ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಬಂಡೆಗಳು ಉರುಳುತ್ತಿವೆ. ಅಲ್ಲಲ್ಲಿ ಸಣ್ಣದಾಗಿ ಗುಡ್ಡವೂ ಕುಸಿಯುತ್ತಿದೆ. ಘಾಟಿಯ 8 ಮತ್ತು 9ನೇ ತಿರುವಿನಲ್ಲಿ ಇಂಥ ಘಟನೆ ನಡೆದಿದೆ.
ಇದು ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ. ಕಳೆದೆರಡು ದಿನಗಳಿಂದ ಘಾಟಿಯಲ್ಲಿ ಜಡಿ ಮಳೆಯಾಗುತ್ತಿದ್ದು, ರಸ್ತೆಯಲ್ಲಿ ಅಡಿಗಟ್ಟಲೆ ನೀರು ಹರಿಯುತ್ತಿದೆ. ಮಳೆ ನೀರಿನೊಂದಿಗೆ ಗುಡ್ಡ ಕುಸಿದು ರಸ್ತೆಗೆ ಕಲ್ಲುಗಳು ತೇಲಿ ಬರುತ್ತಿವೆ.
ಸಂಬಂಧಪಟ್ಟ ಅಧಿಕಾರಿಗಳು ಚಾರ್ಮಾಡಿ ಘಾಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ವಾಹನ ಸಂಚಾರ ನಡೆಯುತ್ತಿದ್ದು, ಯಾವುದೇ ತೊಂದರೆ ಇಲ್ಲ.
ಆದರೆ, ಎರಡು ಜಿಲ್ಲೆಗಳ ಸಂಪರ್ಕದ ಚಾರ್ಮಾಡಿ ಘಾಟ್ನಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡೇ ಹೋಗುವಂತಹ ಪರಿಸ್ಥಿತಿಯೂ ಇದೆ. ಇದೇ ರೀತಿ ಮಳೆ ಮುಂದುವರೆದರೆ ದೊಡ್ಡ ಮಟ್ಟದಲ್ಲಿ ಅವಘಡ ಸಂಭವಿಸಬಹುದೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕಣ್ಣೆದುರೇ ಬಡಿದ ಸಿಡಿಲು: ಇನ್ನೊಂದೆಡೆ, ಮಲೆನಾಡು ಭಾಗದಲ್ಲಿ ಮಳೆ ಅವಾಂತರ ಮುಂದುವರೆದಿದೆ. ಗ್ರಾಮಸ್ಥರ ಕಣ್ಣೆದುರೇ ಮನೆಗೆ ಸಿಡಿಲು ಬಡಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಮನೆಯ ಮೇಲ್ಛಾವಣಿಗೆ ಸಂಪೂರ್ಣ ಹಾನಿಯಾಗಿದ್ದು, ವಸ್ತುಗಳು ಚಲ್ಲಾಪಿಲ್ಲಿಯಾಗಿವೆ.
ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದಲ್ಲಿ ಈ ಘಟನೆ ಜರುಗಿದೆ. ಗ್ರಾಮದ ಸೀತು ಎಂಬವರ ಮನೆಗೆ ಹಾನಿಯಾಗಿದೆ. ಘಟನೆ ನಡೆದ ವೇಳೆ ಮನೆ ಮಂದಿ ತೋಟದ ಕೆಲಸಕ್ಕೆ ಹೋಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಪ್ರವಾಹದ ರೀತಿ ಹರಿದ ಮಳೆ ನೀರು: ವಿಡಿಯೋ - Charmadi Ghat