ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಜರಾ ಹೊಸಹಳ್ಳಿ ಗ್ರಾಮಕ್ಕೆ ಸೇರಿದ ಗೋಮಾಳ ಜಮೀನು ಅನಧಿಕೃತವಾಗಿ ಒತ್ತುವರಿ ಮಾಡಲಾಗಿದ್ದನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣ ಸಂಬಂಧ ದೊಡ್ದಬಳ್ಳಾಪುರ ನಿವಾಸಿ ರಾಮು ನೇರಳಗಟ್ಟ ಮತ್ತು ಹೆಚ್.ಕಾಂತರಾಜು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್ ಕೃಷ್ಣ ಕುಮಾರ್ ಹಾಗೂ ಡಿ.ರಾಮಚಂದ್ರ ಹುದ್ದಾರ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪ ಆಯುಕ್ತರು, ದೊಡ್ಡಬಳ್ಳಾಪುರ ತಾಲೂಕು ಸಹಾಯಕ ಕಮಿಷನರ್, ತಹಶೀಲ್ದಾರ್ಗೆ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂ.10 ಕ್ಕೆ ಮುಂದೂಡಿದೆ.
ಈ ವೇಳೆ ಅರ್ಜಿದಾರರ ಪರ ವಕೀಲರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಜರಾ ಹೊಸಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೇ ನಂ 57, 58 ಮತ್ತು 60ರ ಸರ್ಕಾರಿ ಗೋಮಾಳ ಜಮೀನನ್ನು ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಜಾಗದ ಸುತ್ತಲೂ ಸಿಮೆಂಟ್ ಕಾಂಪೌಡ್ಗಳನ್ನು ನಿರ್ಮಿಸಲಾಗಿದ್ದು, ಕೂಲಿ ಕಾರ್ಮಿಕರು ಬಿಟ್ಟು ಕೆಲಸ ಮಾಡಿಸುತ್ತಿದ್ದಾರೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ಸರ್ಕಾರಕ್ಕೆ ಸೇರಬೇಕಾದ 30 ರಿಂದ 40 ರ ಎಕರೆಯನ್ನು ಭೂಗಳ್ಳರಿಂದ ರಕ್ಷಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯಪೀಠದ ಮುಂದೆ ಮನವಿ ಮಾಡಿದರು.
ಇದನ್ನೂ ಓದಿ: ದಂಪತಿ ಅನ್ಯೋನ್ಯತೆಯನ್ನು ಒಂದು ಛಾಯಾಚಿತ್ರದಿಂದ ನಿರ್ಧರಿಸಲಾಗದು: ಹೈಕೋರ್ಟ್ - High Court
ಪ್ರಕರಣ ಸಂಬಂಧ ಕಾನೂನು ಬಾಹಿರವಾಗಿ ಸರ್ಕಾರಿ ಗೋಮಾಳದ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಅರ್ಜಿದಾರರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕ್ಷ್ಯಧಾರಗಳ ಸಮೇತ ದೂರು ನೀಡಿದ್ದು, ಒತ್ತುವರಿ ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕುದುರೆ ರೇಸ್ ಲೈಸನ್ಸ್ ಮನವಿಯನ್ನು 10 ದಿನದಲ್ಲಿ ಪರಿಗಣಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - Horse Racing License