ತುಮಕೂರು: ಇಂದು ಬೆಳಗ್ಗೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಗುಬ್ಬಿ ಪಟ್ಟಣದಿಂದ ಹೊರವಲಯದಲ್ಲಿರುವ ಬಿದರೆ -ಗುಬ್ಬಿ ಸಂಪರ್ಕ ರಸ್ತೆಯಲ್ಲಿ ಇರುವ ರೈಲ್ವೆ ಅಂಡರ್ ಪಾಸ್ನಲ್ಲಿ ಅಡಿಗಳಷ್ಟು ನೀರು ತುಂಬಿದ್ದ ಕಾರಣ ಕೆಎಸ್ಆರ್ಟಿಸಿ ಬಸ್ ಸಂಚಾರ ವೇಳೆ ಸಿಲುಕಿಕೊಂಡಿರುವ ಘಟನೆ ನಡೆದಿದೆ.
ಬಸ್ಸಿನ ಒಳಗೆ ಇದ್ದಂತ ಪ್ರಯಾಣಿಕರನ್ನು ಸುರಕ್ಷಿತ ಜಾಗಕ್ಕೆ ತಲುಪಿಸಲು ಅಗ್ನಿಶಾಮಕ ದಳ ಪ್ರಯತ್ನಪಟ್ಟರು. ಇದರಿಂದಾಗಿ ಕೆಲಕಾಲ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಕೋಡಿ ಬಿದ್ದ ಅಮಾನಿ ಕೆರೆ: ನಿನ್ನೆ ರಾತ್ರಿ ಹಾಗೂ ಇಂದು ಬೆಳಗ್ಗೆ ಸುರಿದ ಮಳೆಯಿಂದ ತುಮಕೂರು ನಗರದ ಬಹುದೊಡ್ಡ ಕೆರೆಯಾಗಿರುವ ಅಮಾನಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಅದರಿಂದಾಗಿ ರಸ್ತೆ ಸಂಚಾರ ಬಂದ್ ಮಾಡಲಾಗಿದ್ದು, ಶಿರಾ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಅಪಾರ ಪ್ರಮಾಣದ ನೀರು ಕೆರೆಯಿಂದ ಹೊರ ಹೋಗುತ್ತಿದ್ದು, ಜನರು ವೀಕ್ಷಿಸಲು ಸ್ಥಳಕ್ಕೆ ಬರುತ್ತಿದ್ದಾರೆ.
ಜಿಲ್ಲೆಯ ಮಳೆಹಾನಿಯಾದ ಸ್ಥಳಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊರಟಗೆರೆ ತಾಲೂಕು ಹಾಗೂ ಪಟ್ಟಣದಲ್ಲಿ ಬಿರುಕುಬಿಟ್ಟ ಸೇತುವೆಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಭವಣೆಯನ್ನು ಆಲಿಸಿದರು. ಕೊಚ್ಚಿ ಹೋಗಿರುವ ಸೇತುವೆಗಳನ್ನು ಪುನರ್ ನಿರ್ಮಾಣ ಮಾಡುವ ಕುರಿತಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಹಾಜರಿದ್ದು, ಸಚಿವರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಹೊನ್ನಾಳಿ-ನ್ಯಾಮತಿಯಲ್ಲಿ ಭಾರೀ ಮಳೆ: ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿದ ನೀರು, ಹಳ್ಳದಲ್ಲಿ ಕೊಚ್ಚಿಹೋದ ಎಮ್ಮೆ - heavy rain