ETV Bharat / state

ಆಕ್ಷೇಪಾರ್ಹ ಅನಿಮೇಟೆಡ್ ವಿಡಿಯೋ: ನಡ್ಡಾ, ಅಮಿತ್ ಮಾಳವಿಯಾಗೆ ಹೈಕೋರ್ಟ್‌ ರಿಲೀಫ್‌ - High Court - HIGH COURT

ಆಕ್ಷೇಪಾರ್ಹ ಅನಿಮೇಟೆಡ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ.ಪಿ.ನಡ್ಡಾ ಹಾಗೂ ಅಮಿತ್ ಮಾಳವಿಯಾ ವಿರುದ್ದ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಖುದ್ದು ಹಾಜರಾತಿ ವಿನಾಯಿತಿ ನೀಡಿ ಹೈಕೋರ್ಟ್​ ಆದೇಶಿಸಿದೆ.

high-court
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Jun 21, 2024, 6:25 PM IST

ಬೆಂಗಳೂರು: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಕುರಿತು ಬಿಜೆಪಿಯ ಅಧಿಕೃತ ಸಾಮಾಜಿಕ ಖಾತೆಯಲ್ಲಿ ಪ್ರಸಾರ ಮಾಡಲಾಗಿದ್ದ ಆಕ್ಷೇಪಾರ್ಹ ಅನಿಮೇಟೆಡ್ ವಿಡಿಯೋಗೆ ಆಕ್ಷೇಪಿಸಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಖುದ್ದು ಹಾಜರಾತಿ ವಿನಾಯಿತಿ ನೀಡಿ ಹೈಕೋರ್ಟ್ ಆದೇಶಿಸಿದೆ.

ಕಲಬುರ್ಗಿಯ ಸೈಬರ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಬಿಜೆಪಿ ಮುಖಂಡ ಜಗತ್ ಪ್ರಕಾಶ್ ನಡ್ಡಾ ಮತ್ತು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿತು.

ಪ್ರಕರಣವನ್ನು ವಿಸ್ತೃತವಾಗಿ ಪರಿಗಣಿಸಬೇಕಿದೆ. ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದ್ದು, ಎರಡನೇ ಪ್ರತಿವಾದಿಗೆ ತುರ್ತು ನೋಟಿಸ್​ಗೆ ಆದೇಶಿಸಲಾಗಿದೆ. ತನಿಖೆ ಮುಂದುವರಿಸಬಹುದು. ಆದರೆ, ತನಿಖಾಧಿಕಾರಿಯು ಅರ್ಜಿದಾರ ಜೆ.ಪಿ.ನಡ್ಡಾ ಮತ್ತು ಅಮಿತ್ ಮಾಳವಿಯಾ ಖುದ್ದು ಹಾಜರಾತಿಗೆ ಸೂಚಿಸಬಾರದು ಎಂದು ಆದೇಶದಲ್ಲಿ ತಿಳಿಸಿದೆ.

ನಡ್ಡಾ ಪರ ವಕೀಲ ಎಂ.ವಿನೋದ್ ಕುಮಾರ್, ದೂರಿನಲ್ಲಿ ಓಟು ಪಡೆಯಲು ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಪ್ರಜಾಪ್ರತಿನಿಧಿ ಕಾಯಿದೆಯೆ ಸೆಕ್ಷನ್ 125 ಮಾತ್ರ ಅನ್ವಯಿಸುತ್ತದೆ. ಉಳಿದ ಸೆಕ್ಷನ್​ಗಳು ಅನ್ವಯಿಸಲ್ಲ ಎಂದು ಆಕ್ಷೇಪಿಸಿದರು.

ರಾಜ್ಯ ಸರ್ಕಾರದ ಪರ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ.ಎನ್.ಜಗದೀಶ್, ತನಿಖೆ ನಡೆಸಲು ಅನುಮತಿಸಿ. ನಾವು ಅವರ ವಿರುದ್ಧ ದುರುದ್ದೇಶದ ಕ್ರಮ ಕೈಗೊಳ್ಳುವುದಿಲ್ಲ ಎಂದರು.

ಅದಕ್ಕೆ ಪೀಠ, ಅರ್ಜಿದಾರರ ಅನುಪಸ್ಥಿತಿಯಲ್ಲಿ ತನಿಖೆ ಮಾಡುತ್ತೀರಾ? ಅರ್ಜಿದಾರರ ವೈಯಕ್ತಿಕ ಉಪಸ್ಥಿತಿ ಕೇಳುವುದಿಲ್ಲವೇ ಎಂದು ಪ್ರಶ್ನಿಸಿತು. ಇದಕ್ಕೆ ಎಎಸ್​ಪಿಪಿ ಸಹಮತಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ತನಿಖೆಗೆ ಅನುಮತಿ ನೀಡಿತು.

ಪ್ರಕರಣದ ಹಿನ್ನೆಲೆ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಇನ್ಸ್ಟಾಗ್ರಾಂ ಖಾತೆಯಲ್ಲಿ ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ಅವರ ಅನಿಮೇಟೆಡ್ ವಿಡಿಯೋ ಪ್ರಕಟಿಸಲಾಗಿದ್ದು, ಅದರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮೇತರರ ಆಸ್ತಿಯನ್ನು ಕಿತ್ತು, ಕಾಂಗ್ರೆಸ್ ಮೆಚ್ಚಿನ ಮುಸ್ಲಿಮ್ ಸಮುದಾಯಕ್ಕೆ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಅಲ್ಲದೇ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಸಂಪನ್ಮೂಲದಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ನೀಡಬೇಕು ಎಂದಿದ್ದರು ಎಂದು ಆಕ್ಷೇಪಿಸಿ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಪ್ರವೀಣ ಕುಮಾರ್ ಪಾಟೀಲ್ ಅವರು ಕಲಬುರ್ಗಿಯ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದರ ಹಿನ್ನೆಲೆಯಲ್ಲಿ ಜೆ.ಪಿ.ನಡ್ಡಾ ಮತ್ತು ಅಮಿತ್ ಮಾಳವಿಯಾ ವಿರುದ್ಧ ಪ್ರಜಾಪ್ರತಿನಿಧಿ ಕಾಯಿದೆ, ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ ಮತ್ತು ಐಪಿಸಿ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ; ಪತ್ನಿಗೆ ಜಾಮೀನು - High Court

ETV Bharat Logo

Copyright © 2025 Ushodaya Enterprises Pvt. Ltd., All Rights Reserved.