ಬೆಂಗಳೂರು: ಪತಿಯಿಂದ ಸುಮಾರು 8 ವರ್ಷಗಳ ಕಾಲ ದೂರ ನೆಲೆಸಿ, ವೈವಾಹಿಕ ಸುಖಭೋಗಗಳಿಂದ ಆತನನ್ನು ವಂಚಿಸುವುದು ಕ್ರೌರ್ಯಕ್ಕೆ ಸಮಾನವಾದದ್ದು ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್, ಪತಿಯಿಂದ ದೂರ ಉಳಿದಿದ್ದ ಪತ್ನಿಗೆ ವಿಚ್ಛೇದನ ಮಂಜೂರು ಮಾಡಿತು.
ಬೆಂಗಳೂರಿನ ಹೆಸರಘಟ್ಟ ರಸ್ತೆಯ ಕಿಶೋರ್ (ಹೆಸರು ಬದಲಿಸಲಾಗಿದೆ) ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.
ಅಲ್ಲದೆ, ಪತ್ನಿ ಪತಿಯನ್ನು ಮತ್ತು ಮನೆ ತೊರೆದಿರುವ ಆಧಾರದಲ್ಲಿ ವಿಚ್ಛೇದನ ಮಂಜೂರು ಮಾಡುತ್ತಿರುವುದಾಗಿ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರ ಪತ್ನಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಸ್ವಂತ ದುಡಿಮೆಯಿದೆ. ತಮ್ಮ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯದ ಮುಂದೆ ಬಂದಿಲ್ಲ. ಹೀಗಾಗಿ ಅವರಿಗೆ ಶಾಶ್ವತ ಜೀವನಾಂಶ ನೀಡಬೇಕಾದ ಅನಿವಾರ್ಯ ಎದುರಾಗುವುದಿಲ್ಲ. ಜೋತೆಗೆ, ಅರ್ಜಿದಾರರು ತನ್ನ ಇಬ್ಬರ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಸಿದ್ದರಿದ್ದಾರೆ. ಅದಕ್ಕಾಗಿ ನ್ಯಾಯಾಲಯ ನಿರ್ಧರಿಸಿದ ಮೊತ್ತವನ್ನು ಠೇವಣಿ ಇಡುವುದಾಗಿ ಸಿದ್ದರಿದ್ದಾರೆ. ಅದೇ ಮೊತ್ತವನ್ನು ಅವರ ಜೀವನಾಂಶ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಬಳಸಬಹುದಾಗಿದೆ. ಹೀಗಾಗಿ ಇಬ್ಬರು ಮಕ್ಕಳ ಹೆಸರಿನಲ್ಲಿ ತಲಾ 10 ಲಕ್ಷ ರೂ. ಗಳನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಠೇವಣಿ ಇಡಬೇಕು ಎಂದು ಸೂಚನೆ ನೀಡಿದೆ. ಈ ಮೊತ್ತ ಮಕ್ಕಳು ಪ್ರೌಢಾವಸ್ಥೆಗೆ ತಲುಪಿದ ಬಳಿಕ ಪಡೆದುಕೊಳ್ಳಬಹುದಾಗಿದೆ ಎಂದು ಪೀಠ ಹೇಳಿದೆ.
ಅಲ್ಲದೆ, ದಂಪತಿಯ ವಿವಾಹ ವಿಚ್ಛೇದನ ಮಾಡಿ ಆದೇಶಿಸಿದ್ದು, ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡದೆ ಅರ್ಜಿ ತಿರಸ್ಕರಿಸಿದ್ದ ಆದೇಶವನ್ನು ರದ್ದುಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಕಿಶೋರ್ ಮತ್ತು ಪ್ರತಿವಾದಿ (ಪತ್ನಿ) ಉಡುಪಿಯಲ್ಲಿ 2004ರ ಮೇ 2ರಂದು ವಿವಾಹವಾಗಿದ್ದರು. ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದರು.
ಇದಾದ ನಂತರ ಪತ್ನಿ ತನ್ನ ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ಸದಾ ಫೋನಿನಲ್ಲಿ ಮಾತನಾಡುತ್ತಿದ್ದರು. ಈ ಸಂಬಂಧ ಹಲವು ಬಾರಿ ತಿಳಿಸಿದರೂ ಅವರ ಸರಿಪಡಿಸಿಕೊಂಡಿರಲಿಲ್ಲ. ಆದರೆ, 2016 ರ ಮಾರ್ಚ್ 28 ರಂದು ಇದ್ದಕ್ಕಿದಂತೆ ಪತಿಗೆ ತಿಳಿಸದೆ ಮನೆ ತೊರೆದಿದ್ದರು.
ಮನೆಗೆ ಹಿಂದಿರುಗುವಂತೆ ಕಿಶೋರ್ ಸಾಕಷ್ಟು ಬಾರಿ ಪ್ರಯತ್ನ ಮಾಡಿದರೂ ಅವರು ಹಿಂದಿರುಗಿರಲಿಲ್ಲ. ಹೀಗಾಗಿ ವಿಚ್ಛೇದನ ಕೋರಿ ಕಿಶೋರ್ ಉಡುಪಿಯ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕಿಶೋರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಪತ್ನಿಗಿಂತಲೂ ಬೆಕ್ಕಿನ ಮೇಲೆಯೇ ಪತಿಗೆ ಹೆಚ್ಚು ಕಾಳಜಿ ಆರೋಪ: ಪ್ರಕರಣಕ್ಕೆ ಹೈಕೋರ್ಟ್ ತಡೆ - WIFE CASE AGAINST HUSBAND