ಬೆಂಗಳೂರು: ತನ್ನ ಪತಿ ತನಗಿಂತಲೂ ಮನೆಯಲ್ಲಿ ಸಾಕಿದ ಬೆಕ್ಕಿನ ಮೇಲೆಯೇ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರ ವಿರುದ್ಧ ಅವರ ಪತ್ನಿ ದಾಖಲಿಸಿದ್ದ ದೌರ್ಜನ್ಯ ಆರೋಪದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿ ಆದೇಶಿಸಿದೆ.
ದೂರುದಾರ ಮಹಿಳೆಯ ಪತಿ, ಅತ್ತೆ ಮತ್ತು ಮಾವನ ವಿರುದ್ಧ ದಾಖಲಿಸಿದ್ದ ದೂರಿಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ದೂರುದಾರ ಪತ್ನಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ಪ್ರಕರಣ ಸಂಬಂಧ ದೂರುದಾರರು ಐಪಿಸಿ ಸೆಕ್ಷನ್ 498ಎ (ಮಹಿಳೆಯ ವಿರುದ್ಧ ದೌರ್ಜನ್ಯ) ಅಡಿ ಯಾವುದೇ ಆರೋಪ ಬಹಿರಂಗಪಡಿಸಿಲ್ಲ ಎಂದು ತಿಳಿಸಿರುವ ನ್ಯಾಯಪೀಠ, ಇಂತಹ ಕ್ಷುಲ್ಲಕ ಪ್ರಕರಣಗಳು ನ್ಯಾಯಾಂಗ ವ್ಯವಸ್ಥೆ ನಿರ್ಬಂಧಿಸುತ್ತವೆ ಎಂದು ತಿಳಿಸಿದೆ.
ಪತಿಯ ಕ್ರೌರ್ಯಕ್ಕೆ ಸಂಬಂಧಿಸಿದ ಪ್ರಕರಣವಲ್ಲ: ಪ್ರಕರಣದ ಕುರಿತ ದಾಖಲೆಗಳನ್ನು ಪರಿಶೀಲಿಸಿದರೆ, ಗಂಡ ಹೆಂಡತಿಗಿಂತಲೂ ಮನೆಯಲ್ಲಿ ಸಾಕಿದ ಬೆಕ್ಕನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಇದೊಂದು ಮನೆಯಲ್ಲಿ ಸಾಕು ಬೆಕ್ಕಿಗೆ ಸಂಬಂಧಿಸಿದ ಜಗಳವಾಗಿದೆ. ಬೆಕ್ಕು ಪತ್ನಿಗೆ ಹಲವು ಬಾರಿ ಪರಚಿರುವ ಆರೋಪವಿದೆ. ಇದೇ ಕಾರಣದಿಂದ ಹಲವು ಬಾರಿ ಪತಿ - ಪತ್ನಿ ನಡುವೆ ಜಗಳಗಳು ನಡೆದಿದ್ದು, ಒಬ್ಬರಿಗೊಬ್ಬರು ಆರೋಪ - ಪ್ರತ್ಯಾರೋಪಗಳು ನಡೆದಿವೆ. ಹೀಗಾಗಿ, ವರದಕ್ಷಿಣೆಗಾಗಿ ಹಲ್ಲೆ ಅಥವಾ ಪತಿಯ ಕ್ರೌರ್ಯಕ್ಕೆ ಸಂಬಂಧಿಸಿದ್ದಲ್ಲ ಎಂಬುದು ಗೊತ್ತಾಗಲಿದೆ ಎಂದು ಪೀಠ ಹೇಳಿದೆ.
ಇದನ್ನೂ ಓದಿ: 5 ವರ್ಷದ ಬಾಲಕಿ ಅತ್ಯಾಚಾರ ಪ್ರಕರಣ: 62 ವರ್ಷದ ವ್ಯಕ್ತಿಯ ಮರಣದಂಡನೆ ಜೀವಾವಧಿಯಾಗಿ ಪರಿವರ್ತಿಸಿದ ಹೈಕೋರ್ಟ್
ಪ್ರಕರಣ ಸಂಬಂಧ ದಾಖಲಾಗಿರುವ ದೂರನ್ನು ಪರಿಶೀಲಿಸಿದರೆ ದೌರ್ಜನ್ಯ ಹಾಗೂ ವರದಕ್ಷಿಣಿ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಆರೋಪಗಳಿಲ್ಲ. ಇಂತಹ ಪ್ರಕರಣಗಳು ಪ್ರಸ್ತುತ ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಅಡ್ಡಿಯುಂಟು ಮಾಡುತ್ತಿವೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ದೌರ್ಜನ್ಯ ನಡೆಸಿದ ಆರೋಪದಲ್ಲಿ ಅರ್ಜಿದಾರರ ವಿರುದ್ಧ ತನಿಖೆ ನಡೆಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ ಎಂದು ತಿಳಿಸಿ ಪ್ರಕರಣದ ತನಿಖೆಗೆ ತಡೆ ನೀಡಿ ಆದೇಶಿಸಿದೆ.
ಇದನ್ನೂ ಓದಿ: ನಕಲಿ ಜಾತಿ ಪ್ರಮಾಣ ಪತ್ರ: ಕೊತ್ತೂರು ಮಂಜುನಾಥ್ ವಿರುದ್ಧದ FIR ರದ್ದುಪಡಿಸಲು ಹೈಕೋರ್ಟ್ ನಕಾರ