ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾರರನ್ನು ಸೆಳೆಯಲು ಆಮಿಷ ನೀಡಿರುವ ಕುರಿತ ಸಾಕ್ಷ್ಯಾಧಾರ ನೀಡದೆ, ಸುಳ್ಳು ಆರೋಪ ಮಾಡಿದ್ದಾರೆ ಎಂದು ಸಿಎಂ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದರು.
ವರುಣ ಕ್ಷೇತ್ರದ ಶಾಸಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೂ ಮುನ್ನ ಮತದಾರರಿಗೆ ಗ್ಯಾರಂಟಿ ಆಮಿಷಗಳನ್ನು ಒಡ್ಡಿ ಗೆದ್ದಿದ್ದಾರೆ ಎಂದು ಆರೋಪಿಸಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಮೈಸೂರಿನ ವರುಣ ಹೋಬಳಿಯ ಕೂಡನಹಳ್ಳಿ ನಿವಾಸಿ ಕೆ.ಎಂ.ಶಂಕರ್ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಮಂಗಳವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠದೆದುರು ಸಿದ್ದರಾಮಯ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ರವಿಮರ್ವ ಕುಮಾರ್, ''ಇಡೀ ಆರೋಪ ಸುಳ್ಳಾಗಿದೆ. ಅರ್ಜಿ ವಜಾಗೊಳಿಸಬೇಕು'' ಎಂದು ಮನವಿ ಮಾಡಿದರು. ''ಅಲ್ಲದೇ, ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಸರನ್ನು ತಪ್ಪಾಗಿ ಬರೆಯಲಾಗಿದೆ. ಅಲ್ಲದೆ, ಚಾಲುಕ್ಯ ಎಂದು ಬರೆಯುವಲ್ಲಿ ಚಾಲೋಕ್ಯ ಎಂದು ಬರೆಯಲಾಗಿದೆ. ಈ ಪರಿ ಅಕ್ಷರ ದೋಷ ಮಾಡಬಹುದೇ'' ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದರು.
ಇದನ್ನೂ ಓದಿ: ಕೆಪಿಟಿಸಿಎಲ್ ನೌಕರರ ವೇತನ, ಪಿಂಚಣಿ ಮರು ನಿಗದಿ; ಆದೇಶ ಎತ್ತಿ ಹಿಡಿದ ಹೈಕೋರ್ಟ್ ದ್ವಿಸದಸ್ಯ ಪೀಠ - High Court
''ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಭಿವೃದ್ಧಿಗೆ ಪೂರಕವಾಗಿರುವ ಗ್ಯಾರಂಟಿಗಳನ್ನು ಚುನಾವಣೆಗೆ ಮೊದಲೇ ಘೋಷಿಸಿ, ಅದನ್ನು ಚಾಲ್ತಿಗೆ ತಂದಿದ್ದಾರೆ. ಇದರಿಂದ ಅದೆಷ್ಟೋ ಜನಕ್ಕೆ ಅನುಕೂಲವಾಗಿದೆ. ಇದನ್ನು ಕೇಂದ್ರ ಸರ್ಕಾರವೂ ಅನುಸರಿಸಿ ಮೋದಿ ಗ್ಯಾರಂಟಿ ಎಂದು ಈ ಬಾರಿ ಚುನಾವಣೆಯಲ್ಲಿ ಘೋಷಿಸಿದೆ. ಇಲ್ಲಿ ಮುಖ್ಯಮಂತ್ರಿಗಳು ಬಿರಾಯಾನಿಯೋ ಇನ್ನಿತರ ವಸ್ತುಗಳನ್ನೋ ನೀಡಿ ಆಮಿಷ ಒಡ್ಡಲಿಲ್ಲ. ಆದರೆ, ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗಿದೆ'' ಎಂದು ಪೀಠಕ್ಕೆ ತಿಳಿಸಿದರು.
ಅರ್ಜಿಯಲ್ಲಿ ಏನನ್ನು ಕೇಳಲಾಗಿದೆ?: ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಮತದಾರರಿಗೆ ಗ್ಯಾರಂಟಿ ಕಾರ್ಡ್ ಯೋಜನೆಗಳ ಮೂಲಕ ಆಮಿಷ ಒಡ್ದಿದೆ. ಈ ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ಅವರ ಸಮ್ಮತಿಯೊಂದಿಗೇ ಪ್ರಕಟಿಸಲಾಗಿದೆ. ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತಹಾಕಲು ಮತದಾರರನ್ನು ಪ್ರೇರೇಪಿಸಿವೆ. ಇದು ಲಂಚಕ್ಕೆ ಸಮವಾದುದು. ಇದು ಪ್ರಜಾಪ್ರತಿನಿಧಿ ಕಾಯ್ದೆ ವಿವಿಧ ಸೆಕ್ಷನ್ಗಳ ಅಡಿ ಅಪರಾಧ. ಆದ್ದರಿಂದ, ಅಕ್ರಮಗಳನ್ನು ಎಸಗುವ ಮೂಲಕ ಶಾಸಕರಾಗಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಪಟುವಿಗೆ 60 ನಿಮಿಷದಲ್ಲಿ ಪಾಸ್‌ಪೋರ್ಟ್: ಹೈಕೋರ್ಟ್ ಮೆಚ್ಚುಗೆ - High Court