ಬೆಂಗಳೂರು: ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಮನೆಯೂಟ ಹಾಗೂ ಇತರ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳುವ ಸಂಬಂಧ ಸೂಕ್ತ ಮಾರ್ಗಸೂಚಿ ರೂಪಿಸುವುದಾಗಿ ಹೈಕೋರ್ಟ್ ತಿಳಿಸಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ತಮಗೆ ಮನೆ ಊಟಕ್ಕೆ ಅವಕಾಶ ನೀಡಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ದರ್ಶನ್ ಪರ ಹಿರಿಯ ವಕೀಲರು, ಅರ್ಜಿದಾರರನ್ನು ಬಳ್ಳಾರಿಗೆ ಜೈಲಿಗೆ ಸ್ಥಳಾಂತರ ಮಾಡಿರುವುದಿರಂದ ಈಗ ಆ ಮನವಿ ಪ್ರಸ್ತುತವಲ್ಲ. ಆದರೆ, ನ್ಯಾಯಾಲಯವೇ ಇದಕ್ಕೆಲ್ಲ ಮಾರ್ಗಸೂಚಿಗಳನ್ನು ರೂಪಿಸಬೇಕೆನಿಸುತ್ತಿದೆ. ಆ ನಿಟ್ಟಿನಲ್ಲಿ ನೆರವು ನೀಡಲು ಸಿದ್ಧ ಎಂದು ಹೇಳಿದರು.
ಈ ಮಧ್ಯೆ ಇಂತಹದ್ದೇ ಮನವಿ ಸಲ್ಲಿಸಿರುವ ಅರ್ಜಿದಾರರ ಪರ ವಕೀಲರೊಬ್ಬರು, ಊಟ ಬಿಟ್ಟು ಇನ್ನೆಲ್ಲಾ ನಿಷೇಧಿತ ವಸ್ತುಗಳು ಜೈಲುಗಳಲ್ಲಿ ಸಿಗುತ್ತವೆ. ಆದರೆ ನಮ್ಮ ಮನೆ ಊಟ ನಾವು ತಿನ್ನಲು ಸಮಸ್ಯೆ ಎದುರಾಗಿದೆ ಎಂದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪೀಠ, ನಿಮ್ಮ ಮನೆ ಊಟ ತಿನ್ನಲು ಯಾರೂ ಸಮಸ್ಯೆ ಮಾಡುವುದಿಲ್ಲ. ಇಲ್ಲಿ ಪ್ರಶ್ನೆ ಇರುವುದು ಜೈಲಲ್ಲಿ ಮನೆ ಊಟ ಕೊಡಬೇಕಾ? ಅನ್ನುವುದು ಎಂದಿತು.
ವಾದ ಮುಂದುವರಿಸಿದ ವಕೀಲರು, ಮನೆ ಊಟ ಅಷ್ಟೇ ಅಲ್ಲ, ಬೇರೆ ಸಮಸ್ಯೆಗಳೂ ಇವೆ. ಕೈದಿಗಳಿಗೆ ಹೊಟ್ಟೆ ನೋವು, ಕಿಡ್ನಿ ಸಮಸ್ಯೆ, ಹರ್ನಿಯಾ ಮತ್ತಿತರ ಸಮಸ್ಯೆಗಳಿವೆ. ಅವರಿಗೆ ಸೂಕ್ತ ಚಿಕಿತ್ಸೆ ಬೇಕು. 90 ವರ್ಷ ವೃದ್ಧೆಯೊಬ್ಬಳಿಗೆ ಸರಿಯಾದ ಊಟ, ವೈದ್ಯಕೀಯ ಉಪಚಾರ ಸಿಗುತ್ತಿಲ್ಲ. ಕೈದಿಗಳಿಗೆ ಜೈಲುಗಳಲ್ಲಿ ಶಿಕ್ಷಣದ ವ್ಯವಸ್ಥೆಯ ಅವಶ್ಯಕತೆಯೂ ಇದೆ ಎಂದರು.
ವಾದ ಆಲಿಸಿದ ನ್ಯಾಯಪೀಠ, ಆಯ್ತು. ಈ ಬಗ್ಗೆ ಮುಂದಿನ ವಿಚಾರಣೆಯಲ್ಲಿ ಪರಿಶೀಲಿಸೋಣ ಎಂದು ತಿಳಿಸಿ ವಿಚಾರಣೆಯನ್ನು ಸೆ.11ರ ಸಂಜೆ 4 ಗಂಟೆಗೆ ಮುಂದೂಡಿತು.
ಇದನ್ನೂ ಓದಿ: 'ನಾಳೆ ಇದೆಯೆಂಬುದು ನಮಗೆ ಗೊತ್ತಿರಲ್ಲ': ಅಪಘಾತದ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಪೋಸ್ಟ್ - Rashmika Mandanna Emotional Post