ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಡಾ. ಕೆ.ಎಂ. ಮಹದೇವನ್ ಅವರ ಹುದ್ದೆಗೆ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಬಸಪ್ಪ ಅವರನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಡಾ. ಕೆ.ಎಂ ಮಹದೇವನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡಸಿದ ನ್ಯಾಯಮೂರ್ತಿ ಬಿ. ಎಂ. ಶ್ಯಾಮಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಬಸಪ್ಪ ಅವರು ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಆಗಿ ನೇಮಕಗೊಳ್ಳಲು ಅರ್ಹತೆಯನ್ನು ಹೊಂದಿಲ್ಲ ಎಂಬುದಾಗಿ ವಿವಿಯ ಕುಲಪತಿ ನೀಡಿರುವ ಅಭಿಪ್ರಾಯವನ್ನು ಪರಿಗಣಿಸಿ ಈ ಆದೇಶ ಮಾಡಿರುವುದಾಗಿ ಪೀಠ ತಿಳಿಸಿದೆ.
ಸರ್ಕಾರದ ಸಾಮಾನ್ಯ ನೌಕರರ ಮಾದರಿಯಲ್ಲಿ ವಿಶ್ವವಿದ್ಯಾಲಯದ ಪದಾಧಿಕಾರಿಗಳನ್ನು ನೇಮಕ ಮಾಡುವುದು ಮತ್ತು ಹುದ್ದೆಯಿಂದ ತೆಗೆದುಹಾಕುವುದಕ್ಕೆ ಅವಕಾಶವಿಲ್ಲ. ವಿಶ್ವವಿದ್ಯಾಲಯದ ಕಾರ್ಯನಿರ್ವಹಣಾಧಿಕಾರಿಗಳನ್ನು ಹಠಾತ್ ಹಾಗೂ ಅನೌಪಚಾರಿಕವಾಗಿ ತೆಗೆದು ಹಾಕಿದಾಗ ನ್ಯಾಯಾಲಯ ಮಧ್ಯಪ್ರವೇಶಕ್ಕೆ ಅವಕಾಶವಿರಲಿದೆ ಎಂದು ಪೀಠ ಹೇಳಿದೆ.
ನೇಮಕಾತಿಯು ಸಾರ್ವಜನಿಕ ಅಥವಾ ಆಡಳಿತಾತ್ಮಕ ಹಿತಾಸಕ್ತಿಗಳನ್ನು ಪೂರೈಸಿಲ್ಲ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೂ ಮುನ್ನ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಬಸಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ಮೈಸೂರು ವಿಶ್ವವಿದ್ಯಾಲಯದ ಮರು ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಆಗಿ 2023ರ ಮಾರ್ಚ್ 3ರಂದು ನೇಮಕವಾಗಿದ್ದರು. ಈ ನಡುವೆ 2024ರ ಮಾರ್ಚ್ 15ರಂದು ಅದೇ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಬಸಪ್ಪ ಎಂಬುವರನ್ನು ಅದೇ ಹುದ್ದೆಗೆ ನೇಮಕ ಮಾಡಿ ಸರ್ಕಾರ ಆದೇಶಿಸಿತ್ತು. ಅದರಂತೆ ಅಧಿಕಾರ ಸ್ವೀಕರಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರ ಡಾ. ಕೆ.ಎಂ.ಮಹದೇವನ್ ಅವರು ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಡಾ. ಬಸಪ್ಪ ಮೌಲ್ಯಮಾಪನ ರಿಜಿಸ್ಟ್ರಾರ್ ಆಗಿ ನೇಮಕವಾಗಲು ಅರ್ಹತೆಯಿಲ್ಲ ಎಂಬ ಕಾರಣವನ್ನು ನೀಡಿ ಮಧ್ಯಂತರ ಆದೇಶವನ್ನು ನೀಡಿ ಆದೇಶಿಸಿತ್ತು. ಇದೀಗ ಬಸಪ್ಪ ನೇಮಕವನ್ನು ರದ್ದುಪಡಿಸಿ ನ್ಯಾಯಾಲಯ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಡಾ. ಬಸಪ್ಪ ಅವರನ್ನು ಮಹದೇವನ್ ಅವರ ಸ್ಥಾನಕ್ಕೆ ನಿಯೋಜನೆ ಮಾಡಿ ಆದೇಶಿಸಿದೆ. ಇದು ಕಾನೂನು ಬಾಹಿರ ಎಂಬುದಾಗಿ ನ್ಯಾಯಪೀಠಕ್ಕೆ ವಿವರಿಸಿದ್ದರು.