ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘ ಪದೇ ಪದೆ ಅವಿಶ್ವಾಸ ನಿರ್ಣಯವನ್ನು ಮಂಡಿಸುವುದನ್ನು ತಡೆಯಲು ಕಾರ್ಯಕಾರಿ ಸಮಿತಿ ಆಯ್ಕೆಯಾದ ಬಳಿಕ ಒಂದು ವರ್ಷದ ಕಾಲ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಅವಕಾಶವಿಲ್ಲದಂತೆ ಬೈಲಾಗೆ ತಿದ್ದುಪಡಿ ತರುವುದು ಉತ್ತಮ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಹಾಲಿ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾದರೆ ಸಂಘದ ಕಾರ್ಯದರ್ಶಿಗೆ ನೋಟಿಸ್ ನೀಡಿದ ಬಳಿಕ ಆ ಪ್ರಕ್ರಿಯೆಯನ್ನು ಹೊಸದಾಗಿ ಕೈಗೊಳ್ಳಬೇಕು ಎಂದು ಆದೇಶಿಸಿದೆ.
ಸಂಘದಲ್ಲಿನ ಎರಡೂ ಬಣಗಳು ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಸಿವಿಲ್ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಕೆ.ವಿ.ರೇಣುಕಾಪ್ರಸಾದ್ ಮತ್ತಿತರರು ಸಲ್ಲಿಸಿದ್ದ ಹಲವು ಅರ್ಜಿಗಳನ್ನು ಆಲಿಸಿದ ನ್ಯಾ.ಆರ್.ದೇವದಾಸ್ ಅವರಿದ್ದ ಏಕಸದಸ್ಯಪೀಠ ಮಂಗಳವಾರ ಈ ಆದೇಶ ನೀಡಿದೆ.
ಅಲ್ಲದೆ, ಅರ್ಜಿದಾರರು ಅಥವಾ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಲಿ ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಸ್ವತಂತ್ರರು. ಆದರೆ ಅವರು ಹಾಗೆ ಮಂಡಿಸುವ ಮುನ್ನ ಮೊದಲು ಸಂಘದ ಕಾರ್ಯದರ್ಶಿಗೆ ನೋಟಿಸ್ ನೀಡಬೇಕು, ಆ ಅವಿಶ್ವಾಸ ನಿರ್ಣಯದ ಪ್ರಸ್ತಾವವನ್ನು ಸರ್ವ ಸದಸ್ಯರ ಸಭೆಯ ಮುಂದಿಟ್ಟು ಸೂಕ್ತ ನಿರ್ಣಯ ಕೈಗೊಳ್ಳಬೇಕು. ಸಭೆಯಲ್ಲಿ ಚರ್ಚೆ ಹಾಗೂ ಮತದಾನದ ಹಕ್ಕು ಸಂಘದ ಸದಸ್ಯರಿಗೆ ಮಾತ್ರ ಲಭ್ಯವಿರುತ್ತದೆ ಎಂದು ನ್ಯಾಯಪೀಠ ಆದೇಶಿಸಿದೆ.
ಅಲ್ಲದೆ, ಈ ರೀತಿ ಪದೇ ಪದೇ ಪದಾಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡನೆಯಾಗುವುದನ್ನು ತಪ್ಪಿಸಲು ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ನಂತರ ಒಂದು ವರ್ಷಗಳ ಕಾಲ ಅವಿಶ್ವಾಸ ನಿರ್ಣಯ ಮಂಡನೆ ಮಾಡದಂತೆ ಸಂಘದ ನಿಯಮಗಳಿಗೆ ತಿದ್ದುಪಡಿ ತರುವುದು ಸೂಕ್ತ ಎಂದೂ ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ: 2024ರ ಜು.4ರಂದು ಬಾಲಕೃಷ್ಣ ನೇತೃತ್ವದ ತಂಡ ಒಕ್ಕಲಿಗರ ಸಂಘಕ್ಕೆ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದರು. ಆದರೆ ಕೆಲವು ಸದಸ್ಯರು ಕೇವಲ 10 ದಿನಕ್ಕೆ ಅಂದರೆ 2024ರ ಜು.18ಕ್ಕೆ ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್ ನೀಡಿದ್ದರು. ಆದರೆ ಕಾರ್ಯಕಾರಿ ಸಮಿತಿ ಆ ನೋಟಿಸ್ ಅನ್ನು ತಿರಸ್ಕರಿಸಿತ್ತು.
ಆ ನಂತರ ಜು.30ಕ್ಕೆ ಸಭೆ ನಡೆಸಿದ ಕೆಲವು ಸದಸ್ಯರು ಆ.9ಕ್ಕೆ ತಾವೇ ಅವಿಶ್ವಾಸ ನಿರ್ಣಯದ ಕುರಿತು ಚರ್ಚೆಗೆ ನೋಟಿಸ್ ನೀಡಿದ್ದರು. ಆಗ ಸಂಘದ ಹಾಲಿ ಪದಾಧಿಕಾರಿಗಳು ಸಿವಿಲ್ ಕೋರ್ಟ್ ಮೊರೆ ಹೋಗಿದ್ದರು. ಸಿವಿಲ್ ನ್ಯಾಯಾಲಯ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಉಭಯ ತಂಡಗಳಿಗೆ ನಿರ್ದೇಶನ ನೀಡಿತ್ತು. ಆ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ದೇಶದ ಸಮಗ್ರತೆಗೆ ಧಕ್ಕೆಯಾದರೆ ವ್ಯಕ್ತಿ ಸ್ವಾತಂತ್ರಕ್ಕೆ ಮನ್ನಣೆ ನೀಡಲಾಗದು: ಹೈಕೋರ್ಟ್ - High Court