ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ.ಗಳ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ವಹಿಸಬೇಕು ಎಂದು ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಈ ರೀತಿಯಲ್ಲಿ ಬ್ಯಾಂಕ್‌ಗಳ ಮನವಿಯನ್ನು ಪುರಸ್ಕರಿಸಿದಲ್ಲಿ ಮುಂದೆ ಪ್ರತಿಯೊಂದು ಬ್ಯಾಂಕ್ ಕೂಡ ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್ ಮೆಟ್ಟಿಲೇರಲಿದ್ದಾರೆ ಎಂದು ನ್ಯಾಯಪೀಠ ಮೌಖಿಕವಾಗಿ ತಿಳಿಸಿತು.
''ಬ್ಯಾಂಕಿಂಗ್ ನಿಬಂಧನೆಗಳ ಕಾಯ್ದೆ-1949ರ ಸೆಕ್ಷನ್ 35ಎ ಪ್ರಕಾರ ಬ್ಯಾಂಕ್ ವ್ಯವಹಾರಗಳ ಕುರಿತು ಯಾವುದೇ ಬ್ಯಾಂಕ್‌ಗಳಿಗೆ ಕಾಲಕಾಲಕ್ಕೆ ನಿರ್ದೇಶನ ನೀಡುವ ಅಧಿಕಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಂದಿದೆ. ಅದರಂತೆ ಸೆಕ್ಷನ್ ಅನ್ವಯ ಬ್ಯಾಂಕ್ ವ್ಯವಹಾರಗಳಲ್ಲಿ ನಡೆದಿರುವ ವಂಚನೆ ಹಾಗೂ ಅಕ್ರಮದ ಬಗ್ಗೆ ಸಿಬಿಐ ಅಂತಹ ಸ್ವತಂತ್ರ ಸಂಸ್ಥೆಯ ತನಿಖೆಗೆ ವಹಿಸಲು ಕೋರಬಹುದಾಗಿದೆ. ಬ್ಯಾಂಕಿಂಗ್ ವ್ಯವಹಾರದಲ್ಲಿ 50 ಕೋಟಿ ರೂ. ಅಧಿಕ ಅಕ್ರಮ ವ್ಯವಹಾರ ನಡೆದ ಪಕ್ಷದಲ್ಲಿ ಸಿಬಿಐ ಅಂತಹ ಪ್ರಕರಣವನ್ನು ಸಿಬಿಐಗೆ ವಹಿಸಬಹದಾಗಿದೆ. ಹಗರಣದಲ್ಲಿ ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಉನ್ನತ ಶ್ರೇಣಿಯ ಅಧಿಕಾರಿಗಳು ಮತ್ತು ನಿಗಮದ ಅಧ್ಯಕ್ಷರು ಶಾಸಕರು ಭಾಗಿಯಾಗಿದ್ದಾರೆ. ಇದರಿಂದ ರಾಜ್ಯ ಸರ್ಕಾರವು ವಾಲ್ಮೀಕಿ ಪ್ರಕರಣದ ತನಿಖೆಗೆ ರಚಿಸಿರುವ ಎಸ್‌ಐಟಿಯು ನ್ಯಾಯಯುತ ತನಿಖೆ ನಡೆಸುವುದಿಲ್ಲ. ಹಾಗಾಗಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು'' ಎಂದು ಯೂನಿಯನ್ ಬ್ಯಾಂಕ್ ಪರ ವಕೀಲರು ವಾದ ಮಂಡಿಸಿದ್ದರು.
ಆದರೆ, ''ವಕೀಲರು ಸೆಕ್ಷನ್ 35ಎ ಅನ್ನು ವ್ಯಾಖ್ಯಾನ ಮಾಡಿರುವುದನ್ನು ಒಪ್ಪಲಾಗದು. ಸೆಕ್ಷನ್ 35ಎ ಕೇವಲ ಯಾವುದೇ ಬ್ಯಾಂಕಿಂಗ್ ಸಂಸ್ಥೆಗಳ ವ್ಯವಹಾರಗಳನ್ನು ಸಂಪೂರ್ಣವಾಗಿ ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ನಡೆಸುವುದಕ್ಕೆ ಸಂಬಂಧಿಸಿರುತ್ತದೆ. ಯಾವುದೇ ಬ್ಯಾಂಕಿಂಗ್ ಸಂಸ್ಥೆಗೆ ತನಿಖೆಯನ್ನು ಸಿಬಿಐ ಕೈಗೆ ವರ್ಗಾಯಿಸಲು ಅನುಮತಿ ನೀಡಿದರೆ, ಅದು ಸೆಕ್ಷನ್ 35ಎಗೆ ಶಾಸನವು ನೀಡದ ಅಧಿಕಾರವನ್ನು ನೀಡಿದಂತಾಗುತ್ತದೆ. ವಾಲ್ಮೀಕಿ ಹಗರಣದ ಕುರಿತು ದೂರು ದಾಖಲಾದ ಸಂದರ್ಭದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕೆಲ ಅಧಿಕಾರಿಗಳು ಆರೋಪಿಗಳಾಗಿದ್ದರು ಎಂಬ ಕಾರಣಕ್ಕೆ ಹಗರಣವನ್ನು ಸಿಬಿಐಗೆ ವಹಿಸುವಂತೆ ಬ್ಯಾಂಕ್ ಕೋರಿದೆ. ಆ ಮಾತ್ರಕ್ಕೆ ಅಟಾರ್ನಿ ಜನರಲ್ ಅವರು ಹೇಳಿರುವಂತೆ ಸೆಕ್ಷನ್ 35ಎ ವ್ಯಾಖ್ಯಾನವನ್ನು ನ್ಯಾಯಾಲಯವು ಒಪ್ಪಬೇಕಿಲ್ಲ'' ಎಂದು ಆದೇಶದಲ್ಲಿ ಕೋರ್ಟ್ ತಿಳಿಸಿದೆ.
''ಅಲ್ಲದೆ, ವಾಲ್ಮೀಕಿ ನಿಗಮವು ಪರಿಶಿಷ್ಟ ಪಂಡಗದ ಸಮುದಾಯದವರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದಕ್ಕೆ ಹಾದಿ ಮಾಡಿಕೊಡಲು, ಹಣಕಾಸು ನೆರವು ಕಲ್ಪಿಸಲು, ಕೃಷಿ ಕಾರ್ಮಿಕರಿಗೆ ಬೆಂಬಲ ನೀಡಲು ಸ್ಥಾಪಿಸಲಾಗಿದೆ. ಪರಿಶಿಷ್ಟ ಪಂಗಡದವರಿಗ ಸೇರಿದ ಹಣದ ಅತ್ಯಂತ ಕಾಳಜಿ ವಹಿಸಬೇಕಿದೆ. ನಿಗಮಕ್ಕೆ ಸೇರಿದ ಹಣದ ಅವ್ಯವಹಾರ ಮಾಡಿರುವುದು ನ್ಯಾಯಾಲಯದ ಆತ್ಮಸಾಕ್ಷ್ಮಿಗೆ ಆಘಾತ ತರಿಸಿದೆ'' ಎಂದು ಪೀಠ ಹೇಳಿದೆ.
''ಅಲ್ಲದೆ, ಹಗರಣದಲ್ಲಿ ಹಾಲಿ ಶಾಸಕ ಮತ್ತು ಉನ್ನತ ಶ್ರೇಣಿಯ ಅಧಿಕಾರಿಗಳು ನಿಗಮ ಹಣದ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಸಚಿವರು ಮತ್ತು ಅಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಾದಾಗ, ಅಂತಹ ಆರೋಪಗಳು ಬಗ್ಗೆ ತನಿಖೆ ನಡೆಸಬೇಕಾಗುತ್ತದೆ. ಅಂತಹ ತನಿಖೆಯು ರಾಜ್ಯ ಸರ್ಕಾರದ ಅಧೀನ/ನಿಯಂತ್ರಣದಲ್ಲಿರದ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕಾಗುತ್ತದೆ. ಆಗ ಮಾತ್ರ ಅದು ಸಾರ್ವಜನಿಕರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ. ತನಿಖೆ ಅಥವಾ ಅಂತಹ ತನಿಖೆಗೆ ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ. ಆದರೆ, ಬ್ಯಾಂಕಿಂಗ್ ನಿಬಂಧನೆಗಳ ಕಾಯ್ದೆ ಸೆಕ್ಷನ್ 35ಎ ವ್ಯಾಖ್ಯಾನದ ಮೇಲೆ ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ವಹಿಸುವುದಲ್ಲ. ಇತರೆ ವ್ಯಾಖ್ಯಾನವನ್ನು ಮಂಡಿಸಿದ್ದರೆ, ಆಗ ಅರ್ಜಿದಾರರ ಮನವಿಯನ್ನು ನ್ಯಾಯಾಲಯವು ಪರಿಗಣಿಸುತ್ತಿತ್ತು'' ಎಂದು ಪೀಠ ತಿಳಿಸಿದೆ.
''ಜೊತೆಗೆ, ಪ್ರಕರಣದ ಕುರಿತು ದೂರು ದಾಖಲಾದಾಗ ಯನಿಯನ್ ಬ್ಯಾಂಕಿನ ಅಧಿಕಾರಿಗಳು ಸಹ ಆರೋಪಿಗಳಾಗಿದ್ದರು. ಅದಕ್ಕಾಗಿಯೇ ಯೂನಿಯನ್ ಬ್ಯಾಂಕ್ ತನಿಖೆಯನ್ನು ಸಿಬಿಐ ವಹಿಸಲು ಕೋರಿದೆ. ಬ್ಯಾಂಕ್ ಸಿಬಿಐ ತನಿಖೆ ಕೇಳಿದ ಮಾತ್ರಕ್ಕೆ ಸೆಕ್ಷನ್ 35ಎ ವ್ಯಾಖ್ಯಾನದ ಆಧಾರದಲ್ಲಿ ಸಿಬಿಐ ತನಿಖೆಗೆ ವಹಿಸಲು ಸಾಧ್ಯವಿಲ್ಲ. ಇನ್ನೂ ಎಸ್‌ಐಟಿಯು ದೋಷಾರೋಪ ಪಟ್ಟಿಯಿಂದ ಬ್ಯಾಂಕ್ ಅಧಿಕಾರಿಗಳನ್ನು ಕೈಬಿಡಲಾಗಿದೆ. ಆದರೆ, ಕಾನೂನು ಅನುಗುಣವಾದ ಮಾರ್ಗದಲ್ಲಿ ಸಿಬಿಐ ತನಿಖೆಗೆ ಅಭ್ಯಂತರವಿಲ್ಲ. ಆಗ ರಾಜ್ಯದ ತನಿಖಾ ಸಂಸ್ಥೆಯು ಹಗರಣದಿಂದ ಕೈ ಬಿಟ್ಟಿರುವ ವ್ಯಕ್ತಿಗಳನ್ನೂ ಸಿಬಿಐ ತನಿಖೆಗೊಳಪಡಿಸಬಹುದು'' ಎಂದು ನ್ಯಾಯಪೀಠ ಸ್ಪಷ್ಟಪಡಿಸಿ ಅರ್ಜಿ ವಜಾಗೊಳಿಸಿದೆ.
ಈ ಹಿಂದಿನ ವಿಚಾರಣೆಯ ವಿವರ: ಅರ್ಜಿಯ ಸಂಬಂಧ ಈ ಹಿಂದೆ ನಡೆದ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಬಿ. ವಿ. ಆಚಾರ್ಯ, ''ಪ್ರಕರಣ ರಾಜ್ಯ ಸರ್ಕಾರದ ವ್ಯಾಪ್ತಿಗೆ ಸೇರಿರುವುದಾಗಿದ್ದು, ರಾಜ್ಯ ಪೊಲೀಸರು ಈ ಪ್ರಕರಣ ಸಂಬಂಧ ತನಿಖೆ ನಡೆಸುವುದಕ್ಕೆ ಸಂಪೂರ್ಣ ಅಧಿಕಾರವಿದೆ. ರಾಜ್ಯ ಸರ್ಕಾರ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನಿಖೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ಅಧಿಕಾರವಿಲ್ಲ. ಬ್ಯಾಂಕ್‌ನ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯ ಸರ್ಕಾರವನ್ನೇ ಆರೋಪಿಯನ್ನಾಗಿಸಲಾಗುತ್ತಿದೆ'' ಎಂದು ತಿಳಿಸಿದ್ದರು.
''ಇಂತಿಷ್ಟು ಮೊತ್ತದ ಹಗರಣಗಳನ್ನು ಸಿಬಿಐ ತನಿಖೆ ನಡೆಸಬೇಕು ಎಂದು ಹೇಳಲಾಗಿದೆ. ಆದರೆ, ರಾಜ್ಯ ಪೊಲೀಸರಿಗೆ ಕೆಲವು ಸೆಕ್ಷನ್‌ಗಳ ಅಡಿಯಲ್ಲಿ ರಾಜ್ಯ ಸರ್ಕಾರದ ಅಧಿಕಾರವನ್ನು ಹೊರಗಿಡಲಾಗಿದ್ದು, ಸಿಬಿಐಗೆ ನೀಡಲಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಯಾವುದೇ ಆರೋಪ ಕಂಡು ಬಂದಿಲ್ಲ'' ಎಂಬುದಾಗಿ ಅವರು ಪೀಠಕ್ಕೆ ವಿವರಿಸಿದ್ದರು.
ಅಲ್ಲದೆ, ಬ್ಯಾಂಕಿಂಗ್ ನಿಯಂತ್ರಕರು ಹೊರಡಿಸಿರುವ ಸುತ್ತೋಲೆಯ ಪ್ರಕಾರ, ರಾಜ್ಯ ಪೊಲೀಸರನ್ನು ತನಿಖೆ ನಡೆಸುವ ಅಧಿಕಾರದಿಂದ ದೂರವಿಡಲಾಗಿಲ್ಲ. ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ತನಿಖೆ ನಡೆಸುವುದು ಬ್ಯಾಂಕ್ ಮೇಲೆ ದಾಳಿ ಮಾಡಿದಂತಲ್ಲ. ಇದನ್ನು ಕಾನೂನುಬಾಹಿರ ಎಂದು ಹೇಳಲಾಗಲ್ಲ. ಅಷ್ಟಕ್ಕೂ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಬ್ಯಾಂಕ್ ಹೈಕೋರ್ಟ್ ಮೆಟ್ಟಿಲೇರುವುದಕ್ಕೆ ಅಧಿಕಾರವಿಲ್ಲ'' ಎಂದು ಪೀಠಕ್ಕೆ ವಿವರಿಸಿದ್ದರು.
''ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ನಡೆಸುವುದಕ್ಕೆ ಅಧಿಕಾರವಿಲ್ಲ ಎಂದಾದರೆ, ಸಿಬಿಐಗೆ ಅಧಿಕಾರವಿದೆಯೇ ಎಂಬ ಪ್ರಶ್ನೆ ಎದುರಾಗಲಿದೆ. ಸಿಬಿಐ ಅಧಿಕಾರವನ್ನು ದೆಹಲಿ ವಿಶೇಷ ಪೊಲೀಸ್ ಕಾಯ್ದೆಯಡಿ ಪಡೆಯಲಾಗಿದ್ದು, ಈ ಸಂಬಂಧ ಹೊರಡಿಸಿರುವ ಸುತ್ತೋಲೆ ಪ್ರಕರಣವನ್ನು ಸಿಬಿಐ ನಡೆಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಅಧಿಕಾರ ನೀಡಿದಂತೆ ಆಗುವುದಿಲ್ಲ. ಈ ರೀತಿಯ ಪ್ರಕರಣಗಳನ್ನು ಸುಪ್ರೀಂಕೋರ್ಟ್ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ'' ಎಂದು ತಿಳಿಸಿದ್ದರು.
ಈ ವೇಳೆ ನ್ಯಾಯಪೀಠ, ''ಪ್ರಸ್ತುತ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ವಿವಾದ ಎಲ್ಲಿದೆ?'' ಎಂದು ಪ್ರಶ್ನಿಸಿತು. ಇದಕ್ಕೆ ವಕೀಲ ಬಿ.ವಿ. ಆಚಾರ್ಯ, ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ, ''ಯೂನಿಯನ್ ಬ್ಯಾಂಕ್ ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾಗಿದೆ. ಅಲ್ಲದೆ, ಅಟಾರ್ನಿ ಜನರಲ್ ಅವರು ಬ್ಯಾಂಕ್ನ್ನು ಪ್ರತಿನಿಧಿಸಿದ್ದಾರೆ'' ಎಂದು ತಿಳಿಸಿದರು. ಇದಕ್ಕೆ ಪೀಠ, ''ಅಟಾರ್ನಿ ಜನರಲ್ ಅವರು, ಬ್ಯಾಂಕ್ನ್ನು ಪ್ರತಿನಿಧಿಸುತ್ತಿದ್ದಾರೆ, ಪೀಠವನ್ನಲ್ಲ'' ಎಂದು ತಿಳಿಸಿತ್ತು.
ಶೀಘ್ರ ವಿಚಾರಣೆ ನಡೆಸಬೇಕು: ವಾದ ಮುಂದುವರೆಸಿದ ಆಚಾರ್ಯ, ''ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಪರಿಗಣಿಸಬೇಕಾಗಿದೆ. ಸಿಬಿಐ ವಿಶೇಷ ತನಿಖಾ ಸಂಸ್ಥೆಯಾಗಿದ್ದು, ಅದೇ ಸಂಸ್ಥೆಯಿಂದ ತನಿಖೆ ನಡೆಯಬೇಕು ಎಂಬುದು ಬ್ಯಾಂಕ್ ವಾದವಾಗಿದೆ. ಆದರೆ, ಸಿಬಿಐಗೆ ವಹಿಸಿರುವ ಪ್ರಕರಣಗಳ ವಿಚಾರಣೆ ಎರಡು-ಮೂರು ವರ್ಷಗಳ ಕಾಲ ವಿಳಂಬವಾಗುತ್ತಿದೆ. ಬ್ಯಾಂಕ್ ಅಧಿಕಾರಿಗಳಿಗೆ ಶೀಘ್ರ ವಿಚಾರಣೆ ನಡೆಸಬೇಕು ಎಂಬುದು ಮನವಿಯಾಗಿದೆ. ಈ ಸಂಬಂಧ ನಾವು ಸಲ್ಲಿಸಿರುವ ಆಕ್ಷೇಪಣೆಯನ್ನು ಪರಿಗಣಿಸಬೇಕಾಗಿದೆ. ಅಲ್ಲದೆ, ಪ್ರಕರಣ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ವಿವಾದವಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಈ ಸಂಬಂಧ ಪ್ರಕರಣಗಳ ವಿಚಾರಣೆ ನಡೆಸುವುದಕ್ಕೆ ಅಧಿಕಾರವಿಲ್ಲ. ಹೀಗಾಗಿ, ಸುಪ್ರೀಂಕೋರ್ಟ್ ವಿಚಾರಣೆ ನಡೆಸಬೇಕಾಗಿದೆ'' ಎಂದು ಕೋರಿದ್ದರು.
ನಿಗಮದ ಪರ ವಕೀಲರ ವಾದ: ನಿಗಮದ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ್, ''ಸಿಬಿಐ ಕಾಯ್ದೆ ಮೂಲಕ ರಚನೆ ಮಾಡಿ, ಪೊಲೀಸ್ ಠಾಣೆ ಅಧಿಕಾರ ನೀಡಿದ್ದರೂ, ಅಧಿಸೂಚನೆ ಹೊರಡಿಸಿದ ಪ್ರಕರಣಗಳನ್ನು ಮಾತ್ರ ಸಿಬಿಐ ತನಿಖೆ ನಡೆಸುವುದಕ್ಕೆ ಅವಕಾಶವಿದೆ. ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಿಲ್ಲ. ಸಿಬಿಐ ಅನ್ನು ಮಾತ್ರ ಪ್ರತಿವಾದಿಯನ್ನಾಗಿಸಿದ್ದು, ಸಿಬಿಐ ಎಂದರೆ ಕೇಂದ್ರ ಸರ್ಕಾರವೇ ಆಗಿದೆ. ಹೀಗಿರುವಾಗ ಬ್ಯಾಂಕ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಬೇಕು ಎಂದು ಕೋರುವುದಕ್ಕೆ ಅವಕಾಶವಿಲ್ಲ'' ಎಂದಿದ್ದರು.
''ಅಲ್ಲದೆ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಡಿಯಲ್ಲಿ ಆರ್‌ಬಿಐ ಕೇಂದ್ರ ಪಟ್ಟಿಯಲ್ಲಿ ಬರಲಿದೆ. ಆರ್‌ಬಿಐ ಹೊರಡಿಸಿರುವ ನಿರ್ದೇಶನವು ಕೇಂದ್ರ ಮತ್ತು ರಾಜ್ಯ ಸರ್ಕಾರ ಬದ್ಧರಾಗಿರಬೇಕಾಗಿಲ್ಲ. ಹೀಗಾಗಿ, ಪ್ರಕರಣವನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಬೇಕಾಗಿದೆ ಎಂದು ಪೀಠಕ್ಕೆ ವಿವರಿಸಿದ್ದರು.
ಬ್ಯಾಂಕ್ ಪರ ವಕೀಲರ ವಾದವೇನು? ಅರ್ಜಿದಾರ ಬ್ಯಾಂಕ್‌ನ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಆರ್. ವೆಂಕಟರಮಣಿ, 'ಪ್ರಕರಣದಲ್ಲಿ ಕೇಂದ್ರ ಸರ್ಕಾರ ನೇರ ಮತ್ತು ಪರೋಕ್ಷವಾಗಿ ಪಕ್ಷಗಾರರಾಗುವುದಿಲ್ಲ. ಒಮ್ಮೆ ಬ್ಯಾಂಕಿನಿಂದ ಸಿಬಿಐಗೆ ದೂರು ಸಲ್ಲಿಕೆಯಾಗಿದ್ದು, ಪ್ರಕರಣ ದಾಖಲಿಸಿದ ಬಳಿಕ ಸಿಬಿಐ ತನಿಖೆ ಮುಂದುವರೆಸಬಹುದಾಗಿದೆ. ಬ್ಯಾಂಕುಗಳ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವುದಕ್ಕೆ ಸಿಬಿಐಗೆ ಅಧಿಕಾರವಿದೆ'' ಎಂದು ವಾದಿಸಿದ್ದರು. ವಾದ-ಪ್ರತಿವಾದ ಆಲಿಸಿದ ಪೀಠ ತೀರ್ಪು ಕಾಯ್ದಿರಿಸಿತ್ತು.
ಇದನ್ನೂ ಓದಿ: ಬೇಲೆಕೇರಿ ಅದಿರು ನಾಪತ್ತೆ ಕೇಸ್: ಶಿಕ್ಷೆ ರದ್ದು ಕೋರಿದ ಮಧ್ಯಂತರ ಮನವಿ ಕುರಿತು ದಿನಾಂತ್ಯಕ್ಕೆ ಹೈಕೋರ್ಟ್ ಆದೇಶ