ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 2 ಕೋಟಿ ರೂ ಪಡೆದು ವಂಚಿಸಿದ ಆರೋಪದಲ್ಲಿ ಬಂಧಿತರಾಗಿರುವ ಗೋಪಾಲ ಜೋಶಿ ಮತ್ತಿತರರ ವಿರುದ್ಧದ ತನಿಖೆಗೆ ಮಧ್ಯಂತರ ತಡೆ ನೀಡಿರುವ ಹೈಕೋರ್ಟ್, ಪೊಲೀಸ್ ಕಸ್ಟಡಿಯಲ್ಲಿರುವ ಅರ್ಜಿದಾರರನ್ನು ಕಾನೂನಿನ ಅನ್ವಯ ಬಿಡುಗಡೆ ಮಾಡುವಂತೆ ಆದೇಶ ನೀಡಿತು.
ಹುಬ್ಬಳ್ಳಿಯ ಗೋಪಾಲ ಜೋಶಿ ಮತ್ತು ಅಜಯ್ ಜೋಶಿ ಹಾಗೂ ಬೆಂಗಳೂರಿನ ವಿಜಯಲಕ್ಷ್ಮಿ ಎಸ್.ಜಿ.ಜೋಶಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಿಸಲು 25 ಲಕ್ಷ ಹಣ ಪಡೆದಿದ್ದಾರೆ ಎಂಬ ಆರೋಪವಿದೆ. ಇದು ಚುನಾವಣೆಗೂ ಮುನ್ನ ನಡೆದಿರುವ ಘಟನೆ. ಟಿಕೆಟ್ ಸಿಗದೇ ಇದ್ದುದು ಗೊತ್ತಾದ ನಂತರ ಸುನೀತಾ ಚವ್ಹಾಣ್ ದೂರು ದಾಖಲಿಸಬಹುದಿತ್ತು. ಆದರೆ, ಆರು ತಿಂಗಳ ಬಳಿಕ ಅಕ್ಟೋಬರ್ 17ರಂದು ದೂರು ದಾಖಲಿಸಲಾಗಿದೆ. ಈ ನಡುವೆ, ಪಡೆದಿರುವ ಹಣವನ್ನು ಹಿಂದಿರುಗಿಸುವುದಾಗಿ ಆರೋಪಿಗಳು ಹೇಳುತ್ತಲೇ ಬಂದಿದ್ದಾರೆ. ಹೀಗಾಗಿ, ಇದು ಹಣದ ವಿವಾದವಾಗಿದೆ. ಇದಕ್ಕೆ ಈಗ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ದೌರ್ಜನ್ಯ ನಿಷೇಧ ಕಾಯಿದೆ ಬಣ್ಣ ನೀಡಲಾಗಿದೆ. ಅರ್ಜಿದಾರರ ಮನೆಯಲ್ಲಿ ಜಾತಿ ನಿಂದನೆಯಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಇದು ನಾಲ್ಕು ಗೋಡೆಗಳ ನಡುವೆ ನಡೆದಿರುವ ಘಟನೆ. ಸಾರ್ವಜನಿಕ ಸ್ಥಳವಲ್ಲ. ಹೀಗಾಗಿ, ಎಸ್‌ಸಿ,ಎಸ್‌ಟಿ ಕಾಯಿದೆ ಸೆಕ್ಷನ್ 3(1) ಆರ್ ಮತ್ತು ಎಸ್ ಅಡಿ ಅಪರಾಧವಾಗುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಪ್ರಕರಣದ ಮುಂದಿನ ತನಿಖೆಗೆ ಅನುಮತಿಸುವುದು ಲಲಿತ್ ಚತುರ್ವೇದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗುತ್ತದೆ. ಹೀಗಾಗಿ, ತನಿಖೆ ಹಾಗೂ ದೂರಿಗೆ ಸಂಬಂಧಿಸಿದಂತೆ ಆನಂತರ ಕೈಗೊಂಡಿರುವ ಎಲ್ಲಾ ಕ್ರಮಗಳಿಗೆ ಮಧ್ಯಂತರ ತಡೆಯಾಜ್ಞೆ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಅರ್ಜಿದಾರರನ್ನು ಕಾನೂನಿನ ಅನ್ವಯ ಬಿಡುಗಡೆ ಮಾಡಬೇಕು ಎಂದು ಪೀಠ ಹೇಳಿದೆ.
ವಿಚಾರಣೆ ವೇಳೆ ಸರ್ಕಾರ ಪರ ವಕೀಲರು, ತನಿಖಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ. ಈಡೇರಿಸುವ ಆಶ್ವಾಸನೆಗಳನ್ನು ಆರೋಪಿಗಳು ನೀಡಿರಲಿಲ್ಲ. ತನಿಖಾ ವರದಿಯನ್ನು ನೋಡಿ, ಕೃತ್ಯಕ್ಕೆ ಕೇಂದ್ರ ಸಚಿವರ ಕಚೇರಿಯನ್ನು ಬಳಕೆ ಮಾಡಲಾಗಿದೆ. ತನಿಖೆಯ ಸಂದರ್ಭದಲ್ಲಿ ಕೆಲವು ವಿಡಿಯೊಗಳು ಮತ್ತು ಆಡಿಯೊ ಲಭ್ಯವಾಗಿವೆ. ಹಣ ಕೇಳಿದಾಗ ಆರೋಪಿಗಳು ಜಾತಿ ಹೆಸರಿಡಿದು ನಿಂದನೆ ಮಾಡಿದ್ದಾರೆ. ಆರೋಪಿಗಳು ಒಬ್ಬರಿಂದ ಮಾತ್ರ ಹಣ ಸಂಗ್ರಹಿಸಿಲ್ಲ ಎಂದು ಪೀಠಕ್ಕೆ ವಿವರಿಸಿದರು.
ಅರ್ಜಿದಾರರ ಪರ ವಕೀಲ, ಅರ್ಜಿದಾರರು ಹಣ ಹಿಂದಿರುಗಿಸಲು ಸಿದ್ಧರಿದ್ದಾರೆ. 2024ರ ಮಾರ್ಚ್‌ನಲ್ಲಿ ಲೋಕಸಭಾ ಟಿಕೆಟ್ ಪಡೆಯಲು ಚೆಕ್ ಮೂಲಕ 25 ಲಕ್ಷ ನೀಡಲಾಗಿದೆ. ಆನಂತರ 1.75 ಲಕ್ಷ ಕೈ ಸಾಲ ಪಡೆಯಲಾಗಿದೆ. ಇದಕ್ಕೆ ಮೂರನೇ ಆರೋಪಿ ಅಜಯ್ ಜೋಶಿ ಗ್ಯಾರಂಟಿ ನೀಡುವುದಾಗಿ ಹೇಳಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಅರ್ಜಿದಾರ ಆರೋಪಿಗಳು ಅಕ್ಟೋಬರ್ 29ರವರೆಗೆ ಪೊಲೀಸ್ ಕಸ್ಟಡಿಯಲ್ಲಿರುವುದರಿಂದ ಅವರ ಬಿಡುಗಡೆಗೆ ಸಂಬಂಧಿಸಿದಂತೆ ಸೂಕ್ತ ಅರ್ಜಿ ಹಾಕಿದರೆ ಬಿಡುಗಡೆಗೆ ಆದೇಶಿಸುವುದಾಗಿ ಪೀಠ ಮೌಖಿಕವಾಗಿ ಸೂಚನೆ ನೀಡಿತು.
ಇದನ್ನೂ ಓದಿ: ಗೋಪಾಲ್ ಜೋಶಿ ವಿರುದ್ಧದ ವಂಚನೆ ಆರೋಪ: ದಾಖಲೆ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ