ETV Bharat / state

ಮೈಸೂರು ಅನಂತಸ್ವಾಮಿ ಸಂಯೋಜನೆಯಲ್ಲಿ ನಾಡಗೀತೆ ಹಾಡಬೇಕೆಂಬ ಸರ್ಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ - Naada Geete - NAADA GEETE

ನಾಡಗೀತೆ ಹಾಡುವ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

high-court
ಮೈಸೂರು ಅನಂತಸ್ವಾಮಿ ಸಂಯೋಜನೆಯಲ್ಲಿ ನಾಡಗೀತೆ ಹಾಡಬೇಕೆಂಬ ಸರ್ಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ
author img

By ETV Bharat Karnataka Team

Published : Apr 24, 2024, 6:37 PM IST

Updated : Apr 24, 2024, 7:28 PM IST

ಬೆಂಗಳೂರು: ಖ್ಯಾತ ಸಂಗೀತ ಸಂಯೋಜಕ ದಿ.ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ರಾಜ್ಯ ಸರ್ಕಾರ 2023ರ ಸೆಪ್ಟೆಂಬರ್​ 25ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಅರ್ಜಿದಾರರು ಮತ್ತು ಸರ್ಕಾರದ ಪರ ವಕೀಲರ ವಾದ-ಪ್ರತಿವಾದ ಆಲಿಸಿ, ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಪೀಠವು ಬುಧವಾರ ಆದೇಶ ಪ್ರಕಟಿಸಿತು. ವಿಸ್ತೃತ ಆದೇಶದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಅದೇಶ ಪ್ರಕಟಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳು, ನಾಡಗೀತೆ ಯಾವ ರಾಗದಲ್ಲಿ ಹಾಡಬೇಕು ಎಂಬುದು ಮುಖ್ಯವಲ್ಲ. ಎಲ್ಲ ಸಂಗೀತವೂ ಅತ್ಯುತ್ತಮವಾಗಿದೆ. ಯಾವ ಸಂಗೀತ ಸಂಯೋಜನೆ ಕಡಿಮೆ, ಯಾವುದು ಹೆಚ್ಚು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಎಲ್ಲವೂ ಅತ್ಯುತ್ತಮ ಸಂಗೀತ ಸಂಯೋಜನೆಗಳಾಗಿವೆ. ಆದ್ದರಿಂದ ಇಂತಹ ರಾಗ ಸಂಯೋಜನೆಯಲ್ಲಿಯೇ ಹಾಡಬೇಕು ಎಂದು ಹೇಳಲಾಗುವುದಿಲ್ಲ ಎಂದರು.

ಆದರೆ, ಶಾಲಾ ಮಕ್ಕಳ ವಿಚಾರದಲ್ಲಿ ಒಂದೇ ರೀತಿಯಲ್ಲಿ ಇದ್ದರೆ ಉತ್ತಮವಾಗಿರಲಿದೆ. ಏಕೆಂದರೆ ಒಂದೊಂದು ಶಾಲೆಯಲ್ಲಿ ಒಂದೊಂದು ರೀತಿಯ ರಾಗ ಸಂಯೋಜನೆ ಕಲಿಸಿದಲ್ಲಿ ಎಲ್ಲಾ ಮಕ್ಕಳೂ ಒಂದೇ ಕಡೆ ಸೇರಿದಲ್ಲಿ ಗೊಂದಲಕ್ಕೆ ಕಾರಣವಾಗಲಿದೆ. ಅಲ್ಲದೆ, ಕರ್ನಾಟಕ ಶಿಕ್ಷಣದ ಕಾಯಿದೆಯಡಿಯಲ್ಲಿ ನಾಡಗೀತೆಯನ್ನು ಇಂತಹದ್ದೇ ಧಾಟಿಯಲ್ಲಿ ಹಾಡುವಂತೆ ಆದೇಶ ನೀಡಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಅಧಿಕಾರವನ್ನು ಬಳಸಿ ಮೈಸೂರು ಅನಂತಸ್ವಾಮಿ ಅವರ ರಾಗ ಸಂಯೋಜನೆಯಂತೆ ನಾಡಗೀತೆ ಹಾಡಲು ಆದೇಶ ನೀಡಿದೆ. ಈ ನಿಟ್ಟಿನಲ್ಲಿ ಸರ್ಕಾರದ ಆದೇಶದಲ್ಲಿ‌ ಯಾವುದೇ ದೋಷ ಕಂಡುಬರುತ್ತಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಜೊತೆಗೆ, ಈ ಪ್ರಕರಣದ ವಿಚಾರವಾಗಿ ವಿವಿಧ ದೇಶಗಳು ಮತ್ತು ರಾಜ್ಯಗಳ ನಾಡಗೀತೆ ಹಾಗೂ ದೇಶ ರಾಷ್ಟ್ರಗೀತೆಯ ಕುರಿತು ಅಧ್ಯಯನ ಮಾಡಿದ್ದೇನೆ. ಒಂದೊಂದು ಭಾಗದಲ್ಲಿ ಒಂದೊಂದು ತರನಾಗಿ ರಾಷ್ಟ್ರಗೀತೆ ಹೇಳುವ ಕಾನೂನಿದೆ. ಜಪಾನ್ ದೇಶದಲ್ಲಿ ಬಾಯಿಮುಚ್ಚಿ ರಾಷ್ಟ್ರಗೀತೆ ಹೇಳುವಂತೆ ಕಾನೂನು ರೂಪಿಸಲಾಗಿದೆ. 1986ರಲ್ಲಿ ಬಿಜೋ ಇಮ್ಯಾನುಯೆಲ್ ಮತ್ತು ಓರ್ಸ್ ವಿರುದ್ಧ ಕೇರಳ ರಾಜ್ಯದ ಪ್ರಕರಣದಲ್ಲಿ​ ರಾಷ್ಟ್ರಗೀತೆ ಹಾಡಬೇಕೆಂದಿಲ್ಲ, ಎದ್ದು ನಿಂತು ಗೌರವ ಸೂಚಿಸಿದರೆ ಸಾಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಇದರ ಅನುಸಾರ ಗಾಯನದ ಹಕ್ಕು ವಾಕ್ ​ಸ್ವಾತಂತ್ರ್ಯ, ಮೌನವನ್ನು ಒಳಗೊಂಡಿದೆ ಎಂದರು.

ಅಲ್ಲದೆ, ಬಯಸಿದಲ್ಲಿ, ಬಯಸಿದಂತೆ ನಾಡಗೀತೆ ಹೇಳುವ ಅಧಿಕಾರವಿದೆ. ಬೇಕಿದ್ದರೆ ಮರದ ರಂಬೆಯ ಮೇಲೆ ಕೂತು ಹೇಳಿ. ಆದರೆ, ರಂಬೆ ಗಟ್ಟಿಯಾಗಿದೆಯೇ ಎಂದು ಪರಿಶೀಲಿಸಿ ಎಂದು ಲಘು ಹಾಸ್ಯ ಚಟಾಕಿ ಹಾರಿಸಿದ ನ್ಯಾಯಪೀಠ, ನೀವು ದಾರಿಯಲ್ಲಿ ಹೋಗುವಾಗ ಎಲ್ಲಿ ಬೇಕಾದರೂ ನಿಮಗೆ ಇಷ್ಟದ ರಾಗದಲ್ಲಿ ಹಾಡಬಹುದು. ಆದರೆ, ಶಾಲೆಯ ಮಕ್ಕಳಿಗೆ ಇದೇ ರೀತಿ ಹಾಡುವಂತೆ ಹೇಳಿರುವುದರಲ್ಲಿ ತಪ್ಪೇನಿಲ್ಲ. ಇದರಿಂದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎನ್ನಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿದೆ.

ಮುಂದುವರೆದು, ಕ್ರೀಡಾಕೂಟ, ಪಂದ್ಯಾಟದ ವೇಳೆ ಹತ್ತಾರು ಶಾಲೆಯ ಮಕ್ಕಳು ಒಟ್ಟಾದಾಗ ಒಂದೊಂದು ರಾಗದಲ್ಲಿ ಹಾಡಿದಾಗ ಅದು ಅಭಾಸಕ್ಕೆ ದಾರಿ ಮಾಡಿಕೊಡಬಹುದು. ಸಂಗೀತ ಎಂದರೆ ಸಂಪೂರ್ಣ, ಕಾವ್ಯಗಳು ದೇವರಿಗೆ ಬಹಳ ಹತ್ತಿರವಾದದ್ದು. ಹಾಗಾಗಿ, ಅದನ್ನು ಸರಿಯಾದ ರೀತಿಯಲ್ಲಿ ಹಾಡಬೇಕಾಗಿರುವುದು ಮುಖ್ಯ. ನಾಡಗೀತೆಯನ್ನು 1931ರಲ್ಲಿ ರಚನೆ ಮಾಡಲಾಯಿತು. ಸರ್ಕಾರಕ್ಕೆ ನಾಡಗೀತೆಯನ್ನು ಇದೇ ರೀತಿಯಲ್ಲಿ ಹೇಳಲು ಆದೇಶಿಸುವ ಅಧಿಕಾರವಿಲ್ಲ ಎಂದು ಅರ್ಜಿದಾರರು ಹೇಳುತ್ತಾರೆ. ಆದರೆ, ಪೀಠ ಇದನ್ನು ಒಪ್ಪುವುದಿಲ್ಲ. 1983ರ ಶಿಕ್ಷಣ ಕಾಯ್ದೆಯಡಿ ಅವರಿಗೆ ಅಧಿಕಾರವಿದೆ. ಹಾಗಾಗಿ, ಸರ್ಕಾರ ಯೋಚನೆ ಮಾಡದೆ, ಈ ರೀತಿ ಆದೇಶ ಮಾಡಿದೆ ಎಂದು ಹೇಳಲಾಗದು ಎಂದು ನ್ಯಾಯಮೂರ್ತಿಗಳು ಹೇಳಿದರು.

ಅರ್ಜಿದಾರರದ್ದು ಸದ್ದುದ್ದೇಶ: ಅರ್ಜಿದಾರ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಉತ್ತಮ ಗಾಯಕ, ಅವರು ಯಾವುದೇ ದುರ್ಭಾವನೆಯಿಂದ ಇಲ್ಲಿಗೆ ಬಂದಿಲ್ಲ. ಕಳೆದ ಬಾರಿ ಅವರು ಕಲಾಪದ ವೇಳೆ ನಾಡಗೀತೆ ಹಾಡಿದ್ದು ಪ್ರಶಂಸನಾರ್ಹ. ಸುದೀರ್ಘ ವಿಚಾರಣೆಯ ಯಾವುದೇ ಹಂತದಲ್ಲೂ ಅವರು ನಾಡಗೀತೆಗೆ ಅಗೌರವ ತೋರುವ ರೀತಿಯಲ್ಲಿ ನಡೆದುಕೊಂಡಿಲ್ಲ ಎಂದರು.

ಇಬ್ಬರದ್ದೂ ಮೇರು ವ್ಯಕ್ತಿತ್ವ: ನಾನು ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯನ್ನು ಕೇಳಿದ್ದೆ, ಜೊತೆಗೆ ಅಶ್ವಥ ಅವರ ಗಾಯನವನ್ನೂ ಕೇಳಿದ್ದೆ. ಯಾರಿಗೆ ಹೆಚ್ಚಿಗೆ ಅಂಕ ಕೊಡಬೇಕು ಎನ್ನುವುದು ಸಾಧ್ಯವೇ ಇಲ್ಲ. ಅವರನ್ನು ತೂಕ ಮಾಡಲಿಕ್ಕೆ ಹೋದರೆ ತಕ್ಕಡಿಯೇ ತುಂಡಾಗುತ್ತದೆಯೇ ಏನೋ.. ಅಂತಹ ಮೇರು ವ್ಯಕ್ತಿತ್ವದದವರಿ ಇವರು. ಅಂತೆಯೇ ಕಿಕ್ಕೇರಿ ಕೃಷ್ಣಮೂರ್ತಿ ಕೂಡ ಎಂದು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಗೌರವ ವ್ಯಕ್ತಪಡಿಸಿದರು.

ಪ್ರಕರಣ ಸಂಬಂಧ ಈ ಹಿಂದೆ ನಡೆದ ವಿಚಾರಣೆ ವೇಳೆ, ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಎಸ್‌.ಎ.ಅಹ್ಮದ್‌, ''ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಿರ್ದಿಷ್ಟ ಧಾಟಿಯಲ್ಲಿ ನಾಡಗೀತೆ ಹಾಡುವುದನ್ನು ನಿಗದಿಪಡಿಸಲು ಸಂವಿಧಾನದ ಪರಿಚ್ಛೇದ 162 ಅಡಿಯಲ್ಲಿ ರಾಜ್ಯ ಸರ್ಕಾರಕ್ಕೆ ಅಧಿಕಾರ ಹಾಗೂ ಹಕ್ಕು ಇದೆ. ಅದೇ ರೀತಿ ಕರ್ನಾಟಕ ಶಿಕ್ಷಣ ಕಾಯ್ದೆಯ ಸೆಕ್ಷನ್‌ 133ರ ಅಡಿಯಲ್ಲಿ ಇಂತಹದೊಂದು ಆದೇಶ ಮಾಡಲು ಸರ್ಕಾರ ಅಧಿಕಾರ ಹೊಂದಿದೆ. ಅದರಂತೆ ನಾಡಗೀತೆ ವಿಚಾರದಲ್ಲಿ ಸರ್ಕಾರ ಹೊರಡಿಸಿರುವ ಆದೇಶ ಕಾನೂನುಬದ್ಧವಾಗಿದ್ದು, ಅರ್ಜಿ ವಜಾಗೊಳಿಸಬೇಕು'' ಎಂದು ಕೋರಿದ್ದರು.

ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಹಾಜರಾಗಿ, ''ನಾಡಗೀತೆ ವಿಚಾರದಲ್ಲಿ ಸರ್ಕಾರ ಕಾರ್ಯಕಾರಿ ಆದೇಶ ಹೊರಡಿಸಿದೆ. ಇದು ಸಂವಿಧಾನದ ಪರಿಚ್ಛೇದ 19ರ ಅಡಿಯಲ್ಲಿ ಪ್ರಜೆಗಳಿಗೆ ದೊರೆತಿರುವ ಮೂಲಭೂತ ಹಕ್ಕುಗಳಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ. ವಾಕ್‌ ಮತ್ತು ಅಭಿವ್ಯಕ್ತಿ ರಾಜ್ಯ ಅಥವಾ ರಾಷ್ಟ್ರಗೀತೆಯನ್ನು ತನ್ನ ಇಚ್ಛೆಯ ರಾಗ/ಧಾಟಿಯಲ್ಲಿ ಹಾಡುವ ಹಕ್ಕು ಸೇರಿದೆ. ಅದನ್ನು ಸರ್ಕಾರ ಮೊಟಕುಗೊಳಿಸಿದ್ದು, ಅದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಅಗತ್ಯವಿದ್ದರೆ ಪ್ರತ್ಯೇಕ ಶಾಸನ ರೂಪಿಸಿ, ಅದರಡಿ ಇಂತಹ ಆದೇಶ ಮಾಡಬಹುದು. ಶಾಸನದ ಬೆಂಬಲವಿಲ್ಲದೇ ಮೂಲಭೂತ ಹಕ್ಕ ಮೊಟಕುಗೊಳಿಸಲು ಅಥವಾ ನಿರ್ಬಂಧಿಸಲು ಕಾರ್ಯಕಾರಿ ಅಧಿಕಾರವನ್ನು ಬಳಕೆ ಮಾಡಲಾಗದು. ಆದ್ದರಿಂದ ಸರ್ಕಾರದ ಆದೇಶ ರದ್ದುಪಡಿಸಬೇಕು'' ಎಂದು ಕೋರಿದ್ದರು.

ಇದನ್ನೂ ಓದಿ: ಮತದಾನ ಮಾಡಿದ ಗ್ರಾಹಕರಿಗೆ ಉಚಿತ ಆಹಾರ ಒದಗಿಸಲು ಹೋಟೆಲ್‌ಗಳಿಗೆ ಹೈಕೋರ್ಟ್ ಸಮ್ಮತಿ - Free Food For Voters

Last Updated : Apr 24, 2024, 7:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.