡಿಸಬೇಕು'' ಎಂದು ಕೋರಿದರು.
ಸರ್ಕಾರದ ವಕೀಲರು ವಾದ ಮಂಡಿಸಿ, ''ಪ್ರಕರಣದ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಒಟ್ಟು 7 ಆರೋಪಿಗಳಿದ್ದಾರೆ. ಮೂವರು ಆರೋಪಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಆರೋಪ ಅವರ ಮೇಲಿರಬಹುದು. ಆದರೆ, ಉಳಿದ ಆರೋಪಗಳ ಪಾತ್ರದ ಬಗ್ಗೆ ತನಿಖೆ ನಡೆಯಬೇಕಿದೆ. ಇಡೀ ಪ್ರಕರಣಕ್ಕೆ ತಡೆ ನೀಡುವುದು ಬೇಡ. ಈಗ ಕೋರ್ಟ್ ಮುಂದೆ ಬಂದಿರುವ ಆರೋಪಿಗಳು ತನಿಖೆಗೆ ಸಹಕರಿಸಲಿ, ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸುವುದಿಲ್ಲ'' ಎಂದು ಹೇಳಿದರು.
ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರ ಮೂವರು ಆರೋಪಿಗಳ ವಿರುದ್ಧದ ಎಫ್‌ಐಆರ್‌ಗೆ ತಡೆ ನೀಡಿತು. ಆದರೆ, ಪ್ರಕರಣದ ಇತರ ಆರೋಪಿಗಳಿಗೆ ಈ ತಡೆ ಅನ್ವಯ ಆಗಲ್ಲ ಎಂದು ಹೇಳಿತು.