ಬೆಂಗಳೂರು : ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯರ ಖಾಸಗಿತನದ ಹಕ್ಕನ್ನು ರಕ್ಷಣೆ ಮಾಡಬೇಕಾಗಿದ್ದು, ಆಸ್ಪತ್ರೆಗಳಲ್ಲಿ ಮಹಿಳಾ ವೈದ್ಯರಿಂದಲೇ ವೈದ್ಯಕೀಯ ಪರೀಕ್ಷೆ ನಡೆಸುವ ಕುರಿತಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ(ಬಿಎನ್‌ಎಸ್‌ಎಸ್) ಸೆಕ್ಷನ್ 184ನ್ನು ತಿದ್ದುಪಡಿ ತರಲು ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಅತ್ಯಾಚಾರ ಮತ್ತು ಕೊಲೆ ಯತ್ನ ಆರೋಪ ಎದುರಿಸುತ್ತಿರುವ ಅಜಯ್ ಕುಮಾರ್ ಭೇರಾ ಎಂಬುವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ಅಲ್ಲದೆ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಅತ್ಯಾಚಾರ ಸಂತ್ರಸ್ತೆಯರ ವೈದ್ಯಕೀಯ ಪರೀಕ್ಷೆಯನ್ನು ನೋಂದಾಯಿತ ಮಹಿಳಾ ವೈದ್ಯಕೀಯ ಅಧಿಕಾರಿಗಳು ಅಥವಾ ಅಂತಹ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಮಾತ್ರ ನಡೆಸಬೇಕು ಎಂಬುದರ ಕುರಿತಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕು. ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯರ ಕುರಿತಂತೆ ಪರಿಶೀಲನೆ ಮತ್ತು ವಿಚಾರಣೆಗೊಳಪಡಿಸುವ ಪೊಲೀಸ್ ಅಧಿಕಾರಿಗಳು, ಪ್ರಾಸಿಕ್ಯೂಟರ್‌ಗಳು, ವೈದ್ಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಗೆ ಈ ಕುರಿತ ಸೂಕ್ಷ್ಮತೆ ಮತ್ತು ಅರಿವು ಮೂಡಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ವಿಚಾರಣೆ ವೇಳೆ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಪ್ರಕರಣದಲ್ಲಿ ಸಂತ್ರಸ್ತೆಯನ್ನು ಆರು ತಾಸುಗಳ ಕಾಲ ವೈದ್ಯಕೀಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದರೆ, ಘಟನೆ ಸಂಬಂಧ ಯಾವುದೇ ವಿವರಣೆ ಮತ್ತು ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಪೀಠ, ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯನ್ನು ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಸಂತ್ರಸ್ತೆಯ ಸ್ನೇಹಿಯಾಗಿರಬೇಕು. ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯೂ ಗೌಪ್ಯತೆಯ ಹಕ್ಕನ್ನು ಹೊಂದಿರುತ್ತಾರೆ. ಹೀಗಾಗಿ ಸಂತ್ರಸ್ತೆಯನ್ನು ಅತ್ಯಂತ ಸೂಕ್ಷ್ಮವಾಗಿ ವಿಚಾರಣೆ, ಪರಿಶೀಲನೆ ನಡೆಸುವ ಕಾರ್ಯ ನಡೆಯಬೇಕು ಎಂದು ಪೀಠ ಹೇಳಿದೆ.
ಸಿಆರ್‌ಪಿಸಿ 164-ಎ ಅಡಿಯಲ್ಲಿ ಯಾವುದೇ (ಪುರುಷ-ಮಹಿಳೆ) ನೋಂದಾಯಿತ ವೈದ್ಯರು ಸಂತ್ರಸ್ತೆಯನ್ನು ಪರೀಕ್ಷಿಸಬಹುದಾಗಿದೆ ಎಂಬುದಾಗಿ ವಿವರಿಸಿತ್ತು. ಅದನ್ನು ಇದೀಗ ಬಿಎನ್‌ಎಸ್‌ಎಸ್ 184 ಅಡಿಯಲ್ಲಿ ಯಥಾವತ್ತಾಗಿ ಉಲ್ಲೇಖಿಸಲಾಗಿದೆ. ಇದರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರಿಗೆ ದೊಡ್ಡ ಅನ್ಯಾಯ ಮತ್ತು ಮುಜುಗರಕ್ಕೆ ಕಾರಣವಾಗಲಿದೆ ಎಂದು ಪೀಠ ತಿಳಿಸಿದೆ.
ಅಲ್ಲದೆ, ಬಿಎನ್‌ಎಸ್‌ಎಸ್‌ನ ಸೆಕ್ಷನ್ 184ಕ್ಕೆ ತಿದ್ದುಪಡಿ ತರುವಂತೆ ಸಂಬಂಧಪಟ್ಟವರಿಗೆ ತಿಳಿಸಬೇಕು. ಜತೆಗೆ, ಈ ರೀತಿಯ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಮತ್ತಿತರರಿಗೆ ಸೂಕ್ತ ರೀತಿಯ ಅರಿವು ಮೂಡಿಸುವಂತೆ ಕೇಂದ್ರ ಸರ್ಕಾರದ ಪರ ವಕೀಲರಾದ ಅಡಿಷನಲ್ ಸಾಲಿಸಿಟರ್ ಜನರಲ್ ಮತ್ತು ರಾಜ್ಯ ಸರ್ಕಾರದ ಪರ ಹಾಜರಿದ್ದ ವಕೀಲರಿಗೆ ನಿರ್ದೇಶನ ನೀಡಿತು. ಸಂತ್ರಸ್ತೆ ಆರೋಪಿಯನ್ನು ಗಾಯಗೊಳಿಸಿದ್ದು, ಇದು ಘಟನೆ ಸಂದರ್ಭದಲ್ಲಿ ಆಗಿದೆ ಎಂದು ತಿಳಿಸಿದ್ದಾರೆ.
ಘಟನೆ ಸಂದರ್ಭದಲ್ಲಿ ಸಂತ್ರಸ್ತೆ ಮತ್ತು ಆರೋಪಿ ಒಬ್ಬರಿಗೊಬ್ಬರು ಕೈಗಳಿಂದ ಗಾಯಗಳನ್ನು ಮಾಡಿಕೊಂಡಿರುವ ಕುರಿತಂತೆ ವೈದ್ಯಕೀಯ ದಾಖಲೆಗಳಿಂದ ತಿಳಿದು ಬಂದಿದೆ. ದಾಖಲೆಗಳು ಸಂತ್ರಸ್ತೆಯ ಆರೋಪವನ್ನು ಅನುಮಾನದಿಂದ ನೋಡುವುದು ಹಾಗೂ ತಿರಸ್ಕರಿಸಲು ಸಾಧ್ಯವಿಲ್ಲ. ಪ್ರಕರಣದ ಗಂಭೀರತೆ ಪರಿಗಣಿಸಿದರೆ ಆರೋಪಿಗೆ ಜಾಮೀನು ನೀಡಲು ಅರ್ಹರಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿ ಅರ್ಜಿ ವಜಾಗೊಳಿಸಿದೆ.
ಪ್ರಕರಣ ಸಂಬಂಧ ವೈದ್ಯರು ನೀಡಿರುವ ದಾಖಲೆಗಳು ಅವರ ವೈಯಕ್ತಿಕ ದಾಖಲೆಗಳಲ್ಲ. ಆದರೆ, ತನಿಖಾ ಅಧಿಕಾರಿಗಳು ಪ್ರಾಸಿಕ್ಯೂಟರ್‌ಗಳು, ಸಂತ್ರಸ್ತರು ಅಥವಾ ಆರೋಪಿಗಳ ಪರ ವಕೀಲರು ಮತ್ತು ವಿವಿಧ ಹಂತದಲ್ಲಿ ನ್ಯಾಯಾಲಯದ ಅಧಿಕಾರಿಗಳು ಯಥಾವತ್ತಾಗಿ ಉಲ್ಲೇಖಿಸಿವೆ.
ದುರಾದೃಷ್ಟವಶಾತ್ ಅನೇಕ ಬಾರಿ ನಾವೂ ಸಹ ಅಂತಹ ದಾಖಲೆಗಳನ್ನು ಓದುವುದು ಮತ್ತು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಲಿದೆ. ವೈದ್ಯಾಧಿಕಾರಿಗಳು ನೀಡಿರುವ ವರದಿ ಅತ್ಯಂತ ಅಸ್ಪಷ್ಟವಾಗಿದೆ. ಆದ್ದರಿಂದ ಅಧಿಕಾರಿಗಳು ಆಸ್ಪತ್ರೆಗಳು ಅಥವಾ ವೈದ್ಯಕೀಯ ವೈದ್ಯರಿಗೆ ಕಂಪ್ಯೂಟರ್ನಿಂದ ರಚಿಸಲಾದ ಅಥವಾ ಸ್ಪಷ್ಟವಾದ ಪ್ರಮಾಣಪತ್ರಗಳನ್ನು ಒದಗಿಸಬೇಕು ಎಂದು ಸೂಚನೆ ನೀಡಿದೆ.
ಇದನ್ನೂ ಓದಿ : ವೈವಾಹಿಕ ಅತ್ಯಾಚಾರ; ಸಂತ್ರಸ್ತರಿಗೆ ಬೇಕಿದೆ ಕಾನೂನು ಬೆಂಬಲ