ಬೆಳಗಾವಿ: ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಹೈಕಮಾಂಡ್ ನನಗೆ ಸೂಚಿಸಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನಗೆ ಸ್ಪರ್ಧೆ ಮಾಡುವಂತೆ ಹೈಕಮಾಂಡ್‌ನ ಯಾವ ನಾಯಕರೂ ಸೂಚಿಸಿಲ್ಲ ರಾಜ್ಯದಲ್ಲಿ 28 ಕ್ಷೇತ್ರಗಳ ಪೈಕಿ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ. ಕೆಲ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ದುರ್ಬಲ ಇರುವುದು ನಿಜ. 28ರ ಪೈಕಿ 20ರಲ್ಲಿ ನಾವು ಬಲಿಷ್ಠರಿದ್ದು, 8 ಕ್ಷೇತ್ರಗಳಲ್ಲಿ ದುರ್ಬಲ ಇದ್ದೇವೆ. ತಮ್ಮ ಅಭ್ಯರ್ಥಿ ಗೆಲುವಿಗೆ ಎಲ್ಲ ಸಚಿವರೂ ಪ್ರಯತ್ನ ಮಾಡುತ್ತಾರೆ. ನಮ್ಮ ಸಚಿವರ ಪ್ರಯತ್ನದ ನಂತರವೂ ಕೆಲವೊಮ್ಮೆ ಫಲ ಸಿಗಲ್ಲ ಎಂದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸಚಿವರ ತಲೆದಂಡವಾಗುತ್ತದೆ ಎಂಬುದು ಶುದ್ಧ ಸುಳ್ಳು. ಈ ರೀತಿ ಹೈಕಮಾಂಡ್ ಯಾರಿಗೂ ಸೂಚಿಸಿಲ್ಲ, ಇದು ಕೇವಲ ಊಹಾಪೋಹ ಅಷ್ಟೇ. ಆದರೆ, ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಪ್ರಯತ್ನ ಮಾಡಬೇಕು, ಮಾಡ್ತಾರೆ. ಲೋಕಸಭೆ ಚುನಾವಣೆ ಸಂಬಂಧ ಈಗಾಗಲೇ ದೆಹಲಿ ಹಾಗೂ ಬೆಂಗಳೂರಲ್ಲಿ ಸಭೆ ಆಗಿದೆ. ಚಿಕ್ಕೋಡಿ ಹಾಗೂ ಬೆಳಗಾವಿ ಕ್ಷೇತ್ರದಿಂದ ಅನೇಕರು ಅರ್ಜಿ ಸಲ್ಲಿಸಿದ್ದಾರೆ. ಕೊನೆ ಕ್ಷಣದಲ್ಲಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತೆ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯಿಂದ ಲಕ್ಷ್ಮೀ ಹೆಬ್ಬಾಳ್ಕರ್, ಚಿಕ್ಕೋಡಿಯಿಂದ ತಾವು ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ನಮಗೆ ಚಿಕ್ಕೋಡಿ ದೂರವಾಗುತ್ತದೆ ಎಂದು ನಕ್ಕರು. ಇನ್ನು ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಎಐಸಿಸಿ, ಕೆಪಿಸಿಸಿ, ಸಿಎಂ ಕಚೇರಿಯಿಂದ ಸರ್ವೇ ನಡೆಯುತ್ತಿದೆ. ನಿಗಮ ಮಂಡಳಿ ಆಯ್ಕೆ ಸಂಬಂಧ ಪಟ್ಟಿ ಈಗಾಗಲೇ ಸಿದ್ಧಗೊಂಡಿದೆ. ಯಾವಾಗ ಬೇಕಾದರೂ ಬಿಡುಗಡೆ ಆಗಬಹುದು ಎಂದರು.
ರಾಮಮಂದಿರ ನಿರ್ಮಾಣದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಮಮಂದಿರ ವಿಚಾರವನ್ನು ಬಿಜೆಪಿ ಮೊದಲಿನಿಂದಲೂ ಚುನಾವಣೆ ಅಸ್ತ್ರವಾಗಿ ಮಾಡಿಕೊಳ್ಳುತ್ತಿದೆ. ಇನ್ನು ರಾಮಮಂದಿರ ಉದ್ಘಾಟನೆ ವೇಳೆ ಕಾಂಗ್ರೆಸ್ ನಾಯಕರು ದೂರ ಉಳಿಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅಲ್ಲಿಗೆ ಹೋದರೆ ಮಾತ್ರ ಹಿಂದೂ ಅಲ್ಲ. ಸಿಎಂ ಅವರು ಉದ್ಘಾಟನೆ ಬಳಿಕ ಹೋಗುವುದಾಗಿ ತಿಳಿಸಿದ್ದಾರೆ. ಹಾಗೆಯೇ ಉದ್ಘಾಟನೆ ವೇಳೆ ಹೆಚ್ಚಿನ ಜನರು ಬರಬೇಡಿ ಎಂದು ಸ್ವತಃ ಮೋದಿ ಅವರೇ ಮನವಿ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಶಬರಿ ನೋಡಲು ಓಡೋಡಿ ಬಂದಿದ್ದ ಶ್ರೀರಾಮ: ಸುರೇಬಾನದಲ್ಲಿನ ಶಬರಿಕೊಳ್ಳದ ವಿಶೇಷತೆ ಏನು?