ಬೆಂಗಳೂರು: ಅಕ್ರಮ ಮದ್ಯ ಸಾಗಾಟ ಮಾಡುತ್ತಿರುವ ಆರೋಪಿಗಳಿಂದ ಪಂಚನಾಮೆ ನಡೆಸಿ ಮದ್ಯದ ಬಾಟಲ್ಗಳನ್ನು ವಶಪಡಿಸಿಕೊಂಡ ಆಧಾರದಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಇಬ್ಬರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿದೆ.
ಕಾನೂನುಬಾಹಿರವಾಗಿ ಮದ್ಯಸಾಗಾಟ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ದಯಾನಂದ ಮತ್ತು ರವಿ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಯಾವುದೇ ಆರೋಪ ಎದುರಾದಲ್ಲಿ ಮಾಹಿತಿದಾರರು ಸಹಿ ಹಾಕಿದ ದೂರಿನಿಂದ ಎಫ್ಐಆರ್ ದಾಖಲಿಸಬಹುದಾಗಿದೆ. ಮತ್ತೊಂದು ಪ್ರಕಾರದಲ್ಲಿ ಪೊಲೀಸ್ ಅಧಿಕಾರಿಯ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಾರೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಈ ಪ್ರಕ್ರಿಯೆ ನಡೆದಿಲ್ಲ.
ಬದಲಿಗೆ ಅಕ್ರಮ ಮದ್ಯಸಾಗಾಟ ಮಾಡುತ್ತಿದ್ದವರಿಂದ ಪಂಚನಾಮೆ ನಡೆಸಿ ಮದ್ಯ ವಶಪಡಿಸಿಕೊಂಡ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಇದು ಕಾನೂನುಬಾಹಿರ ಎಂದು ಪೀಠ ತಿಳಿಸಿದೆ. ಅಲ್ಲದೆ, ಈ ಅಂಶ ಪರಿಗಣಿಸದೆ ಶಿಕ್ಷೆ ವಿಧಿಸಿರುವುದು ದೋಷದಿಂದ ಕೂಡಿದೆ ಎಂದು ಪೀಠ ಹೇಳಿದೆ.
ಎಫ್ಐಆರ್ ದಾಖಲಿಸಿರುವುದು ಅನೂರ್ಜಿತವಾಗಿದೆ. ಹೀಗಿರುವಾಗ ಶಿಕ್ಷೆ ರದ್ದಾಗಲಿದೆ ಎಂದು ತಿಳಿಸಿರುವ ಪೀಠ, ಅರ್ಜಿ ಪುರಸ್ಕರಿಸಿದ್ದು, ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಹುಣಸೂರಿನ ಅಬಕಾರಿ ವಿಭಾಗದ ಸಬ್ ಇನ್ಸ್ಪೆಕ್ಟರ್ 2008 ನವೆಂಬರ್ 24 ರಂದು ಬೆಳಗ್ಗೆ 10:15ರ ಸಮಯದಲ್ಲಿ ಚಲ್ಲಹಳ್ಳಿ ಗ್ರಾಮದ ಬಳಿ ಸಿಬ್ಬಂದಿಯೊಂದಿಗೆ ಗಸ್ತು ತಿರುಗುತ್ತಿದ್ದರು. ಈ ವೇಳೆ ಬಲ್ಲ ಮೂಲಗಳ ಮಾಹಿತಿಯ ಆಧಾರದಲ್ಲಿ ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯೊಬ್ಬರು ಮದ್ಯ ಸಾಗಾಟ ಮಾಡುತ್ತಿರುವ ಅಂಶ ಗೊತ್ತಾಗಿತ್ತು.
ಈ ಸಂಬಂಧ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಆರೋಪಿಯ ವಾಹನದಲ್ಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಪಡೆದುಕೊಂಡಿದ್ದ ದಾಖಲೆಗಳನ್ನು ಪರಿಶೀಲಿಸಿದರು. ಈ ಕುರಿತು ಸೂಕ್ತ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ವಾಹನವನ್ನು ಜಪ್ತಿ ಮಾಡಿ ಆರೊಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದರು.
180 ಎಂಎಲ್ನ 48 ಒರಿಜಿನಲ್ ಚಾಯ್ಸ್ ವಿಸ್ಕಿ ಬಾಟಲ್ ವಶಪಡಿಸಿಕೊಂಡಿದ್ದರು. ಇದಾದ ಬಳಿಕ ವಶಕ್ಕೆ ಪಡೆದಿದ್ದ ಮದ್ಯವನ್ನು ರಸಾಯನಿಕ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಬಳಿಕ ಆರೋಪಿಗಳ ವಿರುದ್ದ ತನಿಖೆ ನಡೆಸಿ ಹುಣಸೂರಿನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಜೆಎಂಎಫ್ಸಿ ನ್ಯಾಯಾಲಯ ಆರೋಪಿಗಳಿಗೆ 5 ವರ್ಷ ಶಿಕ್ಷೆ ಮತ್ತು ಒಂದು ಲಕ್ಷ ದಂಡ ವಿಧಿಸಿ ಆದೇಶಿಸಿತ್ತು. ಈ ಆದೇಶವನ್ನು ಮೈಸೂರಿನ ಸೆಷನ್ಸ್ ನ್ಯಾಯಾಲಯ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾದರು ಹೈಕೋರ್ಟ್‌ನಲ್ಲಿ ಪುನರ್‌ಪರಿಶೀಲನಾ ಅರ್ಜಿ ದಾಖಲಿಸಿದ್ದರು.